70 ಸದಸ್ಯಬಲದ ದೆಹಲಿ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸುಮಾರು 27 ವರ್ಷಗಳ ಬಳಿಕ ಗದ್ದುಗೆ ಹಿಡಿದಿದೆ. ಆದರೆ ಸರ್ಕಾರ ರಚನೆ ಹಾಗೂ ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ಸುಮಾರು ಒಂದು ವಾರದಷ್ಟು ವಿಳಂಬವಾಗಲಿದೆ.
ಬಿಜೆಪಿ ದೆಹಲಿ ಘಟಕದ ಮೂಲಗಳ ಪ್ರಕಾರ, ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ದೆಹಲಿಯ ನೂತನ ಮುಖ್ಯಮಂತ್ರಿ ಹೆಸರನ್ನು ರಾಷ್ಟ್ರಪತಿ ಅನುಮೋದಿಸಬೇಕಾಗುತ್ತದೆ.
“ಪಕ್ಷ ಸಿಎಂ ಹೆಸರನ್ನು ಅಂತಿಮಪಡಿಸಿದ ಬಳಿಕ ರಾಷ್ಟ್ರಪತಿಗಳು ಲೆಫ್ಟಿನೆಂಟ್ ಗವರ್ನರ್ ಅವರ ಶಿಫಾರಸ್ಸಿನ ಮೇರೆಗೆ ಹೊಸ ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಾರೆ. ಇವರ ಸಚಿವ ಸಂಪುಟ ವಿಧಾನಸಭೆಯಲ್ಲಿ ಸಾಂಘಿಕ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ಇದಕ್ಕೆ 2-3 ದಿನಗಳ ಕಾಲಾವಕಾಶ ಬೇಕು” ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಪಾರದರ್ಶಕತೆ ನಗೆಪಾಟಲಿಗೀಡಾಯಿತೇ?
ಇದಾದ ಬಳಿಕ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಇತರ ಬಿಜೆಪಿ ಆಡಳಿತದ ರಾಜ್ಯಗಳಂತೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.ಪ್ರಧಾನಿ ಈ ತಿಂಗಳ 12-13ರಂದು ಅಮೆರಿಕ ಭೇಟಿ ನೀಡಲಿದ್ದು, ಈ ಕಾರಣದಿಂದ ಪ್ರಮಾಣವಚನ ಸ್ವೀಕಾರ ಫೆಬ್ರುವರಿ 15ರ ಬಳಿಕ ನಡೆಯಲಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿರೀಕ್ಷೆ ಇದ್ದು, ಜಾತಿ, ಅನುಭವ ಹಾಗೂ ರಾಜಕೀಯ ಕಾರ್ಯತಂತ್ರದ ಸಮತೋಲನಕ್ಕೆ ಕರಸತ್ತು ಮಾಡಲಿದೆ.ಈ ಚುನಾವಣೆಯ ಫಲಿತಾಂಶವು ಬಿಜೆಪಿಯ ಸಾಂಪ್ರದಾಯಿಕ ಮತ ಬ್ಯಾಂಕ್ ಎನಿಸಿದ ಪಂಜಾಬಿಗಳು, ಬನಿಯಾಗಳು ಹಾಗೂ ಜುಗ್ಗಿಗಳಲ್ಲಿ ವಾಸಮಾಡುವವರ ಜತೆಗೆ ಇತರರು ಕೂಡ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಗೆ ಮತ ಹಾಕಿರುವುದನ್ನು ದೃಢಪಡಿಸಿದೆ.
ನವದೆಹಲಿ ಸಂಸದೀಯ ಕ್ಷೇತ್ರದಲ್ಲಿ ಏಳು ಸ್ಥಾನಗಳನ್ನು ಗೆಲ್ಲುವ ಮೂಲಕ ಜನ ನಮ್ಮ ಮೇಲೆ ವಿಶ್ವಾಸವಿರಿಸಿದ್ದಾರೆ ಎನ್ನುವುದು ದೃಢಪಟ್ಟಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪಕ್ಷ ಸಿಎಂ ಹುದ್ದೆಗೆ ವ್ಯಕ್ತಿಯನ್ನು ಆಯ್ಕೆ ಮಾಡಲಿದೆ ಎಂದು ಮೂಲಗಳು ವಿವರಿಸಿವೆ.
