ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ. ಈಗಾಗಲೇ ಬಹುತೇಕ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 48 ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ. ಮೂರನೇ ಬಾರಿಗೆ ಗೆದ್ದು ಸರ್ಕಾರ ರಚಿಸುವ ನಿರೀಕ್ಷೆಯಲ್ಲಿದ್ದ ಎಎಪಿ 22 ಸ್ಥಾನಗಳೊಂದಿಗೆ ಹೀನಾಯ ಸೋಲು ಕಂಡಿದೆ. ಚುನಾವಣೆಯಲ್ಲಿ ಎಎಪಿಯನ್ನು ಮುನ್ನಡೆಸುತ್ತಿದ್ದ ಘಟಾನುಘಟಿ ನಾಯಕರೇ ಸೋಲುಂಡಿದ್ದಾರೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ದೆಹಲಿ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಸೇರಿದಂತೆ ಹಲವಾರು ಪ್ರಮುಖ ನಾಯಕರು ಸೋಲುಂಡಿದ್ದಾರೆ. ದೆಹಲಿ ಅಧಿಕಾರದಿಂದ ಹೊರಗುಳಿಯುವುದು ಮಾತ್ರವಲ್ಲದೆ, ಜನಪ್ರತಿನಿಧಿಗಳ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.
ಭ್ರಷ್ಟಾಚಾರ ಆರೋಪ, ಬಂಧನ, ಜೈಲುವಾಸ ಅನುಭವಿಸಿದ್ದ ಅರವಿಂದ ಕೇಜ್ರಿವಾಲ್, ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ, ಮತ್ತೆ ಜನಾಭಿಪ್ರಾಯ ಪಡೆದ ಮುಖ್ಯಮಂತ್ರಿ ಆಗುತ್ತೇನೆಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಕೇಜ್ರಿವಾಲ್ ಅವರು ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋಲುಂಡಿದ್ದಾರೆ.
Delhi CM Atishi won the election from the Kalka Ji constituency against BJP’s candidate Ramesh Bidhuri. pic.twitter.com/WNhD1sU8Fw
— Gagandeep Singh (@Gagan4344) February 8, 2025
ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿ 2 ವರ್ಷ ಜೈಲುವಾಸ ಅನುಭವಿಸಿ, ಹೊರಬಂದಿದ್ದ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರು ಜಂಗ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರು ಬಿಜೆಪಿಯ ತರವಿಂದರ್ ಸಿಂಗ್ ವರ್ಮಾ ವಿರುದ್ಧ ಸೋಲು ಕಂಡಿದ್ದಾರೆ. ಎಎಪಿ ಕೋರ್ ಕಮಿಟಿಯ ಸದಸ್ಯರಾದ ಸತ್ಯೇಂದ್ರ ಜೈನ್ ಅವರೂ ಕೂಡ ಸೋಲುಂಡಿದ್ದಾರೆ.
ಇನ್ನು, ಕೇಜ್ರಿವಾಲ್ ರಾಜೀನಾಮೆಯ ಬಳಿಕ ದೆಹಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದ, ಕೇಜ್ರಿವಾಲ್ ಜೈಲಿನಲ್ಲಿದ್ದಾಗ ಎಎಪಿಯನ್ನು ಮುನ್ನಡೆಸಿದ್ದ ಆತಿಶಿ ಅವರು ಕಲ್ಕಾಜಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಮತ್ತೆ, ವಿಧಾನಸಭೆಗೆ ಪ್ರವೇಶಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಅವರು ಈಗಾಗಲೇ ಸೋತಿರುವುದರಿಂದ ಆತಿಶಿಯವರು ದೆಹಲಿಯ ಮುಂದಿನ ವಿಪಕ್ಷ ನಾಯಕಿಯಾಗುವ ಸಾಧ್ಯತೆ ಇದೆ.