ದಶಕಗಳ ಬೇಡಿಕೆಯಾದ ಚಿತ್ರದುರ್ಗ ಜಿಲ್ಲೆಯ ಪರಶುರಾಂಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂಬ ಒಂದೇ ಅಜೆಂಡಾದೊಂದಿಗೆ ಅಖಂಡ ಕರ್ನಾಟಕ ರೈತ ಸಂಘ ಹೋರಾಟ ಮಾಡಲಿದೆ ಎಂದು ಮುಖಂಡ ಸೋಮಗುದ್ದು ರಂಗಸ್ವಾಮಿ ತಿಳಿಸಿದರು.
ಚಳ್ಳಕೆರೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಹಲವು ದಶಕಗಳಿಂದ ತಾಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆ ಹೊಂದಿರುವ ಪರಶುರಾಂಪುರವನ್ನು ಎಲ್ಲ ಸರ್ಕಾರಗಳು ಕಡೆಗಣಿಸುತ್ತಾ ಬಂದಿದ್ದು, ತಾಲೂಕು ಕೇಂದ್ರವಾಗಿ ಘೋಷಿಸಿಲ್ಲ. ಈ ದಿಸೆಯಲ್ಲಿ ತಾಲೂಕು ಕೇಂದ್ರವಾಗಿ ಘೋಷಿಸುವಂತೆ ಫೆಬ್ರವರಿ ಹತ್ತರಂದು ಕೊಲ್ಲಾಪುರದಮ್ಮ ದೇವಸ್ಥಾನದಿಂದ ಬೆಳಿಗ್ಗೆ 11ಕ್ಕೆ ರ್ಯಾಲಿ ಮೂಲಕ ಅಖಂಡ ಕರ್ನಾಟಕ ರೈತ ಸಂಘ ಬೃಹತ್ ಚಳುವಳಿ ಆರಂಭಿಸಲಿದೆ” ಎಂದು ತಿಳಿಸಿದರು.
“ಪರಶುರಾಂಪುರ ಹೋಬಳಿ ಕೇಂದ್ರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವಂತೆ ವಿವಿಧ ಸಂಘಟನೆಗಳು ಒತ್ತಾಯ ಮಾಡಿದ್ದರೂ ಸರ್ಕಾರಗಳು ಗಮನಹರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಖಂಡ ಕರ್ನಾಟಕ ರೈತ ಸಂಘ ನಡೆಸುತ್ತಿರುವ ಚಳುವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು. ಟ್ಯಾಕ್ಟರ್, ಎತ್ತಿನಗಾಡಿ ಬೈಕ್, ಆಟೋಗಳೊಂದಿಗೆ ಸಹ ಹೆಚ್ಚಿನ ಜನ ಹೋರಾಟದಲ್ಲಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದರು.

“ಪ್ರಮುಖ ಬೀದಿಗಳಲ್ಲಿ ಬೃಹತ್ ರ್ಯಾಲಿ ನಡೆಸುವ ಮೂಲಕ ಶಾಸಕರಿಗೆ ಮನವಿ ಸಲ್ಲಿಸಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಪ್ರಾದೇಶಿಕವಾಗಿ, ಸಾಮಾಜಿಕವಾಗಿ ಎಲ್ಲ ಅರ್ಹತೆ ಹೊಂದಿರುವ ಪರಶುರಾಂಪುರವನ್ನು ತಾಲೂಕು ಕೇಂದ್ರವಾಗಿ ಘೋಷಿಸಲು ಒತ್ತಾಯಿಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಹಂಪಿ ಉತ್ಸವದಲ್ಲಿ ಹೊಸಬರಿಗೆ ಅವಕಾಶ ನೀಡುವಂತೆ ವಿ ಬಿ ಮಲ್ಲಪ್ಪ ಒತ್ತಾಯ
“ಹದಿನೈದು ವರ್ಷಗಳ ಹಿಂದೆಯೇ ಪರಶುರಾಂಪುರ ತಾಲೂಕು ಕೇಂದ್ರವಾಗಬೇಕಿತ್ತು, ಆದರೆ ರಾಜಕೀಯ ಮೇಲಾಟಗಳಿಂದ ತಾಲೂಕು ಕೇಂದ್ರದ ಕನಸು ಹಾಗೆಯೇ ಉಳಿದಿದೆ. ಈಗ ತಾಲೂಕು ಕೇಂದ್ರಕ್ಕಾಗಿ ಒತ್ತಾಯಿಸಿ, ರೈತರ ಸಂಘ ಹೋರಾಟ ನಡೆಸುತ್ತಿದೆ. ಈ ಹೋರಾಟದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ವರ್ತಕರು, ಎಲ್ಲಾ ಪಕ್ಷಗಳ ಕಾರ್ಯಕರ್ತರು, ಸಂಘ-ಸಂಸ್ಥೆಗಳು ಭಾಗವಹಿಸಬೇಕು. ಆ ಮೂಲಕ ಪರಶುರಾಂಪುರವನ್ನು ತಾಲೂಕು ಕೇಂದ್ರವಾಗಿ ಘೋಷಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು” ಎಂದು ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರಾದ ನಾಗರಾಜ್, ಕೃಷ್ಣಪ್ಪ, ರುದ್ರಪ್ಪ, ಶಿವಣ್ಣ, ವೆಂಕಟರಮಣಪ್ಪ ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಹಾಜರಿದ್ದರು.
