ಮೌಲ್ಯಮಾಪನ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡ ತನ್ನ ಮೈಸೂರು ಕ್ಯಾಂಪಸ್ ನ 700 ಟ್ರೈನಿಗಳನ್ನು ವಜಾಗೊಳಿಸಲು ಇನ್ಫೋಸಿಸ್ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ 700 ಅಭ್ಯರ್ಥಿಗಳು ಕಳೆದ ನಾಲ್ಕು ತಿಂಗಳುಗಳಿಂದ ತರಬೇತಿಯಲ್ಲಿದ್ದರು. ಬಹುತೇಕರು 2022ರ ಇಂಜಿನಿಯರಿಂಗ್ ಪದವೀಧರರಾಗಿದ್ದು, 3 ರಿಂದ 3.5 ಲಕ್ಷ ಪ್ಯಾಕೇಜ್ ನೀಡಿ ನೇಮಕ ಮಾಡಿಕೊಳ್ಳಲಾಗಿತ್ತು.
2024ರ ಅಕ್ಟೋಬರ್‌ನಲ್ಲಿ ಹೀಗೆ ನೇಮಕ ಮಾಡಿಕೊಂಡವರಲ್ಲಿ ಅರ್ಧದಷ್ಟು ಜನರನ್ನು ಕೆಲಸದಿಂದ ತೆಗೆದು ಹಾಕಲು ಕಂಪನಿ ಹೊರಟಿದೆ. ಇವರನ್ನೆಲ್ಲ ಸುಮಾರು ಎರಡೂವರೆ ವರ್ಷಗಳ ಕಾಲ ಕಾಯುವಂತೆ ಮಾಡಿ ನಂತರ ಇನ್ಫೋಸಿಸ್ ನೇಮಕ ಮಾಡಿಕೊಂಡಿತ್ತು.
ಟ್ರೇನಿಗಳ ವಜಾ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇನ್ಫೋಸಿಸ್, “ನಮ್ಮ ಸಂಸ್ಥೆಯಲ್ಲಿ ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನಮ್ಮ ಮೈಸೂರು ಕ್ಯಾಂಪಸ್‌ನಲ್ಲಿ ಪ್ರಾಥಮಿಕ ತರಬೇತಿ ಪಡೆದ ನಂತರ ಎಲ್ಲ ಹೊಸಬರು ಆಂತರಿಕ ಮೌಲ್ಯಮಾಪನಗಳಲ್ಲಿ ಉತ್ತೀರ್ಣರಾಗಬೇಕು. ಹೊಸಬರಿಗೆ ಇದರಲ್ಲಿ ಉತ್ತೀರ್ಣರಾಗಲು ಮೂರು ಅವಕಾಶಗಳನ್ನು ನೀಡಲಾಗುತ್ತದೆ. ಇದರಲ್ಲಿ ವಿಫಲವಾದಲ್ಲಿ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ಅವರ ಜೊತೆಗಿನ ಒಪ್ಪಂದದಲ್ಲಿಯೂ ಇದನ್ನು ಉಲ್ಲೇಖಿಸಲಾಗಿರುತ್ತದೆ. ಈ ಪ್ರಕ್ರಿಯೆ ಎರಡು ದಶಕಗಳಿಂದಲೂ ಚಾಲ್ತಿಯಲ್ಲಿದೆ. ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪ್ರತಿಭೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಯನ್ನು ಹೊಂದಿದ್ದೇವೆ,” ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ, ‘ಇದು ಅನ್ಯಾಯ. ಪರೀಕ್ಷೆಗಳು ತುಂಬಾ ಕಠಿಣವಾಗಿದ್ದವು ಮತ್ತು ನಮ್ಮನ್ನು ಅನುತ್ತೀರ್ಣ ಮಾಡಲೆಂದೇ ಹೀಗೆ ಮಾಡಲಾಗಿತ್ತು. ನಮ್ಮ ಭವಿಷ್ಯಕ್ಕೆ ಕತ್ತಲು ಕವಿದಿದ್ದು, ತರಬೇತಿ ಪಡೆದ ಅನೇಕರು ದಿಕ್ಕು ಕಾಣದಾಗಿದ್ದಾರೆ’ ಎಂದು ಉದ್ಯೋಗ ಕಳೆದುಕೊಂಡವರು ನೋವು ತೋಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೈಕ್ರೋ ಫೈನಾನ್ಸ್; ಜನಪರ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲರ ನಡೆ ಸರ್ವಥಾ ಸರಿಯಲ್ಲ
ತರಬೇತಿ ಪಡೆದವರು ಮೊಬೈಲ್ ಫೋನ್‌ಗಳನ್ನು ಒಯ್ಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಬೌನ್ಸರ್‌ಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿತ್ತು ಎನ್ನಲಾಗಿದೆ. ಆದರೆ, ಇನ್ಫೋಸಿಸ್ ಇದನ್ನು ನಿರಾಕರಿಸಿದ್ದು, ಸಂಜೆ 6 ಗಂಟೆಯೊಳಗೆ ಆವರಣವನ್ನು ಖಾಲಿ ಮಾಡುವಂತೆ ಟ್ರೇನಿಗಳಿಗೆ ಸೂಚಿಸಿದೆ ಎಂದು ಹೇಳಲಾಗಿದೆ.
ಇನ್ಫೋಸಿಸ್ ಕ್ರಮದ ವಿರುದ್ಧ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅಧಿಕೃತ ದೂರು ಸಲ್ಲಿಸುತ್ತಿರುವುದಾಗಿ ನಾಸೆಂಟ್ ಇನ್ಫೋರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (ಎನ್‌ಐಟಿಇಎಸ್) ಹೇಳಿದೆ. ಇನ್ಫೋಸಿಸ್ ವಿರುದ್ಧ ತಕ್ಷಣದ ಮಧ್ಯಸ್ಥಿಕೆ ಮತ್ತು ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.
“ಈ ಕಾರ್ಪೊರೇಟ್ ಶೋಷಣೆಯನ್ನು ಮುಂದುವರಿಯಲು ಬಿಡುವುದಿಲ್ಲ. ಭಾರತೀಯ ಐಟಿ ಕಾರ್ಮಿಕರ ಹಕ್ಕುಗಳು ಮತ್ತು ಘನತೆಯನ್ನು ಎತ್ತಿಹಿಡಿಯಲು ಸರ್ಕಾರವು ತ್ವರಿತ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ,” ಎಂದು ಎನ್‌ಐಟಿಇಎಸ್‌ನ ಹರ್ಪ್ರೀತ್ ಸಿಂಗ್ ಸಲುಜಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು ಕೈಗಾರಿಕಾ ವ್ಯಜ್ಯ ಕಾಯ್ದೆ 1947ರ ಉಲ್ಲಂಘನೆಯಾಗಿದ್ದು, ಐಟಿ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಎನ್‌ಐಟಿಇಎಸ್ ಸರ್ಕಾರದ ಮಧ್ಯಸ್ಥಿಕೆಯನ್ನು ಕೋರಿದೆ.
