ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸೋಲುಂಡಿರುವುದಕ್ಕೆ ನಾವು ಜವಾಬ್ದಾರರಲ್ಲ. ಅವರನ್ನು ಗೆಲ್ಲಿಸುವುದೇ ನಮ್ಮ ಕೆಲಸವೂ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.
ದೆಹಲಿಯಲ್ಲಿ ಎಎಪಿ ಹೀನಾಯವಾಗಿ ಸೋಲುಂಡಿದ್ದು, ಬಿಜೆಪಿ ಸರ್ಕಾರ ರಚನೆಗೆ ಸಜ್ಜಾಗುತ್ತಿದೆ. ಈ ನಡುವೆ, ಎಎಪಿ ಸೋಲಿಗೆ ಕಾಂಗ್ರೆಸ್ ಕಾರಣವೆಂದು ಆರೋಪಿಸಲಾಗುತ್ತಿದೆ. ಈ ಆರೋಪವನ್ನು ಅಲ್ಲಗಳೆದಿರುವ ಕಾಂಗ್ರೆಸ್, ‘ಎಎಪಿ ಸೋಲಿಗೆ ನಾವು ಜವಾಬ್ದಾರರಲ್ಲ’ ಎಂದು ಹೇಳಿದೆ.
“ಚುನಾವಣೆಗಳಲ್ಲಿ ಎಎಪಿಯನ್ನು ಗೆಲ್ಲಿಸುವ ಜವಾಬ್ದಾರಿ ಕಾಂಗ್ರೆಸ್ ಮೇಲಿಲ್ಲ. ನಾವು ಚುನಾವಣೆಗಳಲ್ಲಿ ಉತ್ಸಾಹದಿಂದ ಪ್ರಚಾರ ಮಾಡುತ್ತೇವೆ. ಸಾಧ್ಯವಾದಷ್ಟು ಬಲವಾಗಿ ಸ್ಪರ್ಧಿಸುತ್ತೇವೆ. ಗೆಲ್ಲಲು ಪ್ರಯತ್ನಿಸುತ್ತೇವೆ. ಈ ಹಿಂದೆ, ದೆಹಲಿಯಲ್ಲಿ 15 ವರ್ಷ ನಿರಂತರವಾಗಿ ಸರ್ಕಾರ ನಡೆಸಿದ್ದೇವೆ. ನಾವು ಯಾವ ಪಕ್ಷದ ಮೇಲೂ ಅವಲಂಬಿತರಾಗಿಲ್ಲ” ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಹೇಳಿದ್ದಾರೆ.
“ಗುಜರಾತ್, ಹರಿಯಾಣ, ಉತ್ತರಾಖಂಡ, ಗೋವಾದಲ್ಲಿ ಎಎಪಿ ಸ್ಪರ್ಧಿಸಿತು. ಉತ್ತರಾಖಂಡ ಮತ್ತು ಗೋವಾದಲ್ಲಿ ಎಎಪಿ ಮತಪಾಲು ಪಡೆಯಿತು. ಅದು, ನಮ್ಮ ಮತಗಳನ್ನೂ ಕಸಿದುಕೊಂಡಿತು. ಅಲ್ಲಿ, ಎಎಪಿ ಸ್ಪರ್ಧಿಸದಿದ್ದರೆ, ನಾವು ಬಿಜೆಪಿನ್ನು ನಿರಾಯಾಸವಾಗಿ ಸೋಲಿಸುತ್ತಿದ್ದೆವು” ಎಂದು ಶ್ರಿನಾಟೆ ಹೇಳಿದ್ದಾರೆ.