ಮನರೇಗಾ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಗ್ರಾಮೀಣ ಪ್ರದೇಶದ ನೈಸರ್ಗಿಕ ಸಂಪತ್ತು ರಕ್ಷಿಸುವಲ್ಲಿ ಅಪಾರ ಶ್ರಮವಹಿಸುತ್ತಾರೆ. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಮುಂದಾಗಬೇಕು ಎಂದು ರಾಯಚೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ ಹೇಳಿದರು.
ತಾಲೂಕಿನ ಗಿಲ್ಲೇಸುಗೂರು ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತಾಲೂಕು ಮಟ್ಟದ ಮನರೇಗಾ ಯೋಜನೆ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
“ಪ್ರತಿಯೊಬ್ಬ ಕೂಲಿಕಾರ್ಮಿಕ ತಾಳ್ಮೆ, ಸಹಬಾಳ್ವೆ ಮತ್ತು ಜ್ಞಾನದೊಂದಿಗೆ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ನೆಲ, ಜಲ, ಪರಿಸರ ಸಂರಕ್ಷಣೆಗಾಗಿ ಹಾಗೂ ಸಂಪತ್ತನ್ನು ಉಳಿಸಿ ಬೆಳೆಸಲು ಸದಾ ಪ್ರಯತ್ನ ಮಾಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈತರ ಜಮೀನು ಹೆದ್ದಾರಿ ಪಾಲು; ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಟ
ಮನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಿ ಗ್ರಾಮೀಣಾಭಿವೃದ್ಧಿ ಕೊಡುಗೆ ನೀಡಲು ಸಹಕರಿಸಬೇಕು ಎಂದ ಅವರು ಬಳಿಕ ತರಬೇತಿಯಲ್ಲಿ ಹಾಜರಾದ ಕೂಲಿ ಕಾರ್ಮಿಕರಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಐಇಸಿ ಧನರಾಜ, ಶಂಕಗೌಡ, ಜಯರಾಜ, ಕೂಲಿ ಕಾರ್ಮಿಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.
