ಮಲೆನಾಡಿನ ಪ್ರಕೃತಿ ಸೌಂದರ್ಯದಿಂದ ಸ್ಥಳೀಯರು ಹಾಗೂ ಪ್ರವಾಸಿಗರ ಗಮನ ಸೆಳೆಯುವ ಪ್ರವಾಸಿತಾಣವಾಗಿದೆ. ಮಲೆನಾಡಿನ ಭಾಗವಾಗಿರುವ ಚಿಕ್ಕಮಗಳೂರಿನಲ್ಲಿ ಹಲವು ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಚಿಕ್ಕಮಗಳೂರು ಎಂದರೆ ಕಾಫಿ ನಾಡು ಎಂದೇ ಹೆಸರಾಗಿದೆ. ಅಲ್ಲದೆ ಕಾಫಿ ನಾಡೆಂದು ಕರೆಸಿಕೊಳ್ಳಲು ಮೂಲ ಕಾರಣವೂ ಇದೆ. ಅದೇನೆಂದರೆ ಸಾವಿರಾರು ವರ್ಷಗಳ ಹಿಂದೆ ಭಾರತೀಯ ಮುಸ್ಲಿಂ ಸಮುದಾಯದ ಸಂತ ಸೈಯದ್ ಜಮಾಲುದ್ದೀನ್ ಶಾ ಮಗ್ರೀಬಿ ಅವರು ಮೆಕ್ಕಾಗೆ ತೀರ್ಥಯಾತ್ರೆಗೆ ಹೋಗಿರುವ ಸಂದರ್ಭದಲ್ಲಿ ಹಿಂದಿರುಗುವಾಗ, ಬೇರೆ ದೇಶದಿಂದ(ಯೆಮೆನ್) ಭಾರತಕ್ಕೆ ಮರಳಿದ ಹಜ್ರತ್ ಸೈಯದ್ ಜಮಾಲ್ ಶಾಹ ಮಗ್ರೀಬಿ ರೆಹಮತ್ತುಲ್ಲಲೇ ಅವರು ತಲೆಯ ಮೇಲೆ ಧರಿಸಿದ್ದ ಪೇಟದಲ್ಲಿ ಏಳು ಕಾಫಿ ಬೀಜಗಳನ್ನು ಅಡಗಿಸಿಕೊಂಡು ತಂದಿದ್ದರು.

ಚಿಕ್ಕಮಗಳೂರು ಜಿಲ್ಲೆಯ “ಚಂದ್ರ ದ್ರೋಣಬೆಟ್ಟ”ದ ಸಮೀಪದಲ್ಲಿರುವ ಅತ್ತಿಗುಂಡಿ ಗ್ರಾಮದ ಅವರದ್ದೇ, ತೋಟದಲ್ಲಿ ಏಳು ಅರೇಬಿಕಾ ಕಾಫಿ ಬೀಜಗಳನ್ನು ಬಿತ್ತಿ, ಅದರ ಪಾಲನೆ, ಪೋಷಣೆ ಮಾಡಿದರು. ಕಾಫಿ ಬೀಜಗಳು ಕಟಾವಿಗೆ ಬಂದನಂತರ ಮತ್ತೆ ಆ ಕಾಫಿ ಬೀಜಗಳನ್ನು ಸಂಗ್ರಹಿಸಿ, ಅವುಗಳನ್ನು ಮತ್ತೆ ಬಿತ್ತನೆ ಬೀಜವನ್ನಾಗಿಸಿ ಸ್ಥಳೀಯ ಜನರಿಗೆ ಉಚಿತವಾಗಿ ನೀಡಿ ಕಾಫಿತೋಟ ಮಾಡಲು ಉತ್ತೇಜನ ನೀಡಿದ್ದರಿಂದ ಇಡೀ ಚಿಕ್ಕಮಗಳೂರು ಜಿಲ್ಲೆ ಇವತ್ತು ಕಾಫಿ ನಾಡಾಗಿ ಮಾರ್ಪಟ್ಟಿದೆ.

ಸಣ್ಣ, ಮಧ್ಯಮ ಹಾಗೂ ದೊಡ್ಡ ರೈತನವರೆಗೂ ಮನಮುಟ್ಟುವಂತೆ ಇಡೀ ಜಿಲ್ಲೆಯನ್ನೇ ಆವರಿಸಿದೆ. ಹಾಗೆಯೇ ಅದೆಷ್ಟೋ ಜನ ಈಗ ಕೋಟಿ ಕೋಟಿ ಹಣ ಮಾಡಿ ಜೀವನದಲ್ಲಿ ಸುಖಕರ ಜೀವನ ನಡೆಸುತ್ತಿದ್ದಾರೆ. ಇದರಿಂದ ದೊಡ್ಡ ಉದ್ದಿಮೆಗಳನ್ನು ಹಾಗೂ ಕೈಗಾರಿಕೋದ್ಯಮವನ್ನು ಸ್ಥಾಪಿಸಿ ಎಷ್ಟೋ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಹಾಗೆಯೇ ಜಿಲ್ಲೆಯ ಅಥವಾ ಬೇರೆ ಭಾಗದಲ್ಲಿ ಕಾಫಿ ಅಂಗಡಿಗಳನ್ನು ಕೆಫೆಯಾಗಿ ಬದಲಾಯಿಸಿ ಕಾಫಿಯ ಹೆಸರು ಹಾಗೂ ಉತ್ಪನ್ನ ಮಾರುಕಟ್ಟೆ ಎಲ್ಲ ಭಾಗದಲ್ಲೂ ನಿರ್ಮಿಸಲಾಗಿದೆ. ಕಾಫಿ ಬೆಳೆಯಿಂದ ಚಿಕ್ಕಮಗಳೂರು ಜಿಲ್ಲೆ ಕರ್ನಾಟಕ ಅಲ್ಲದೆ, ನಮ್ಮ ಜಿಲ್ಲೆಯ ಕಾಫಿ ಬೀಜಗಳು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿವೆ. ಎಂಬುದು ಮಲೆನಾಡಿನ ಜನರ ಅಭಿಪ್ರಾಯವಾಗಿದೆ.

“ಕಾಫಿ ಬೆಳೆಯನ್ನು ದೇಶ ವಿದೇಶ ಹಾಗೂ ನಮ್ಮ ರಾಜ್ಯವನ್ನು ಗಮನಸೆಳೆಯುವಂತೆ ಮಾಡಿದ ಸೈಯದ್ ಜಮಾಲುದ್ದೀನ್ ಶಾ ಮಗ್ರೀಬಿ ಅವರ ಕೊಡುಗೆ ದೊಡ್ಡದು. ಇಂತಹ ಮಹಾನ್ ವ್ಯಕ್ತಿಯ ಮತ್ತವರ ಕುಟುಂಬಗಳ ಗೋರಿಗಳಿರುವ ಬಾಬಾ ಬುಡನ್ ಗಿರಿಯಲ್ಲಿ ಸರಿಯಾದ ಸ್ವಚ್ಛತೆ ಹಾಗೂ ಅಭಿವೃದ್ಧಿ ಎನ್ನುವುದು ಕುಂಠಿತವಾಗಿದೆ. ಮೊದಲೆಲ್ಲ ಸುಮಾರು ವರ್ಷಗಳಿಂದ ಈ ಜಾಗದಲ್ಲಿ ಎಲ್ಲ ಸಮುದಾಯದವರೂ ಬರುತ್ತಿದ್ದರು. ಸೌಹಾರ್ದತೆಯಿಂದ ಕೂಡಿ ಔತಣ ಕೂಟ ಏರ್ಪಡಿಸಿ ಸಂತಸದಿಂದ ಸವಿಯುತ್ತಿದ್ದರು. ಅಣ್ಣ, ತಮ್ಮ ಅಕ್ಕ, ತಂಗಿಯರಂತೆ ಕಷ್ಟ ಸುಖಗಳನ್ನು ಹಂಚುಕ್ಕೊಳ್ಳುತ್ತಿದ್ದರು. ಹೀಗೆ ಇನ್ನೂ ಹಲವಾರು ಪದ್ಧತಿಗಳನ್ನು ಸ್ಥಳೀಯರು ಹಾಗೂ ದೂರದ ಊರುಗಳಿಂದ ಬರುವ ಜನರೂ ಪಾಲಿಸುತ್ತಿದ್ದರು. ಬಾಬ ಬುಡನ್ ಗಿರಿ ಎಂದರೇ ಶಾಂತಿ ವಾತಾವರಣ ಹಾಗೂ ಸ್ವಚ್ಛತೆಯಿಂದ ಇರುವಂತ, ಎಲ್ಲ ಸಮುದಾಯದವರು ಈ ಜಾಗಕ್ಕೆ ಬರುವಂತಹ ಸುಂದರ ತಾಣವಾಗಿತ್ತು” ಎಂದು ಬಾಬಾ ಬುಡನ್ ಗಿರಿಯ ನಿವಾಸಿ ಅತೀಕ್ ಈ ದಿನ.ಕಾಮ್‌ಗೆ ತಿಳಿಸಿದರು.

ನಮ್ಮ ಜಿಲ್ಲೆ ಅಲ್ಲದೇ ಬೇರೆ ಭಾಗಗಳಿಂದ ಕಾಫಿ ಬೆಳೆ ಬೆಳೆದ ರೈತರು, ಎಲ್ಲ ಸಮುದಾಯದವರು ಕಾಫಿ ಬೀಜಗಳನ್ನು ತಂದು ಬಾಬಾ ಬುಡನ್ ಗಿರಿಯ ಸೈಯದ್ ಜಮಾಲುದ್ದೀನ್ ಶಾ ಮಗ್ರೀಬಿ ಅವರ ಗೋರಿಗಳತ್ತಿರ ಇಟ್ಟು ಪ್ರಾರ್ಥನೆ ಸಲ್ಲಿಸುತ್ತಿದ್ದರು.

“ಗೌರವಾನ್ವಿತವಾಗಿ ಎಲ್ಲ ಸಮುದಾಯದವರಿಗೆ ಸೌಹಾರ್ದತೆಯಿಂದ ಇರುವ ಜನರಿಗೆ ಸ್ಥಳಕ್ಕೆ ಬಂದಿರುವವರಿಗೆ ಊಟವನ್ನು ಕೊಡುತ್ತಿದ್ದರು. ಎಲ್ಲರೂ ಸಂತೋಷದಿಂದ ಇರುತ್ತಿದ್ದರು. ಈಗ ಎಲ್ಲದಕ್ಕೂ ನಿರ್ಬಂಧ ಇದೆ. ಸುತ್ತಮುತ್ತಲಿನ ವಾತಾವರಣದಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ ಹಾಗೂ ನಮ್ಮ ದೇಶಕ್ಕೆ ಕೊಡುಗೆ ಕೊಟ್ಟವರನ್ನು ಮರೆತಿದ್ದಾರೆ. ಬಾಬಾ ಅವರ ವಂಶಸ್ಥರು ಮರಣ ಹೊಂದಿದಾಗ ಅವರ ಗೋರಿಗಳನ್ನು ಬಾಬಾ ಬುಡನ್ ಗಿರಿಯಲ್ಲೇ ಗೋರಿಗಳನ್ನು ನಿರ್ಮಿಸಿದ್ದಾರೆ. ಇದು ಈಗ ನಿರ್ಮಿಸಿದ್ದಲ್ಲ ತಲಾತಲಾಂತರದ ಹಿಂದೆಯೇ ನಿರ್ಮಿಸಲಾಗಿದೆ” ಎಂದು ಮಲೆನಾಡು ಭಾಗದ ಮುಖಂಡ ಮೊಹಮ್ಮದ್ ಶದಾಬ್ ಈ ದಿನ.ಕಾಮ್‌ಗೆ ಮಾಹಿತಿ ತಿಳಿಸಿದರು.

“ಇಲ್ಲಿರುವ ಗೋರಿಗಳ ಹತ್ತಿರ ಒಳಗೆ ಪ್ರವೇಶ ಮಾಡಲು ಬಿಡುತ್ತಿಲ್ಲ, ಬೇರೆ ಅವರಿಗಿರಲಿ ಅವರ ವಂಶಸ್ಥರಿಗೂ ಸಹ ಬಾಬಾ ಅವರ ಗೋರಿಗಳಿರುವ ಜಾಗಕ್ಕೆ ಪ್ರವೇಶವಿಲ್ಲ. ಹಾಗೆಯೇ ಆಡಳಿತ ಅಧಿಕಾರಿಗಳೂ ಕೂಡ ಈ ವಿಚಾರವಾಗಿ ಸರಿಯಾಗಿ ಸ್ಪಂದಿಸುತ್ತಿಲ್ಲ” ಎಂದರು.

“ಇಲ್ಲಿ ಯಾವುದೇ ಜಾತಿ, ಧರ್ಮ, ಮತ, ಪಂಥಗಳ ಭೇದ ಭಾವವಿಲ್ಲದೆ ಊಟೋಪಚಾರ ನಡೆಯುತ್ತಿತ್ತು. ದೂರದ ಊರುಗಳಿಂದ ಬರುವವರು ಅವರಿಗೆ ಇಷ್ಟವಾದ ಮಾಂಸಾಹಾರ ಹಾಗೂ ಸಸ್ಯಾಹಾರವನ್ನು ಮಾಡಿ ಊಟ ಮಾಡುತ್ತಿದ್ದರು. ಈಗ ರಾಜಕೀಯ ಎಂಬ ಕುತಂತ್ರದ ಕಾರಣದಿಂದ ಮಾಂಸಾಹಾರ ಮಾಡಬಾರದೆಂಬ ಸುಳ್ಳು ಕಥೆಗಳನ್ನು ಕಟ್ಟಿ ಜನರ ಮನಸ್ಥಿತಿ ಬದಲಾವಣೆ ಮಾಡಲು ಮುಂದಾಗಿದ್ದಾರೆ. ನಾವೆಲ್ಲ ಒಂದೇ ಎಂಬ ಭಾವದಿಂದ ಇರುವವರನ್ನು ಜಾತಿಯೆಂಬ ಎರಡು ಅಕ್ಷರವನ್ನು ಇಟ್ಟುಕೊಂಡು ಕೆಲವರು ಲಾಭಿ ಮಾಡುತ್ತಿದ್ದಾರೆ. ಹಾಗೆಯೇ ಸುಪ್ರೀಂ ಕೋರ್ಟ್‌ನಿಂದ, ಇಲ್ಲಿರುವ ವಂಶಸ್ಥರ ಗೋರಿಗಳಿಗೆ ಭೇಟಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಆದೇಶ ಹೊರಡಿಸಿದ್ದರೂ ಕೂಡ ಅಧಿಕಾರಿಗಳಿಂದ ಯಾವುದೇ ಸ್ಪಂದನೆಯಿಲ್ಲ” ಎಂದು ಪ್ರಗತಿಪರ ಹೋರಾಟಗಾರ ಗೌಸ್ ಮುನೀರ್ ಈ ದಿನ.ಕಾಮ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

“ಇಲ್ಲಿರುವ ಗೋರಿಗಳ ಮುಂದೆ ಹೋಗಲು ಒಳಗೆ ಪ್ರವೇಶ ಮಾಡಲು ವಂಶಸ್ತರಿಗೂ ಪ್ರವೇಶವಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಿ ನಮಗೆ ನ್ಯಾಯ ಒದಗಿಸಬೇಕು” ಎಂದು ಅಲ್ಲಿನ ಎಲ್ಲಾ ಸಮುದಾಯದವರೂ ಈ ದಿನ.ಕಾಮ್ ಮೂಲಕ ೊತ್ತಾಯಿಸಿದರು.

“ರಾಜಕೀಯ ನಡೆಸಲು ಬೇರೆ ದಾರಿಯಿಲ್ಲದೆ, ಸೌಹಾರ್ದತೆಯಿಂದ ಇರುವ ನಮ್ಮ ಜಿಲ್ಲೆಯಲ್ಲಿ ಬೆಂಕಿಹಚ್ಚುವ ಕೆಲಸವಾಗುತ್ತಿದೆ. ಅದೇನೇ ಆಗಲಿ ನಮಗೆ ರಾಜಕೀಯ ಬೇಕಾಗಿಲ್ಲ. ಇಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ವಿಡಿಯೋ ಮಾಡಲು ಹೋದಾಗ ದುರಂತ: ಎತ್ತಿನಗಾಡಿ ಹರಿದು ವ್ಯಕ್ತಿ ಸಾವು
ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಅವ್ಯವಸ್ಥೆ, ಅಭಿವೃದ್ದಿ ಕುಂಠಿತ ಹಾಗೂ ಜನರ ಮುಖ್ಯ ಬೇಡಿಕೆಗಳನ್ನು ಆಲಿಸಿ ಸಂಬಂಧಿಸಿದ ಆಡಳಿತ ಅಧಿಕಾರಿಗಳು ಬಗೆಹರಿಸುವರೇ ಎಂಬುದನ್ನು ಕಾದು ನೋಡಬೇಕಿದೆ.