ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಧಾರವಾಡದ ನಿರಂಜನ ವಿಚಾರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಫೆ. 9ರಂದು ನಿರಂಜನರ ಜನ್ಮಶತಮಾನೋತ್ಸವ ನೆನಪಿನಲ್ಲಿ ನಿರಂಜನರ ಬದುಕು-ಸಾಹಿತ್ಯ ಒಂದು ಚಿಂತನೆ ಶೀರ್ಷಿಕೆ ಅಡಿಯಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದಾರೆ.
ನಿರಂಜನರು 21 ಕಾದಂಬರಿ, 13 ಕಥಾ ಸಂಕಲನ, 10 ಅನುವಾದ ಸಾಹಿತ್ಯ ಹಾಗೂ 68 ಸಂಪಾದಿತ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರ ಸ್ಮರಣೆಗೆ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ರಂಗಾಯಣ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದ್ದು, ಡಾ. ಸಿ ವೀರಣ್ಣ ಉದ್ಘಾಟಿಸಲಿದ್ದಾರೆ.. ಸಾಹಿತಿ ಡಾ. ರಾಜೇಂದ್ರ ಚನ್ನಿ ಅತಿಥಿಗಳಾಗಿ ಆಗಮಿಸಲಿದ್ದು, ಸಾಹಿತ್ಯ ಅಕಾಡೆಮಿ ಸದಸ್ಯ ಅರ್ಜುನ ಗೊಳಸಂಗಿ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಕೆರಿಯಪ್ಪ ಎನ್, ಶಶಿಕಲಾ ಹುಡೇದ, ಎಚ್.ಜಿ. ದೇಸಾಯಿ, ಕೆ. ರಾಮರೆಡ್ಡಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸಗನ್ನಡ ಪ್ರಗತಿಶೀಲ ಬರಹಗಾರರಲ್ಲಿ ನಿರಂಜನ ಕೂಡ ಒಬ್ಬರು. ಕ್ರಿಯಾಶೀಲತೆ ಹಾಗೂ ಬೌದ್ಧಿಕತೆಗೆ ಅವರು ಹೆಸರಾಗಿದ್ದಾರೆ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ನಿರಂಜನ ಜೀವನ-ದರ್ಶನ ಗೋಷ್ಠಿಯಲ್ಲಿ ನಿರಂಜನ ಮತ್ತು ಪ್ರಾದೇಶಿಕತೆ ವಿಷಯ ಬಗ್ಗೆ ಡಾ. ರಾಜೇಂದ್ರ ಚೆನ್ನಿ, ಪ್ರಗತಿಶೀಲ ಸಾಹಿತ್ಯ ಮತ್ತು ನಿರಂಜನ ವಿಷಯದ ಬಗ್ಗೆ ಡಾ. ಬಿ.ಆರ್. ಮಂಜುನಾಥ ಮಾತನಾಡಲಿದ್ದಾರೆ. ಪ್ರಗತಿಪರ ಚಳವಳಿಗಳ ಒಡನಾಟ ಕುರಿತು ಡಾ. ರಂಗನಾಥ ಕಂಟನಕುಮಟೆ ಮಾತನಾಡಲಿದ್ದು, ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2.30ಕ್ಕೆ ನಿರಂಜನ ಕಾದಂಬರಿ ಗೋಷ್ಠಿ ನಡೆಯಲಿದೆ ಎಂದು ಹೇಳಲಾಗಿದೆ.
ಸನತಕುಮಾರ್ ಬೆಳಗಲಿ ಸಾಯಂಕಾಲ 5ಗಂಟೆಗೆ ನಡೆಯುವ ಸಮಾರೋಪದ ಕುರಿತು ಮಾತನಾಡುತ್ತಾರೆ. ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸುವರು. ಡಾ. ವೆಂಕನಗೌಡ ಪಾಟೀಲ ಕಾರ್ಯಕ್ರಮದಲ್ಲಿ ಇರುವರು ಎಂದು ತಿಳಿಸಿದ್ದಾರೆ.