ಭೂಮ್ತಾಯಿ | ಹವಾಮಾನ ಬದಲಾವಣೆ ವೈಪರೀತ್ಯದಿಂದ ತತ್ತರಿಸಿರುವ ದೇಶಗಳ ಪೈಕಿ 7ನೇ ಸ್ಥಾನದಲ್ಲಿದೆ ಭಾರತ!

Date:

Advertisements

ಅನೇಕ ವರದಿಗಳ ಪ್ರಕಾರ ಹವಾಮಾನ ಬದಲಾವಣೆಯ ವೈಪರೀತ್ಯಗಳಿಂದ  ದೊಡ್ಡ ಮಟ್ಟದಲ್ಲಿ ತತ್ತರಿಸಿರುವ  ದೇಶಗಳ ಪೈಕಿ ಭಾರತ ಏಳನೇ ಸ್ಥಾನದಲ್ಲಿದೆ. ಸಮುದ್ರದ  ನೀರಿನ ಮಟ್ಟ ಏರಿಕೆ, ಜೀವವೈವಿಧ್ಯತೆಯ ನಷ್ಟ ಮತ್ತು ಹೆಚ್ಚುತ್ತಿರುವ ನೀರಿನ ಕೊರತೆಯಂತಹ ʼನಿಧಾನಗತಿಯಲ್ಲಿʼ ಕಂಡುಬರುತ್ತಿರುವ ವಿದ್ಯಮಾನಗಳಿಗೆ ಹವಾಮಾನ ಬದಲಾವಣೆಯೇ ಕಾರಣ ಎಂಬುದನ್ನು ವರದಿಗಳು ಒತ್ತಿ ಹೇಳಿವೆ

ಈಗಷ್ಟೇ ಸರಿದು ಹೋದ 2024ನೇ ವರ್ಷವು ಹವಾಮಾನಕ್ಕೆ ಸಂಬಂಧಿಸಿದ ಅನೇಕ ನಕಾರಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು. ಹವಾಮಾನ ಬದಲಾವಣೆಯ ವೈಪರೀತ್ಯಗಳು ದಿನೇ ದಿನೇ ಮನುಕುಲವನ್ನು ಹೊಸ ಹೊಸ ಬಿಕ್ಕಟ್ಟಿಗೆ ಸಿಲುಕಿಸುತ್ತಿರುವುದು ಎಲ್ಲರ ಗಮನಕ್ಕೂ ಬರುತ್ತಿದೆ. ಜಾಗತಿಕ ಪರಿಸರ ಸಂಸ್ಥೆಗಳು 2024ರಲ್ಲಿ ಭೂಗ್ರಹ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ತಾಪಮಾನ ಎದುರಿಸಿತು ಎಂದು  ಘೋಷಿಸಿವೆ. ವಿಶ್ವಸಂಸ್ಥೆಯ ವತಿಯಿಂದ ಅಜೆರ್ಬೈಜಾನ್ ದೇಶದ  ಬಾಕುವಿನಲ್ಲಿ ನಡೆದ ಹವಾಮಾನ ಬದಲಾವಣೆಯ ಕುರಿತಾದ ಜಾಗತಿಕ ಸಮಾವೇಶದಲ್ಲಿ ಹವಾಮಾನ ಬದಲಾವಣೆಯ ವಿಕೋಪಗಳನ್ನು ಎದುರಿಸಲು ಮೀಸಲಾದ ವಿಶೇಷ ನಿಧಿಯನ್ನು ಸಂಗ್ರಹಿಸುವ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದವು.

ಅನೇಕ ವರದಿಗಳ ಪ್ರಕಾರ ಹವಾಮಾನ ಬದಲಾವಣೆಯ ವೈಪರೀತ್ಯಗಳಿಂದ  ದೊಡ್ಡ ಮಟ್ಟದಲ್ಲಿ ತತ್ತರಿಸಿರುವ  ದೇಶಗಳ ಪೈಕಿ ಭಾರತ ಏಳನೇ ಸ್ಥಾನದಲ್ಲಿದೆ. ಸಮುದ್ರದ  ನೀರಿನ ಮಟ್ಟ ಏರಿಕೆ, ಜೀವವೈವಿಧ್ಯತೆಯ ನಷ್ಟ ಮತ್ತು ಹೆಚ್ಚುತ್ತಿರುವ ನೀರಿನ ಕೊರತೆಯಂತಹ “ನಿಧಾನಗತಿಯಲ್ಲಿ” ಕಂಡುಬರುತ್ತಿರುವ ವಿದ್ಯಮಾನಗಳಿಗೆ ಹವಾಮಾನ ಬದಲಾವಣೆಯೇ ಕಾರಣ ಎಂಬುದನ್ನು ವರದಿಗಳು  ಒತ್ತಿ ಹೇಳಿವೆ. ಇದು ಇದೇ ರೀತಿ ಮುಂದುವರೆದರೆ ಜೀವನ, ಜೀವನೋಪಾಯ ಮತ್ತು ಆರ್ಥಿಕತೆಯ ಮೇಲೆ ನೇರ ದುಷ್ಪರಿಣಾಮ ಬೀರಬಲ್ಲುದು ಎಂಬ ಎಚ್ಚರಿಕೆಯ ಕರೆಗಂಟೆಯನ್ನೂ ನೀಡಲಾಗಿದೆ.

Advertisements

ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ನಮ್ಮ ದೇಶದಲ್ಲಿ ಈ ವರ್ಷದ ಆರ್ಥಿಕ ಸಮೀಕ್ಷೆ-2025 ಮಂಡಿಸಲಾಗಿದೆ. ಆದರೆ ಪ್ರತಿವರ್ಷ ನಮ್ಮ ಸಂಸತ್ತಿನಲ್ಲಿ ಮಂಡಿಸಲಾಗುವ ಆರ್ಥಿಕ ಸಮೀಕ್ಷೆಯ ಕುರಿತಾದ ವಿಶ್ಲೇಷಣೆ ಸದಾ ಸುತ್ತುವುದು ಜಿಡಿಪಿ, ತಲಾ ವರಮಾನ, ಅಭಿವೃದ್ಧಿ ಇತ್ಯಾದಿಗಳ ಬಗ್ಗೆ ಮಾತ್ರ.  ಇವುಗಳ ಹೊರತಾಗಿ ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗುವ ಬೇರಾವುದೇ ವಿಷಯಗಳ ಬಗ್ಗೆ “ಮುಖ್ಯವಾಹಿನಿಗಳ” ಮಾಧ್ಯಮಗಳು ಚರ್ಚಿಸುವುದಿಲ್ಲ. ಈ ಬಾರಿ ಮಂಡಿಸಲಾದ ಆರ್ಥಿಕ ಸಮೀಕ್ಷೆ ಕುರಿತ ವರದಿ-ವಿಶ್ಲೇಷಣೆಗಳು ಕೂಡಾ ಇದರಿಂದ ಹೊರತಾಗಿಲ್ಲ.

ಆದರೆ ಈ ಬಾರಿಯ ಆರ್ಥಿಕ ಸಮೀಕ್ಷೆಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಕುತೂಹಲಕಾರಿ ವಿಶ್ಲೇಷಣೆಗಳಿವೆ. ಈ ಆರ್ಥಿಕ ಸಮೀಕ್ಷೆಯ ವರದಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಜಾಗತಿಕ ಮಟ್ಟದಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳು ಮುಂದುವರೆದ ದೇಶಗಳ ಸಾಲಿನಲ್ಲಿ ನಿಲ್ಲುವ ಕನಸು ಕಾಣುತ್ತಿರುವ ಅಭಿವೃದ್ಧಿಶೀಲ ದೇಶಗಳನ್ನು ಯಾವ ರೀತಿಯಲ್ಲಿ ಹತ್ತಿಕ್ಕುತ್ತಿವೆ ಎಂಬುದನ್ನು ವಿಶ್ಲೇಷಿಸುತ್ತದೆ. ಇಂಧನ ಸಂರಕ್ಷಣೆಯ ಗುರಿಯನ್ನು ಅಭಿವೃದ್ಧಿಹೊಂದಿದ ದೇಶಗಳು ತಮಗೆ ಅನುಕೂಲ ಸಿಂಧುವಾಗಿ ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ಚರ್ಚಿಸುತ್ತದೆ.  

ಈ ಆತಂಕಕಾರಿ ವಿಷಯಗಳನ್ನು ಹೊರಗೆಡಹುವ ಜೊತೆ ಜೊತೆಗೆ ಈ ಆರ್ಥಿಕ ಸಮೀಕ್ಷೆ 2025: ಹವಾಮಾನ ಬದಲಾವಣೆಯ ವೈಪರೀತ್ಯಗಳನ್ನು ಎದುರಿಸಲು ಅಭಿವೃದ್ಧಿ ಹೊಂದಿದ ದೇಶಗಳು  ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಬಲಿಪಶುಗಳನ್ನಾಗಿ ಮಾಡುತ್ತಿವೆ ಎಂಬುದನ್ನೇ ವೈಭವೀಕರಿಸುತ್ತಿವೆ; ʻನೆಟ್‌ ಝೀರೋʼ ಮಂತ್ರವನ್ನು ಜಪಿಸುತ್ತಿದ್ದರೂ ಸುಸ್ಥಿರ ಪರಿಸರ ನಿರ್ಮಾಣ ನಿಟ್ಟಿನಲ್ಲಿ ತಾನು ಯಾವುದೇ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳದೆ, ಹವಾಮಾನ ಬದಲಾವಣೆಯನ್ನು ಎದುರಿಸುವ ಉಪಕ್ರಮಗಳಾಗಿ ಅದೇ ಅದೇ ಹಳೇ  ಯೋಜನೆಗಳನ್ನೇ ಹೊಸ ಹೆಸರಿನಲ್ಲಿ ಪರಿಚಯಿಸುತ್ತ ಜನರನ್ನು ದಿಕ್ಕು ತಪ್ಪಿಸುತ್ತಿದೆಯೇ ಎಂಬ ಸಂದೇಹವನ್ನೂ ಹುಟ್ಟು ಹಾಕುತ್ತಿದೆ.

ಆರ್ಥಿಕ ಸಮೀಕ್ಷೆಯ ಪ್ರಕಾರ 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರ್ಪಡೆಗೊಳ್ಳಬೇಕು ಎಂದು ಮಹತ್ವಾಕಾಂಕ್ಷೆ ಹೊಂದಿರುವ ಭಾರತ ಅದು ಒಳಗೊಳ್ಳುವಿಕೆ ಹಾಗು ಸುಸ್ಥಿರತೆಯ ದಾರಿಯಲ್ಲಿಯೇ ಸಾಗಬೇಕೆಂಬ ಸದಾಶಯವನ್ನೂ ಹೊಂದಿದೆ. ಆದರೆ ಸುಸ್ಥಿರತೆಯ ದಾರಿಯಲ್ಲಿಯೇ ಸಾಗಬೇಕೆಂಬ ಗುರಿ ಹೊಂದಿರುವ, ವಿಶ್ವದಲ್ಲಿಯೇ  ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಹೊಂದಿರುವ ದೇಶವಾದ ಭಾರತದಲ್ಲಿ  ಹೊರಹೊಮ್ಮುತ್ತಿರುವ ಇಂಗಾಲದ ದರ ಜಾಗತಿಕ ಸರಾಸರಿ ದರಕ್ಕೆ  ಹೋಲಿಸಿದಾಗ 1/3ನೇ ಭಾಗದಷ್ಟಿದೆ. 2050ರ ವೇಳೆಗೆ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಭಾರತದ ಪಾಲು ಶೇಕಡಾ 15ಕ್ಕೆ ತಲುಪಲಿದೆ.

Global Warming or Climate Change

ಸುಸ್ಥಿರತೆಯ ಮಾರ್ಗದಲ್ಲಿ ನಡೆಯಬೇಕು ಎಂಬುದು ಕೇವಲ ಕಾಗದಗಳಲ್ಲಿನ ಆಶಯವಾಗಿ ಉಳಿಯದೇ ಕೃತಿಯಲ್ಲಿ ಕಾಣಬೇಕು ಎಂದಾದರೆ ಹೊರಹೊಮ್ಮುತ್ತಿರುವ ಇಂಗಾಲದ ಪ್ರಮಾಣವನ್ನು ತಗ್ಗಿಸಲು ಬದಲೀ ಮಾರ್ಗಗಳನ್ನೂ ಹುಡುಕಬೇಕಾಗುತ್ತದೆ. 2030ರ ಸುಸ್ಥಿರ ಅಭಿವೃದ್ಧಿಯ ಏಕಮೇವ ಗುರಿಯು ಇಂಧನದ ಸಂರಕ್ಷಣೆ. ಈ ನಿಟ್ಟಿನಲ್ಲಿ ಇಂಗಾಲದ ಹೊರಹೊಮ್ಮುವಿಕೆಯನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ದೇಶವು ನವೀಕರಿಸಬಹುದಾದ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಕುರಿತು ಚಿಂತಿಸಬಹುದು. ಆದರೆ ಈ ನಿಟ್ಟಿನಲ್ಲಿ ಸಂಪನ್ಮೂಲಗಳ  ಪರಿಣಾಮಕಾರಿ ಬಳಕೆ ಮತ್ತು ಬಳಕೆಯ ವಿಸ್ತರಣೆಗೆ, ಅದರ ಸಂಗ್ರಹಣೆಗೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಖನಿಜಗಳ ಸೀಮಿತತೆಯಿಂದಾಗಿ ದೇಶದಲ್ಲಿ ಎದುರಾಗಬಹುದಾದ ಸವಾಲುಗಳನ್ನು ವರದಿಯು ಬೊಟ್ಟು ಮಾಡುತ್ತದೆ.

ಕಳೆದ ಶತಮಾನದಿಂದ ಇಲ್ಲಿಯವರೆಗೂ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವುದರ ಹಿಂದೆ ವಾಣಿಜ್ಯ ಹಿತಾಸಕ್ತಿಗಳೇ ಕಾರ್ಯನಿರ್ವಹಿಸಿವೆ. ಇಂದಿಗೂ ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಹಿಂದೆ ಇಂಧನದ ಸಂರಕ್ಷಣೆಯತ್ತ ಕಣ್ಣು ನೆಟ್ಟಿರುವ ವಾಣಿಜ್ಯ ಹಿತಾಸಕ್ತಿಗಳೆ ಇವೆ ಎಂಬ ಅಂಶವನ್ನು ಈ ವರದಿಯು ಮುನ್ನಲೆಗೆ ತರುತ್ತದೆ.

ಜಿ-7 ದೇಶಗಳ ಇತ್ತೀಚಿನ ಅಂಕಿ ಅಂಶಗಳು ಈ ದೇಶಗಳು ಇಂಧನದ ಮೂಲವಾಗಿ ಪ್ರಮುಖವಾಗಿ ಪಳೆಯುಳಿಕೆ ಇಂಧನವನ್ನೇ ಅವಲಂಬಿಸಿವೆ. ಕಲ್ಲಿದ್ದಲು ಮತ್ತು ತೈಲ ಇಂಧನಕ್ಕೆ ಬದಲಾಗಿ ಅನಿಲ ಆಧಾರಿತ ಇಂಧನದ ಮೂಲವನ್ನು ಆಶ್ರಯಿಸಿವೆ ಎನ್ನುವ ಅಂಶವನ್ನು ವರದಿ ಬಹಿರಂಗಗೊಳಿಸುತ್ತದೆ. ಹೀಗೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದಾಗ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹವಾಮಾನ ಬದಲಾವಣೆಯ ಪರಿಣಾಮಗಳು ಸಾಕಷ್ಟು ಸವಾಲುಗಳನ್ನು ಒಡ್ಡುತ್ತವೆ. ಇಂಗಾಲದ ಹೊರಸೂಸುವಿಕೆಯಲ್ಲಿ ತಮ್ಮ ಪಾಲು ಸಾಕಷ್ಟು ಕಡಿಮೆ ಇದ್ದರೂ, ಅಭಿವೃದ್ಧಿಶೀಲ ದೇಶಗಳ ಮೇಲೆ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸುವ ಹೊರೆಯನ್ನು ಹೇಗೆ ಹೊರಿಸಲಾಗುತ್ತದೆ ಎಂಬುದನ್ನು ವರದಿಯು ವಿವರಿಸುತ್ತದೆ.

ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕ 0.9ದೊಂದಿಗೆ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲಬೇಕಾದರೆ ಪ್ರತಿ ವರ್ಷ 45.7 ನಿಂದ 75 ಗಿಗಾ ಜೌಲ್ಸ್‌ ನಷ್ಟು ತಲಾವಾರು ಇಂಧನದ ಅಗತ್ಯ ಇದೆ ಎಂದು ಭಟ್ಟಾಚಾರ್ಯ ಮತ್ತು ಇತರ ಪರಿಣತರು ಅಂದಾಜು ಮಾಡಿದ್ದಾರೆ. ಆದರೆ ಇಂಧನದ ಬಳಕೆಯ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಹಣಕಾಸು ವರ್ಷ 2024ರಲ್ಲಿ ಬಳಸಲಾದ ತಲವಾರು ಇಂಧನದ ಪ್ರಮಾಣ ಕೇವಲ 16.7 ಗಿಗಾ ಜೌಲ್‌. ಇಲ್ಲಿ ವರದಿಯು ನಮ್ಮ ವಿಕಸಿತ ಭಾರತ ಗುರಿಯನ್ನು ಸಾಧಿಸಬೇಕಾದರೆ ಬೇಕಾಗುವ ಇಂಧನದ ಪ್ರಮಾಣಕ್ಕೂ, ಪ್ರಸ್ತುತ ದೇಶದಲ್ಲಿ ಬಳಸಲಾಗುತ್ತಿರುವ ಇಂಧನದ ಪ್ರಮಾಣಕ್ಕೂ ಇರುವ ಅಂತರದ ಬಗ್ಗೆ ಗಮನ ಸೆಳೆಯುತ್ತದೆ. ವಿಕಸಿತ ಭಾರತದ ಕನಸನ್ನು ಅಭಿವೃದ್ಧಿಹೊಂದಿದ ರಾಷ್ಟ್ರಗಳ ಇಂಗಾಲದ ಹೊರಹೊಮ್ಮುವಿಕೆಯನ್ನು ಕಡಿಮೆ ಮಾಡಬೇಕಾಗಿರುವ ಷರತ್ತು ಹೇಗೆ ಕಮರಿಸುತ್ತಿದೆ ಎಂಬುದರ ಬಗ್ಗೆ ಇಲ್ಲಿ ವಿಷಾದ ವ್ಯಕ್ತಪಡಿಸಲಾಗಿದೆ.

ಭಾರತವು ಇಂಗಾಲದ ಹೊರಹೊಮ್ಮುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಲ್ಲಿದ್ದಲಿನ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗಮನಹರಿಸಿದರೆ ಅದು ದೇಶದ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ವರದಿಯು ಚರ್ಚಿಸುತ್ತದೆ. ಅಮೆರಿಕದ ಕಲ್ಲಿದ್ದಲು ಆಧಾರಿತ  ಸ್ಥಾವರಗಳ ಪೈಕಿ ಸುಮಾರು 88 ಶೇಕಡಾ ಸ್ಥಾವರಗಳು 1950 ಮತ್ತು 1990ರ ನಡುವೆ ನಿರ್ಮಾಣಗೊಂಡವು. ಮತ್ತೊಂದೆಡೆ, ಬ್ರಿಟನ್ ನಲ್ಲಿ ಕೈಗಾರಿಕೀಕರಣದಿಂದ ಪ್ರೇರಿತವಾಗಿ, 1970ರ ದಶಕದ ಅಂತ್ಯದವರೆಗೆ ನೈಸರ್ಗಿಕ ಅನಿಲವನ್ನು ವಿಶ್ವಾಸಾರ್ಹ ಪರ್ಯಾಯವೆಂದು ಪರಿಗಣಿಸುವವರೆಗೂ ಅಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳೇ ಇಂಧನ ಪೂರೈಕೆಯಲ್ಲಿ ಪ್ರಾಬಲ್ಯ ಸಾಧಿಸಿದ್ದವು. ಅದೇ ರೀತಿ ಭಾರತದಲ್ಲಿ, 2010ರ ವೇಳೆಗೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಹೆಚ್ಚಿನ ಸಾಮರ್ಥ್ಯವನ್ನು ಪಡೆದುಕೊಂಡವು. ಇದೀಗ ಇಂಗಾದ ಹೊರಸೂಸುವಿಕೆಯನ್ನು ತಗ್ಗಿಸಲು ಭಾರತದಲ್ಲಿ ಕಲ್ಲಿದ್ದಲು ಸ್ಥಾವರಗಳನ್ನು ಮುಚ್ಚಿದರೆ ಬೃಹತ್ ಹೂಡಿಕೆಗಳು ಬಳಕೆಯಾಗದೆ ಉಳಿಯುತ್ತವೆ. ಅದೇ ಅಮೆರಿಕ ಮತ್ತು ಯುರೋಪಿಯನ್ ದೇಶಗಳು ಕಲ್ಲಿದ್ದಲಿನಿಂದ ನೈಸರ್ಗಿಕ ಅನಿಲಕ್ಕೆ ಪರಿವರ್ತನೆಗೊಳ್ಳಬಹುದು. ಏಕೆಂದರೆ ಅವುಗಳಿಗೆ ಹೊಸ ಸಂಪನ್ಮೂಲದ ಲಭ್ಯತೆ ಸಾಕಷ್ಟಿದೆ ಮತ್ತು ಅಲ್ಲಿರುವ ಹಳೆಯ ಸಾಂಪ್ರದಾಯಿಕ ಕಲ್ಲಿದ್ದಲು ಆಧಾರಿತ ಉಷ್ಣ ಸ್ಥಾವರಗಳು ಬಹುತೇಕ ಅವುಗಳ ಅಂತ್ಯವನ್ನು ಸಮೀಪಿಸುತ್ತಿವೆ. ಆದರೆ ಭಾರತದ ಏಕೈಕ ವಿಶ್ವಾಸಾರ್ಹ ಇಂಧನ ಮೂಲ ಕಲ್ಲಿದ್ದಲು. ವಿಶ್ವದ ಕಲ್ಲಿದ್ದಲು ನಿಕ್ಷೇಪಗಳಲ್ಲಿ ಸುಮಾರು 10 ಶೇಕಡಾ ನಿಕ್ಷೇಪಗಳನ್ನು ಭಾರತವೇ ಹೊಂದಿದೆ. ಆದರೆ ವಿಶ್ವದಲ್ಲಿರುವ ನೈಸರ್ಗಿಕ ಅನಿಲ ನಿಕ್ಷೇಪಗಳಲ್ಲಿ ಭಾರತದ ಪಾಲು ಕೇವಲ 0.7 ಶೇಕಡಾ. ಪ್ರಸ್ತುತ, ಭಾರತದ ಅಭಿವೃದ್ಧಿಗೆ ಕಲ್ಲಿದ್ದಲು ವಿಶ್ವಾಸಾರ್ಹ ಮತ್ತು ಕೈಗೆಟುಕುವ ಶಕ್ತಿಯ ಮೂಲವಾಗಿದೆ ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಹೀಗೆ ಇಂಗಾಲದ ಉತ್ಪಾದನೆಯ ಪ್ರಮಾಣವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ದೃಢವಾಗಿ ಹೆಜ್ಜೆ ಇಟ್ಟದ್ದೇ ಆದರೆ  ಭಾರತ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವ ಮಹತ್ವಾಕಾಂಕ್ಷೆಯ ಮೇಲೆ ಇದು ವಿಷಮ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇತರ ಇಂಧನದ ಮೂಲಗಳ ಕುರಿತು ಚರ್ಚಿಸುತ್ತ ವರದಿಯು, ಪರಮಾಣು ಶಕ್ತಿ ಪರಿಣಾಮಕಾರಿ ಮತ್ತು ಪಳೆಯುಳಿಕೆ ಇಂಧನಕ್ಕೆ ವಿಶ್ವಾಸಾರ್ಹ ಪರ್ಯಾಯ ಮೂಲ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಪರಮಾಣು ಶಕ್ತಿಯ ಬಳಕೆಯ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಆತಂಕಗಳಿವೆ. ಜೊತೆಗೆ ಇತ್ತೀಚಿನ ತಂತ್ರಜ್ಞಾನಗಳು ಬೇರೆ ದೇಶದ ಹಿಡಿತದಲ್ಲಿವೆ ಎಂಬುದು ಇನ್ನಷ್ಟು ಕಳವಳ ಉಂಟುಮಾಡುತ್ತದೆ ಎನ್ನುತ್ತದೆ.

Climate Energy

ಅಂತರರಾಷ್ಟ್ರೀಯ ಮಟ್ಟದಲ್ಲಿ ಹವಾಮಾನ ಬದಲಾವಣೆಯ ವೈಪರೀತ್ಯಗಳನ್ನು ಎದುರಿಸಲು ಹೊಂದಾಣಿಕೆಯ ಕ್ರಮಕ್ಕಾಗಿ ಮೀಸಲು ಹಣಕಾಸಿನ ಕೊರತೆ ಮತ್ತು ದೇಶೀಯ ಸಂಪನ್ಮೂಲಗಳ ಬಳಕೆಯು ದೇಶದ ಅಭಿವೃದ್ಧಿಯ ಮೇಲೆ ಬೀರುವ ಪರಿಣಾಮದ ಬಗ್ಗೆ ವರದಿಯು ವಿಷಾದಿಸುತ್ತದೆ. ಅಭಿವೃದ್ಧಿಶೀಲ ದೇಶಗಳು ತಮ್ಮ ಮೇಲೆ ಹೇರಲ್ಪಟ್ಟಿರುವ ಹವಾಮಾನ ಹೊಂದಾಣಿಕೆಯ ತಂತ್ರಗಳನ್ನು ಅಳವಡಿಸಿಕೊಳ್ಳಲು ಸಂಪನ್ಮೂಲಗಳನ್ನು ಹೊಂದಿಸಲು ಹೇಗೆ ಹೆಣಗಾಡುತ್ತವೆ ಎಂಬ ಅಂಶವನ್ನು ವರದಿಯು ಉಲ್ಲೇಖಿಸುತ್ತದೆ.

ಹೀಗೆ ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಹೇಗೆ ದಬ್ಬಾಳಿಕೆ ತೋರಿಸುತ್ತಿವೆ, ನೀತಿ ನಿರೂಪಣೆಯಲ್ಲಿ ತಮ್ಮ ಯಜಮಾನಿಕೆಯನ್ನು ಸಾಧಿಸುತ್ತಿವೆ ಎಂಬ ಅಂಶಗಳನ್ನು ವರದಿ ತೆರೆದಿಟ್ಟಿದೆ.

ವರದಿಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ದೂಷಣೆ ಇದೆ. ಆದರೆ ನಮ್ಮ ದೇಶ ತಾಪಮಾನ ಏರಿಕೆ ತಡೆ ನಿಟ್ಟಿನಲ್ಲಿ ಏನು ಮಾಡುತ್ತಿದೆ ಎಂಬುದನ್ನು ತಿಳಿಯಲು ಹೊರಟರೆ ನಮಗೆ ಆಗುವುದು ಬರೀ ನಿರಾಸೆ. ಏಕೆಂದರೆ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶಗಳ ಧೊರಣೆಯನ್ನು ಟೀಕಿಸುತ್ತ, ತಾನು ಈ ನಿಟ್ಟಿನಲ್ಲಿ ಏನು ಮಾಡಲಾಗದ  ಅಸಹಾಯಕ ಎಂಬಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುವಂತೆ ಕಾಣುತ್ತಿದೆ. ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ರೂಪಿಸಿರುವ ʻರಾಷ್ಟ್ರೀಯ ಅಳವಡಿಕೆ ಯೋಜನೆʼಯತ್ತ ಕೈ ತೋರಿಸಿ, ಕೇಂದ್ರ ಸರಕಾರ ನುಣಿಚಿಕೊಂಡಿದೆ. ಈ ಯೋಜನೆಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಹೊಂದಿಕೆಯಾಗುವ; ಎಲ್ಲಾ ಪ್ರದೇಶಗಳು ಮತ್ತು ವಲಯಗಳಿಗೆ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸಮಗ್ರವಾಗಿ ರೂಪಿಸಲಾಗಿದೆ ಎಂದು ಬಣ್ಣಿಸಿ, ಕೈ ತೊಳೆದುಕೊಂಡಿದೆ.

ಈ ಯೋಜನೆಯ ವಲಯವಾರು ಕಾರ್ಯಯೋಜನೆಯ ವಿಷಯಕ್ಕೆ ಬಂದಾಗ ಈಗಾಗಲೇ ಅನುಷ್ಠಾನಗೊಂಡಿರುವ ಸರ್ಕಾರದ ಯೋಜನೆಗಳಾದ ಅಮೃತ್‌, ಅಮೃತ್‌ 2.0, ಜಲಶಕ್ತಿ ಅಭಿಯಾನ, ಸ್ವಚ್ಛ ಭಾರತ ಮಿಷನ್‌ ಮುಂತಾದ ಯೋಜನೆಗಳು ಅವುಗಳು ಸಾಧಿಸಿರುವ ಗುರಿಗಳ ಅಂಕಿಅಂಶಗಳನ್ನು ಉಲ್ಲೇಖಿಸುತ್ತದೆ. ಇಂಗಾಲದ ಉತ್ಪಾದನೆಯ ಪ್ರಮಾಣದಲ್ಲಿ ಇಳಿತ ಹಾಗು ನೆಟ್‌ ಝೀರೋ ಅಥವಾ ಶೂನ್ಯ ಇಂಗಾಲದ ಸ್ಥಿತಿಯನ್ನು ಸಾಧಿಸಲು ಹೇಳಿರುವ ಉಪಕ್ರಮಗಳು ಈಗಾಗಲೇ ಚಾಲ್ತಿಯಲ್ಲಿರುವ ಗ್ರೀನ್‌ ಕೆಡಿಟ್ಸ್‌, ಜೀವನ ಶೈಲಿ ಬದಲಾವಣೆಗಳೆ ಮುಂತಾದವುಗಳೇ ಆಗಿವೆ. ʻʻಶೂನ್ಯ ಇಂಗಾಲದ ಸ್ಥಿತಿಯನ್ನು ಸಾಧಿಸುವುದು ಎಂದರೆ ನಮ್ಮ ಉತ್ಪಾದನೆ ಮತ್ತು ಬಳಕೆಯ ಮಾದರಿಯಲ್ಲಿ ಮೂಲಭೂತ ವ್ಯತ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮತ್ತು ಸಂಪನ್ಮೂಲಗಳ ಪ್ರಜ್ಞಾಪೂರ್ವಕ ಬಳಕೆ.

ಅಮೃತ್ 2.0

ಭಾರತದಲ್ಲಿ ಸಮರೋಪಾದಿಯಲ್ಲಿ ಈ ಜೀವನಶೈಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಅದು ತ್ಯಾಜ್ಯ ನಿರ್ವಹಣೆ, ಸಂಪನ್ಮೂಲಗಳ ಸಂರಕ್ಷಣೆ, ಮತ್ತು ಮರುಬಳಕೆ ಇತ್ಯಾದಿ ಪರಿಸರ ಸ್ನೇಹೀ ಅಭ್ಯಾಸಗಳನ್ನು ಒಳಗೊಂಡಿದೆ. ಭಾರತದ ಮುಂದಾಳತ್ವದಲ್ಲಿ ಜಾಗತಿಕ ಮಟ್ಟದಲ್ಲಿ ನಡೆಸಲಾಗುತ್ತಿರುವ ʻಪರಿಸರಕ್ಕಾಗಿ ಜೀವನಶೈಲಿʼ ಚಳುವಳಿ ದೇಶದಲ್ಲಿ ಸುಸ್ಥಿರತೆಯ ದಿಕ್ಕಿನಲ್ಲಿ ನಡೆಸಲಾಗುತ್ತಿರುವ ಪ್ರಯತ್ನಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆʼʼ ಎಂದು ವರದಿಯು ಭಾರತ ಆರಂಭಿಸಿರುವ ಈ ಚಳುವಳಿಗೆ ಸೀಮಿತಗೊಳ್ಳುತ್ತದೆ. ಮನೆಗೊಂದು ಮರ ಇದ್ದದ್ದು ಅಮ್ಮನ ಹೆಸರಿನಲ್ಲಿ ಒಂದು ಮರ ಎಂಬುದಾಗಿ ಹೊಸದಾಗಿ ಪರಿಚಯಿಸಲ್ಪಟ್ಟಿದ್ದರೆ, ಮಿಷನ್‌ ಲೈಫ್‌ ಅಡಿಯಲ್ಲಿ ಸರ್ಕ್ಯುಲರ್‌ ಎಕಾನಮಿ/ ವೃತ್ತಾಕಾರದ ಆರ್ಥಿಕತೆ ಎಂದರೆ ವಸ್ತುವಿನ ಮರುಬಳಕೆಯ ಚಕ್ರ ಪುನರಾವರ್ತನೆಗೊಂಡಿದೆ.

ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಗೆ ನಮ್ಮ ದೇಶ ಹೊರತಾಗಿ ಇಲ್ಲ. ಅಭಿವೃದ್ಧಿ ಹೊಂದಿದ ದೇಶಗಳ ಧೋರಣೆಯನ್ನು ಟೀಕಿಸುತ್ತ ನಮ್ಮ ದೇಶವನ್ನು ಸುಸ್ಥಿರ ಅಭಿವೃದ್ಧಿಯ ಮಾರ್ಗದಲ್ಲಿ ಕೊಂಡೊಯ್ಯುವ ಹೊಣೆಯಿಂದ ನಾವು ನುಣುಚಿಕೊಳ್ಳಲು ಸಾಧ್ಯವಿಲ್ಲ. ʻಧರೆ ಹತ್ತಿ ಉರಿಯುವ ಮುನ್ನʼ ಪರಿಣಾಮಕಾರಿ ಉಪಕ್ರಮಗಳನ್ನು ನಮ್ಮ ದೇಶ ಅಳವಡಿಸಿಕೊಳ್ಳಬೇಕಿದೆ.

(ಭೂಮ್ತಾಯಿ ಅಂಕಣ ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುತ್ತದೆ)

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
+ posts

ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

1 COMMENT

  1. As always, Nidhi captivates with her profound environmental insights and masterfully articulated write-up. Your eloquence and depth of knowledge continue to shine brilliantly. As I mentioned earlier, I eagerly anticipate your travelogue on your recent journey to North India, especially your experiences at the Kumbh Mela. I’m certain it will be a literary delight, rich with vivid narratives and cultural reflections. Keep illuminating minds with your exceptional writing!

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X