ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಸೋತಿದ್ದಾರೆ. ಅವರ ಸೋಲು ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಗೆ ಸಂತೋಷವಾಗಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರವಿಂದ್ ಕೇಜ್ರಿವಾಲ್ ಸೋಲುಂಡಿದ್ದಾರೆ. ಎಎಪಿ ಕೂಡ ಕೇವಲ 22 ಸ್ಥಾನಗಳನ್ನು ಗೆಲ್ಲುವ ಮೂಲಕ ಹೀನಾಯ ಸೋಲು ಕಂಡಿದೆ. ಎಎಪಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅಣ್ಣಾ ಹಜಾರೆ, ‘ಮದ್ಯ ಹಗರಣ, ಅಕ್ರಮ ಹಣ ವರ್ಗಾವಣೆ ಭ್ರಷ್ಟಾಚಾರ ಆರೋಪಗಳಿಂದಲೇ ಕೇಜ್ರಿವಾಲ್-ಎಎಪಿ ಸೋತಿರುವುದು’ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಂಜಯ್ ರಾವತ್, “ಕಳೆದ ಕೆಲವು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹಲವಾರು ಭ್ರಷ್ಟಾಚಾರದ ಆರೋಪಗಳಿವೆ. ಆದರೆ, ಆ ಆರೋಪಗಳ ವಿಚಾರದಲ್ಲಿ ಹಜಾರೆ ಮೌನವಾಗಿರುವುದು ಯಾಕೆ” ಎಂದು ಪ್ರಶ್ನಿಸಿದ್ದಾರೆ.
“ಮೋದಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ ನಡೆದಾಗ ಹಜಾರೆ ಎಲ್ಲಿದ್ದರು? ಕೇಜ್ರಿವಾಲ್ ಸೋಲಿಗೆ ಹಜಾರೆ ಸಂತೋಷವಾಗಿದ್ದಾರೆ. ಪ್ರಸ್ತುತ ಸಮಯದಲ್ಲಿ, ಒಬ್ಬನೇ ಕೈಗಾರಿಕೋದ್ಯಮಿಯ ಕೈಯಲ್ಲಿ ಸಂಪತ್ತು ಕೇಂದ್ರೀಕೃತವಾಗುತ್ತಿದೆ, ದೇಶವನ್ನು ಲೂಟಿ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಹೇಗೆ ಮುಂದುವರಿಯಬಹುದು? ಇಂತಹ ಸಮಯದಲ್ಲಿ ಹಜಾರೆ ಮೌನವಾಗಿರುವುದರ ಹಿಂದಿನ ರಹಸ್ಯವೇನು?” ಎಂದಿದ್ದಾರೆ.
“ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿಯಲ್ಲಿ ಮತದಾರರ ಪಟ್ಟಿ ಭಾರೀ ಗೊಂದಲ, ಅನುಮಾನಗಳನ್ನು ಹುಟ್ಟುಹಾಕಿದೆ. ಬಿಹಾರ ಚುನಾವಣೆಯಲ್ಲಿಯೂ ಇದೇ ರೀತಿಯ ಬೆಳವಣಿಗೆಗಳು ನಡೆಯಬಹುದು. ಆದರೂ, ಅಂತಹ ವಿಚಾರಗಳ ಬಗ್ಗೆ ಹಜಾರೆ ಮೌನವಾಗಿದ್ದಾರೆ” ಎಂದು ರಾವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ, ಚುನಾವಣೆಗಳು ಸಾಂವಿಧಾನಿಕ ನೀತಿ-ನಿಯಮಗಳನ್ನು ಪಾಲಿಸದೆ ನಡೆಯುತ್ತಿವೆ. ಮತಯಂತ್ರ ತಿರುಚುವಿಕೆ, ಮತದಾರರ ಪಟ್ಟಿ ತಿರುಚುವಿಕೆ ಹಾಗೂ ಹಣ ಬಲದಿಂದ ಗೆಲುವು ಸಾಧಿಸಲಾಗುತ್ತಿದೆ” ಎಂದು ರಾವತ್ ಆರೋಪಿಸಿದ್ದಾರೆ.