ಕಳೆದ ಎರಡು ವರ್ಷಗಳಿಂದ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ನಡೆದಿದ್ದು, ಕೊನೆಗೂ ಸಿಎಂ ಸ್ಥಾನಕ್ಕೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ.
2023ರ ಮೇ 3ರಂದು ಆರಂಭಗೊಂಡಿದ್ದ ಈ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಈವರೆಗೆ ಒಮ್ಮೆಯೂ ಭೇಟಿ ನೀಡಿಲ್ಲ.
ಮಣಿಪುರದಲ್ಲಿ ಈವರೆಗೆ ನಡೆದಿರುವ ಹಿಂಸಾಚಾರದಲ್ಲಿ 142 ಮಂದಿ ಮೃತಪಟ್ಟಿರುವುದಾಗಿ ವರದಿಗಳು ಹೇಳುತ್ತಿದೆ. 60,000ಕ್ಕೂ ಹೆಚ್ಚು ಜನರು ನಿರಾಶ್ರಿತ ಶಿಬಿರಗಳಲ್ಲಿ ಶಿಬಿರಗಳಲ್ಲಿ ದಿನದೂಡುತ್ತಿದ್ದಾರೆ. ಮನೆಮಠ ಕಳೆದುಕೊಂಡು, ಮಕ್ಕಳ ಶಿಕ್ಷಣ ಮರೀಚಿಕೆಯಾಗಿದೆ.
ಈದಿನ ಡಾಟ್ ಕಾಮ್ ತಂಡವು ಮಣಿಪುರಕ್ಕೆ ತೆರಳಿತ್ತಲ್ಲದೇ, ಗ್ರೌಂಡ್ ರಿಪೋರ್ಟ್ ಕೂಡ ಮಾಡಿತ್ತು. ಅಲ್ಲಿ ಕಂಡ ಘೋರ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿತ್ತು.
ಮೇ 3, 2023 ರಂದು ಮಣಿಪುರದ ಕೆಲವು ಭಾಗಗಳಲ್ಲಿ ರಾಜ್ಯದ ಎರಡು ಪ್ರಮುಖ ಸಮುದಾಯಗಳಾದ ಕುಕಿ ಹಾಗೂ ಮೈತೇಯಿ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ಬುಡಕಟ್ಟು, ಮುಖ್ಯವಾಗಿ ಕ್ರಿಶ್ಚಿಯನ್ ಕುಕಿ ಸಮುದಾಯ ಮತ್ತು ಬುಡಕಟ್ಟು ಅಲ್ಲದ, ಮುಖ್ಯವಾಗಿ ಹಿಂದೂ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ) ವರ್ಗಕ್ಕೆ ಸೇರಿಸುವ ಪ್ರಸ್ತಾಪದ ಬಗ್ಗೆ ಘರ್ಷಣೆ ಆರಂಭಗೊಂಡಿತ್ತು. ಅಂದಿನಿಂದ, ಇಂದು ಸಿಎಂ ರಾಜೀನಾಮೆ ನೀಡುವವರೆಗೆ ನಡೆದ ಪ್ರಮುಖ ಬೆಳವಣಿಗೆಗಳ ಬಗ್ಗೆ ಮಣಿಪುರ ಹಾಗೂ ದೇಶದಲ್ಲಿ ನಡೆದ ಪ್ರಮುಖ ಘಟನೆಗಳ ಟೈಮ್‌ಲೈನ್ ಅನ್ನು ಈದಿನ ಡಾಟ್ ಕಾಮ್ ಓದುಗರ ಗಮನಕ್ಕೆ ತರುತ್ತಿದೆ.

ಏಪ್ರಿಲ್ 20, 2023: ಮೈತೇಯಿ ಸಮುದಾಯದ ಎಸ್ಟಿ ಸ್ಥಾನಮಾನದ ಬೇಡಿಕೆಯನ್ನು ಪರಿಗಣಿಸುವಂತೆ ಮಣಿಪುರ ಹೈಕೋರ್ಟ್‌ನ ಏಕಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಶಿಫಾರಸುಗಳನ್ನು ಕಳುಹಿಸಲು ಮೇ 19ರ ಗಡುವನ್ನು ಆದೇಶದಲ್ಲಿ ನಿಗದಿಪಡಿಸಲಾಗಿತ್ತು.
ಏಪ್ರಿಲ್ 28, 2023: ಸರ್ಕಾರದ ವಿರುದ್ಧ ಸಂಪೂರ್ಣ ಬಂದ್‌ಗೆ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್) ಕರೆ ನೀಡಿತು. ಓಪನ್ ಏರ್ ಜಿಮ್ ಉದ್ಘಾಟಿಸಲು ಸಿಎಂ ಬಿರೇನ್ ಸಿಂಗ್ ಚುರಾಚಂದ್ಪುರ ಜಿಲ್ಲೆಗೆ ಭೇಟಿ ನೀಡಬೇಕಿತ್ತು. ಹಿಂದಿನ ದಿನ ಪ್ರತಿಭಟನಾಕಾರರು ಜಿಮ್ ಅನ್ನು ಧ್ವಂಸಗೊಳಿಸಿದ್ದರು. ಚುರಾಚಂದ್ಪುರ ಜಿಲ್ಲೆಯಲ್ಲಿ ಐದು ದಿನಗಳ ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು.
ಮೇ 3, 2023: ಮೈತೇಯಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಮಣಿಪುರ (ಎಟಿಎಸ್ಯುಎಂ) ಮೆರವಣಿಗೆಯನ್ನು ಆಯೋಜಿಸಿತು. ಈ “ಬುಡಕಟ್ಟು ಐಕ್ಯತಾ ಮೆರವಣಿಗೆ”ಯಲ್ಲಿ ಸಾವಿರಾರು ಜನರು ಸೇರಿದ್ದರು. ಹೋರಾಟ ಶಾಂತಿಯುತವಾಗಿ ಕೊನೆಗೊಂಡಿತ್ತು. ಪ್ರತಿಭಟನೆಗೆ ಪ್ರತಿಕ್ರಿಯೆಯಾಗಿ ಮೈತೇಯಿ ಸಮುದಾಯದ ಕೆಲವು ಜನರು “ಕೌಂಟರ್ ಗೇಟ್” ಆಯೋಜಿಸಿದ್ದರು.
ಆಂಗ್ಲೋ-ಕುಕಿ ಯುದ್ಧದ ಶತಮಾನೋತ್ಸವ ಗೇಟ್ ಗೆ ಕೆಲವು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂಬ ಸುದ್ದಿ ಗುಡ್ಡಗಾಡು ಪ್ರದೇಶಗಳಿಗೆ ತಲುಪುತ್ತದೆ. ಇದು ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದ ಸಮುದಾಯಗಳ ಕೆಲವು ಸದಸ್ಯರ ನಡುವೆ ಘರ್ಷಣೆಗೆ ಕಾರಣವಾಯಿತು. ಚುರಾಚಂದ್ಪುರ ಜಿಲ್ಲೆಯಲ್ಲಿ ವಿಧ್ವಂಸಕತೆ, ಅಗ್ನಿಸ್ಪರ್ಶ, ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಗಳು ವರದಿಯಾದವು. ಸುಮಾರು 80 ಜನರು ಗಾಯಗೊಂಡಿದ್ದರು.
My state Manipur is burning, kindly help @narendramodi @PMOIndia @AmitShah @rajnathsingh @republic @ndtv @IndiaToday pic.twitter.com/VMdmYMoKqP
— M C Mary Kom OLY (@MangteC) May 3, 2023
ಮೇ 4, 2023: ಹಿಂಸಾಚಾರದ ಬಗ್ಗೆ ಒಲಿಂಪಿಕ್ ಪದಕ ವಿಜೇತೆ ಬಾಕ್ಸಿಂಗ್ ಪಟು ಮೇರಿ ಕೋಮ್ ಅವರು ಟ್ವಿಟರ್‌ನಲ್ಲಿ ‘ನನ್ನ ಮಣಿಪುರ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ’ ಎಂದು ಬರೆದಿದ್ದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದರು.
ರಾಜ್ಯದ ಹಲವೆಡೆ ನಡೆದ ಹಿಂಸಾಚಾರದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 33 ಜನರಲ್ಲಿ ಮೂವರು ಸಾವನ್ನಪ್ಪಿದ್ದರು. ಇದರಿಂದಾಗಿ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಿ, ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರ ನಡುವೆಯೇ ಸಚಿವಾಲಯದಿಂದ ತೆರಳುತ್ತಿದ್ದಾಗ ಬಿಜೆಪಿ ಶಾಸಕರೊಬ್ಬರ ಮೇಲೆ ಹಲ್ಲೆ ನಡೆಯಿತು. ಬಳಿಕ ನಡೆದ ಘರ್ಷಣೆಯಲ್ಲಿ ನೂರಾರು ಮನೆಗಳು, ಚರ್ಚುಗಳು, ದೇವಾಲಯಗಳು, ವಾಹನಗಳನ್ನು ಧ್ವಂಸಗೊಳಿಸಲಾಗಿತ್ತು.
ಮೇ 5, 2023: ಹಿಂಸಾಚಾರ ಮುಂದುವರಿದು, ಚುರಾಚಂದ್ಪುರ ಜಿಲ್ಲೆಯಲ್ಲಿ ರಾತ್ರಿ ಎರಡು ಪ್ರತ್ಯೇಕ ಎನ್ಕೌಂಟರ್ ನಡೆದು, ಐವರು ಹತರಾದರು. ಈ ನಡುವೆ ನವದೆಹಲಿಯಲ್ಲಿ, ಕೆಲವು ಮಣಿಪುರಿ ವಿದ್ಯಾರ್ಥಿಗಳು “ಮಣಿಪುರವನ್ನು ಉಳಿಸಿ” ಎಂಬ ಫಲಕಗಳೊಂದಿಗೆ ಪ್ರತಿಭಟನೆ ನಡೆಸಿದರು.
ಮೇ 7, 2023: ಬಿಜೆಪಿ ಶಾಸಕ ಮತ್ತು ಹಿಲ್ ಏರಿಯಾಸ್ ಕಮಿಟಿ (ಎಚ್ಎಸಿ) ಅಧ್ಯಕ್ಷ ದಿಂಗಂಗ್ಲುಂಗ್ ಗಂಗ್ಮೆ ಅವರು ಮೈತೇಯಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡುವ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು.
ಮೇ 12, 2023: ಬಿಜೆಪಿ ಶಾಸಕರು ಸೇರಿದಂತೆ ರಾಜ್ಯ ವಿಧಾನಸಭೆಯ ಎಲ್ಲ ಹತ್ತು ಕುಕಿ ಶಾಸಕರು ತಮ್ಮ ಸಮುದಾಯಕ್ಕೆ ಪ್ರತ್ಯೇಕ ಆಡಳಿತವನ್ನು ನೀಡುವಂತೆ ಒತ್ತಾಯಿಸಿದರು. ತಮ್ಮ ಸಮುದಾಯದ ಮೇಲಿನ ಹಿಂಸಾಚಾರವನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ‘ತಂತ್ರಗಾರಿಕೆಯಿಂದ ಬೆಂಬಲಿಸುತ್ತದೆ’ ಎಂದು ಅವರು ಆರೋಪಿಸಿದ್ದರು.
ಮೇ 29, 2023: ಹಿಂಸಾಚಾರದ ಘಟನೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರಿಂದ ರಾಜ್ಯಕ್ಕೆ ಮೂರು ದಿನಗಳ ಭೇಟಿ.
ಜೂನ್ 14, 2023: ಮಣಿಪುರ ಸರ್ಕಾರದ ಏಕೈಕ ಮಹಿಳಾ ಸಚಿವೆ ನೆಮ್ಚಾ ಕಿಪ್ಗೆನ್ ಅವರ ಅಧಿಕೃತ ನಿವಾಸದ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಲಾಗಿತ್ತು.
I came to listen to all my brothers and sisters of Manipur.
— Rahul Gandhi (@RahulGandhi) June 29, 2023
People of all communities are being very welcoming and loving. It’s very unfortunate that the government is stopping me.
Manipur needs healing. Peace has to be our only priority. pic.twitter.com/WXsnOxFLIa
ಜೂನ್ 29, 2023: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ತಂಡವು ಎರಡು ದಿನಗಳ ಕಾಲ ಮಣಿಪುರಕ್ಕೆ ಭೇಟಿ ನೀಡಲು ಆಗಮಿಸಿತ್ತು. ಈ ವೇಳೆ ಸಂಘರ್ಷದ ಕಾರಣವೊಡ್ಡಿ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವು ತಡೆಯೊಡ್ಡಿತ್ತು.

ಜೂನ್ 30, 2023: ಬಿರೇನ್ ಸಿಂಗ್ ರಾಜೀನಾಮೆ ಪತ್ರವನ್ನು ಹರಿದಿದ್ದ ಬೆಂಬಲಿಗರು. ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿರೇನ್ ಸಿಂಗ್ ಘೋಷಿಸಿದ್ದರು. ಇದನ್ನರಿತ ಅವರ ಬೆಂಬಲಿಗರು, ರಾಜೀನಾಮೆ ಪತ್ರವನ್ನು ಕೈಯಿಂದ ಕಿತ್ತೆಸೆದು ಹರಿದು ಹಾಕಿದ್ದರು. ಬಳಿಕ ಯೂಟರ್ನ್ ಹೊಡೆದಿದ್ದ ಬಿರೇನ್ ಸಿಂಗ್ ರಾಜೀನಾಮೆ ನೀಡಲ್ಲ ಎಂದಿದ್ದರು. ಅಲ್ಲದೆ, ಹರಿದು ಹಾಕಿದ್ದ ರಾಜೀನಾಮೆ ಪತ್ರದ ಫೋಟೋವನ್ನು ಖುದ್ದು ಬಿರೇನ್ ಸಿಂಗ್, ಟ್ವೀಟ್ ಮೂಲಕ ಹಂಚಿಕೊಂಡಿದ್ದರು.
Modi spoke about Manipur after almost 90 days of ongoing violence & riots.
— Shantanu (@shaandelhite) July 20, 2023
Even at this time, he didn’t shy away to politicise the issue by mentioning Rajasthan and Chhattisgarh which is Congress-ruled.
Btw, Rajasthan police have taken action and even in Chhattisgarh law and… pic.twitter.com/ub2zoxZCb4
ಜುಲೈ 19, 2023(ಮಹಿಳೆಯರ ಬೆತ್ತಲೆ ಮೆರವಣಿಗೆಯ ವಿಡಿಯೋ): ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿರುವುದನ್ನು ಮತ್ತು ಮೈತೇಯಿ ಸಮುದಾಯದ ಪುರುಷರನ್ನು ಒಳಗೊಂಡ ಗುಂಪು ಸಾಮೂಹಿಕ ಅತ್ಯಾಚಾರ ಎಸಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲಾಯಿತು. ಇದು ಘಟನೆಯು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದವು. ಈ ಘಟನೆ 2023ರ ಮೇ 4 ರಂದು ನಡೆದಿದ್ದವು ಎಂದು ವರದಿಯಾಗಿತ್ತು.

ಜುಲೈ 20, 2023: ಮೇ ತಿಂಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಮೊದಲ ಬಾರಿಗೆ ಮಣಿಪುರದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ನೀಡಿದರು. ಸಂಸತ್ತಿನ ಅಧಿವೇಶನ ಪ್ರಾರಂಭವಾಗುವ ಮೊದಲು ಸಣ್ಣ ಪತ್ರಿಕಾಗೋಷ್ಠಿಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ಉಲ್ಲೇಖಿಸಿ, ಇದು “ಯಾವುದೇ ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ” ಎಂದು ಪ್ರಧಾನಿ ಹೇಳಿಕೆ ನೀಡಿದ್ದರು.
He is Narendra Modi, PM India.
— Dr Nimo Yadav 2.0 (@niiravmodi) July 20, 2023
It took him 90+ days to speak on Manipur issue.
Even while condemning Manipur horrific incident, he didn’t forget to take names of Chhattisgarh and Rajasthan.
Please don’t politicise this issue sir, you are PM of India, not of BJP 🙏🏿 pic.twitter.com/xJD0psVhnQ
ಬಳಿಕ ವೈರಲಾದ ವಿಡಿಯೋವನ್ನು ಗಮನಿಸಿದ ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಸಿಜೆಐ ಡಿ.ವೈ.ಚಂದ್ರಚೂಡ್, “ನಾವು ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಸ್ವಲ್ಪ ಸಮಯ ನೀಡುತ್ತೇವೆ, ಇಲ್ಲದಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ. ಇದು ತೀವ್ರ ಕಳವಳಕಾರಿ” ಎಂದಿದ್ದರು. ಅದರ ಬೆನ್ನಲ್ಲೇ ವೀಡಿಯೊದಲ್ಲಿ ಕಂಡುಬಂದ ನಾಲ್ವರು ಆರೋಪಿಗಳನ್ನು ಮಣಿಪುರ ಪೊಲೀಸರು ಬಂಧಿಸಿದ್ದರು. ಸದ್ಯ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.
ಜುಲೈ 30, 2023: ಪರಿಸ್ಥಿತಿಯನ್ನು ಪರಿಶೀಲಿಸಲು ಲೋಕಸಭೆಯ ಪ್ರತಿಪಕ್ಷ ನಾಯಕರ 21 ಸದಸ್ಯರ ತಂಡ ರಾಜ್ಯಕ್ಕೆ ಭೇಟಿ ನೀಡಿತ್ತು.

ಆಗಸ್ಟ್ 7, 2023: ಕುಕಿ ಪೀಪಲ್ಸ್ ಅಲೈಯನ್ಸ್ ಎನ್ ಬಿರೇನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದೆಗೆದುಕೊಂಡಿತು.
ಆಗಸ್ಟ್ 10, 2023: ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ ಪ್ರತಿಪಕ್ಷಗಳು. ಮಣಿಪುರದ ಪರಿಸ್ಥಿತಿಯ ಬಗ್ಗೆ ಮಾತನಾಡುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದರು.
ಸೆಪ್ಟೆಂಬರ್ 4, 2023: ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪ ಹೊರಿಸಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ವಿರುದ್ಧ ಮಣಿಪುರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸೆಪ್ಟೆಂಬರ್ 2ರಂದು ಮಣಿಪುರದಲ್ಲಿ ಮಾಧ್ಯಮ ಪ್ರಸಾರದ ಬಗ್ಗೆ ವರದಿಯನ್ನು ಬಿಡುಗಡೆ ಮಾಡಿತ್ತು.
ಸೆಪ್ಟೆಂಬರ್ 23, 2023: ಮೇ ತಿಂಗಳಲ್ಲಿ ಸ್ಥಗಿತಗೊಂಡಿದ್ದ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಲು ಸರ್ಕಾರ ಆದೇಶಿಸಿತು.
ಸೆಪ್ಟೆಂಬರ್ 28, 2023: ಕರ್ಫ್ಯೂ ಉಲ್ಲಂಘಿಸಿ ಇಂಫಾಲ್ನಲ್ಲಿರುವ ಸಿಎಂ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದರು.
ಡಿಸೆಂಬರ್ 4, 2023: ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಸರ್ಕಾರ ತೆಗೆದುಹಾಕಿತು.
ಡಿಸೆಂಬರ್ 14, 2023: ಮೇ ತಿಂಗಳಿನಿಂದ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ 64 ಜನರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಂಡಿತ್ತು.
ಫೆಬ್ರವರಿ 15, 2024: ಚುರಾಚಂದ್ಪುರ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕಚೇರಿಗಳಿರುವ ಸರ್ಕಾರಿ ಸಂಕೀರ್ಣಕ್ಕೆ ನುಗ್ಗಿದ ಜನರ ಗುಂಪು, ವಾಹನಗಳಿಗೆ ಬೆಂಕಿ ಹಚ್ಚಿ, ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿತ್ತು. ಪೊಲೀಸರ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ, ಮತ್ತೊಮ್ಮೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಮಾರ್ಚ್ 2024: ಮಾರ್ಚ್ 31 ರಂದು ಬಂದ ಈಸ್ಟರ್ ಭಾನುವಾರವನ್ನು ಎಲ್ಲ ಸರ್ಕಾರಿ ನೌಕರರಿಗೆ ಕೆಲಸದ ದಿನವೆಂದು ಬಿರೇನ್ ಸಿಂಗ್ ಸರ್ಕಾರ ಆದೇಶ ಹೊರಡಿಸಿತ್ತು. ರಾಜ್ಯದ ಕ್ರಿಶ್ಚಿಯನ್ ಸಮುದಾಯದ ಆಕ್ರೋಶದ ನಂತರ ಈ ಆದೇಶವನ್ನು ಹಿಂದೆಗೆದುಕೊಳ್ಳಲಾಗಿತ್ತು.
ಏಪ್ರಿಲ್ 2024: ಮಣಿಪುರದ ಎರಡು ಸ್ಥಾನಗಳಿಗೆ ಕ್ರಮವಾಗಿ ಏಪ್ರಿಲ್ 19 ಮತ್ತು 26 ರಂದು ಮೊದಲ ಮತ್ತು ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆಯಿತು. ಮೊದಲ ಹಂತದಲ್ಲಿ ಹಿಂಸಾಚಾರ, ಮತದಾರರ ಬೆದರಿಕೆ ಮತ್ತು ಬೂತ್ ವಶಪಡಿಸಿಕೊಳ್ಳುವ ಘಟನೆಗಳು ವರದಿಯಾಗಿದ್ದವು. ಏಪ್ರಿಲ್ 22 ರಂದು 11 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿತ್ತು. ಎರಡನೇ ಹಂತದಲ್ಲಿಯೂ ಗಲಭೆಯ ಘಟನೆಗಳು ವರದಿಯಾಗಿದ್ದವು.
ಜೂನ್ 4, 2024: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟ; ಎರಡೂ ಲೋಕಸಭಾ ಕ್ಷೇತ್ರ ಅಂದರೆ ಇನ್ನರ್ ಮಣಿಪುರ ಹಾಗೂ ಔಟರ್ ಮಣಿಪುರ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್(ಇಂಡಿಯಾ ಮೈತ್ರಿಕೂಟ) ಜಯಗಳಿಸಿತ್ತು.
ಫೆ.09: 2025: ಮಣಿಪುರದ ಮುಖ್ಯಮಂತ್ರಿ ಸ್ಥಾನಕ್ಕೆ ಎನ್ ಬಿರೇನ್ ಸಿಂಗ್ ಕೊನೆಗೂ ರಾಜೀನಾಮೆ.
