ಕೊಲೆ ಆರೋಪಿಯನ್ನು ಬಿಡುಗಡೆ ಮಾಡಲು ಆದೇಶಿಸಿ ಭಾರತದ ರಾಷ್ಟ್ರಪತಿ ಹೆಸರಿನಲ್ಲಿಯೇ ಜೈಲಿಗೆ ನಕಲಿ ಪತ್ರ ಬರೆದಿರುವ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾ ಕಾರಾಗೃಹಕ್ಕೆ ರಾಷ್ಟ್ರಪತಿ ಹೆಸರಿನಲ್ಲಿ ಆದೇಶ ಪತ್ರ ಬಂದಿದೆ. ಆದರೆ, ಜೈಲು ಅಧಿಕಾರಿಗಳು ಪತ್ರದ ಬಗ್ಗೆ ಅನುಮಾನಗೊಂಡು ತನಿಖೆ ನಡೆಸಿದ್ದು, ಅದು ನಕಲಿ ಆದೇಶವೆಂದು ಕಂಡುಹಿಡಿದಿದ್ದಾರೆ.
ಕೊಲೆ ಆರೋಪಿ ಅಜಯ್ ಎಂಬಾತನ ವಿರುದ್ಧ ಜನಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಆತನನ್ನು ಸಹಾರನ್‌ಪುರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು. ಇತ್ತೀಚೆಗೆ, ಆತನನ್ನು ಬಿಡುಗಡೆ ಮಾಡುವಂತೆ ರಾಷ್ಟ್ರಪತಿ ಹೆಸರಿನಲ್ಲಿ ಜೈಲಿಗೆ ನಕಲಿ ಪತ್ರ ಬಂದಿದೆ.
“ಜೈಲು ಆಡಳಿತವು ‘ರಾಷ್ಟ್ರಪತಿ ನ್ಯಾಯಾಲಯ’ದ ಹೆಸರಿನಲ್ಲಿ ಬಂದ ಆದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಪತ್ರವೂ ಅನುಮಾನಾಸ್ಪದವಾಗಿತ್ತು. ಪತ್ರದ ಬಗ್ಗೆ ಪರಿಶೀಲನೆ ನಡೆಸಿದಾಗ, ‘ರಾಷ್ಟ್ರಪತಿ ನ್ಯಾಯಾಲಯ’ ಎಂಬುದೇ ಅಸ್ವಿತ್ವದಲ್ಲಿಲ್ಲ ಎಂಬುದು ಗೊತ್ತಾಯಿತು. ಯಾರೋ ನಕಲಿ ಪತ್ರ ಬರೆದು, ಜೈಲು ಅಧಿಕಾರಿಗಳು ಯಾಮಾರಿಸಲು ಪ್ರಯತ್ನಿಸಿದ್ದಾರೆ” ಎಂದು ಜೈಲು ಅಧಿಕಾರಿ ಸತ್ಯಪ್ರಕಾಶ್ ಹೇಳಿದ್ದಾರೆ.
ರಾಷ್ಟ್ರಪತಿ ಹೆಸರಿನಲ್ಲಿ ನಕಲಿ ಪತ್ರ ಬಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜೈಲು ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಜನಕಪುರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.