ಬಾಲಿವುಡ್ ಸಂಗೀತ ಸಂಯೋಜಕ ಪ್ರೀತಮ್ ಚಕ್ರವರ್ತಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು 40 ಲಕ್ಷ ರೂ. ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ, ಅವರ ವ್ಯವಸ್ಥಾಪಕರು ಮಲಾಡ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪೊಲೀಸರ ಪ್ರಕಾರ, ಶಂಕಿತ ಆರೋಪಿಯನ್ನು ಆಶಿಶ್ ಸಾಯಲ್ (32) ಎಂದು ಗುರುತಿಸಲಾಗಿದ್ದು, ಆತನ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎನ್ನಲಾಗಿದೆ.
ಈ ಘಟನೆಯು ಫೆಬ್ರವರಿ 4ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಸಂಭವಿಸಿದೆ. ನಿರ್ಮಾಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಗೋರೆಗಾಂವ್‌ನಲ್ಲಿರುವ ಸಂಗೀತ ಸಂಯೋಜಕ ಪ್ರೀತಮ್ ಅವರ ಸಂಗೀತ ಸ್ಟುಡಿಯೊ ಯೂನಿಮಸ್ ರೆಕಾರ್ಡ್ ಪ್ರೈವೇಟ್ ಲಿಮಿಟೆಡ್‌ಗೆ ಆಗಮಿಸಿ, 40 ಲಕ್ಷ ರೂ. ನಗದು ಹೊಂದಿರುವ ಬ್ಯಾಗ್‌ಅನ್ನು ಅವರ ವ್ಯವಸ್ಥಾಪಕ ವಿನೀತ್ ಚೆಡ್ಡಾಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಚೆಡ್ಡಾರೊಂದಿಗೆ ಸಾಯಲ್, ಅಹ್ಮದ್ ಖಾನ್ ಹಾಗೂ ಕಮಲ್ ದಿಶಾ ಕೂಡಾ ಉಪಸ್ಥಿತರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಪಾರದರ್ಶಕತೆ ನಗೆಪಾಟಲಿಗೀಡಾಯಿತೇ?
“ನಗದು ಸ್ವೀಕರಿಸಿದ ವ್ಯವಸ್ಥಾಪಕರು, ಅದನ್ನು ಕಚೇರಿಯಲ್ಲಿದ್ದ ಟ್ರಾಲಿ ಬ್ಯಾಗ್‌ನಲ್ಲಿಟ್ಟಿದ್ದಾರೆ. ಇದರ ಬೆನ್ನಿಗೇ, ಕೆಲವು ದಾಖಲೆಗಳಿಗೆ ಪ್ರೀತಮ್ ಅವರ ಸಹಿ ಪಡೆಯಲು ಅದೇ ಕಟ್ಟಡದಲ್ಲಿರುವ ಪ್ರೀತಮ್ ಅವರ ನಿವಾಸಕ್ಕೆ ತೆರಳಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ, ಕಚೇರಿಗೆ ಮರಳಿ ಬಂದಾಗ, ತಾನು ನಗದು ಇಟ್ಟಿದ್ದ ಟ್ರಾಲಿ ಬ್ಯಾಗ್ ಕಾಣೆಯಾಗಿರುವುದನ್ನು ಚೆಡ್ಡಾ ಗಮನಿಸಿದ್ದಾರೆ. ಈ ಕುರಿತು ಅವರು ಮೊದಲಿಗೆ ಇತರ ಸಿಬ್ಬಂದಿಗಳನ್ನು ವಿಚಾರಿಸಿದಾಗ ಆ ಬ್ಯಾಗನ್ನು ಪ್ರೀತಮ್ ಅವರ ನಿವಾಸಕ್ಕೆ ಕೊಂಡೊಯ್ಯುವ ಸೋಗಿನಲ್ಲಿ ಸಾಯಲ್ ಅದನ್ನು ಕಚೇರಿಯಿಂದ ಹೊತ್ತೊಯ್ದರು ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.
