ಲಿಖಿತ ಭರವಸೆ ಕೊಟ್ಟು ಮಾತು ತಪ್ಪಿದ ಸರ್ಕಾರದ ವಿರುದ್ಧ ಸಂಯುಕ್ತ ಹೋರಾಟ-ಕರ್ನಾಟಕದಿಂದ ಫೆಬ್ರವರಿ 10ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬ ರೈತನೂ ಭಾಗಿಯಾಗಿ ಸರ್ಕಾರದ ಗಮನ ಸೆಳೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ಹೇಳಿದರು.
ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ರಾಜ್ಯ ಸರ್ಕಾರದವರು ನುಡಿದಂತೆ ನಡೆದ್ದಿದೇವೆಂದು ಹೇಳುತ್ತಾರೆ. ಆದರೆ ಅವರ ಪ್ರಣಾಳಿಕೆಯಲ್ಲಿ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದು, ಎಸ್‌ಕೆಎಂನಿಂದ ಕೊಟ್ಟ ಪ್ರಣಾಳಿಕೆಯನ್ನು ಒಪ್ಪಿ ಡಿ ಕೆ ಶಿವಕುಮಾರ್ ಅವರು ಕೃಷಿ ಕಾಯ್ದೆಗಳನ್ನ ವಾಪಾಸ್ ಪಡೆಯುವುದು ಮತ್ತು ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ಲಿಖಿತ ಭರವಸೆ ಕೊಟ್ಟಿರುವುದನ್ನು ಮರೆತು ರೈತ ವಿರೋಧಿಗಳಾಗಿದ್ದಾರೆ” ಎಂದು ಆರೋಪಿಸಿದರು.

“ಹಿಂದಿನ ಸರ್ಕಾರ ಕೃಷಿ ಕಾಯ್ದೆಗಳನ್ನು ತರುವ ಸಮಿತಿಯಲ್ಲಿದ್ದ ಅಶೋಕ್ ದಳವಾಯಿ ಅವರನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷರನಾಗಿ ಮಾಡಿತ್ತು. ಇಂತಹ ವ್ಯಕ್ತಿಯನ್ನು ಈಗಿನ ಕಾಂಗ್ರೆಸ್ ಸರ್ಕಾರವೂ ಕೂಡಾ ಮತ್ತೆ ಅಧ್ಯಕ್ಷರನ್ನಾಗಿ ವಿಸ್ತರಿಸಿದೆ. ಜತೆಗೆ ರೈತ ವಿರೋಧಿ ಕೃಷಿ ಕಾಯ್ದೆಗಳ ಅಧ್ಯಯನ ನಡೆಸಿ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳುತ್ತಿದ್ದ ಬಿಜೆಪಿ ಸರ್ಕಾರದ ಹಳೇ ಮಂತ್ರವನ್ನು ಹೇಳಿ ಶಿಫಾರಸು ಮಾಡಲು ತಿಳಿಸಿದೆ. ಈಗಾಗಲೇ ಎಸ್‌ಕೆಎಂನಿಂದ ಸರ್ಕಾರಕ್ಕೆ ಬಹಿರಂಗ ಪತ್ರ ಕೊಟ್ಟಿದ್ದೇವೆ. ಅದಕ್ಕೆ ಈವರೆಗೂ ಯಾವುದೇ ಉತ್ತರ ಬಂದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕೊಟ್ಟ ಮಾತಿಗೆ ತಪ್ಪದೆ ನುಡಿದಂತೆ ನಡೆಯಬೇಕು” ಎಂದು ಒತ್ತಾಯಿಸಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ ಗೆಲುವು
ಈ ಸಂದರ್ಭದಲ್ಲಿ ಡಿಎಸ್‌ಎಸ್(ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಟಿ ಹೆಚ್ ಹಾಲೇಶಪ್ಪ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಕೆ ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಎಂ ಮಂಜಪ್ಪ, ಎಂ ಮಹದೇವಪ್ಪ, ಶಿವಮೊಗ್ಗ ತಾಲೂಕು ಪ್ರಧಾನ ಕಾರ್ಯದರ್ಶಿ ಜ್ಞಾನೇಶ್, ಭದ್ರಾವತಿ ತಾ ಅಧ್ಯಕ್ಷ ಜಿ ಎನ್ ಪಂಚಾಕ್ಷರಿ, ಭದ್ರಾವತಿ ತಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಸೇರಿದಂತೆ ಇತರರು ಇದ್ದರು.