ರೋಗಮುಕ್ತ ಆರೋಗ್ಯಕರ ಬದುಕಿಗೆ ಸಾವಯವ ಕೃಷಿ ಹಾಗೂ ಸಿರಿಧಾನ್ಯ ಬಳಕೆ ಅತ್ಯವಶ್ಯವೆಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ʼಆಧುನಿಕ ಕಾಲದಲ್ಲಿ ಎಲ್ಲೆಡೆ ಮಾಲಿನ್ಯ ಕಾಣುತ್ತಿದ್ದೇವೆ. ಪ್ರಕೃತಿ ವಿಕೋಪ, ಬರಗಾಲ, ಪ್ರವಾಹ, ಹವಾಮಾನ ವೈಪರಿತ್ಯದಂತಹ ಅಗಾಧ ಪರಿಸ್ಥಿತಿಯಲ್ಲಿ ಜನರು ಒತ್ತಡದ ಜೀವನ ಸಾಗಿಸುತ್ತಿದ್ದಾರೆ. ವಿವಿಧ ರೋಗಗಳಿಗೆ ಅಂಟಿಕೊಂಡಿದ್ದಾರೆ. ಆದ್ದರಿಂದ ಗುಣಮಟ್ಟದ ಸತ್ವಯುತ ಆಹಾರ ಧಾನ್ಯ ಬಳಕೆ ಅಗತ್ಯವಾಗಿದೆ. ಸಾರ್ವಜನಿಕರು ಸಾವಯವ ಕೃಷಿ ಹಾಗೂ ಸಿರಿಧಾನ್ಯ ಬಳಕೆಯಿಂದ ಆರೋಗ್ಯಕರ ಜೀವನ ನಡೆಸಬಹುದು. ಸರಕಾರವು ಈ ನಿಟ್ಟಿನಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿದ್ದು ಸಿರಿಧಾನ್ಯ ಬಳಕೆಗೆ ಪ್ರಶಸ್ತ್ಯ ನೀಡಿದೆ. ಎಲ್ಲ ಜಿಲ್ಲೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆʼ ಎಂದರು.

ʼನಮ್ಮ ಪೂರ್ವಜರು ಪರಿಸರ ಪೂರಕ ಸಾವಯವ ಕೃಷಿಗೆ ಒತ್ತು ನೀಡಿದ್ದರು. ಉತ್ತಮ ಗುಣಮಟ್ಟದ ಆಹಾರ ಧಾನ್ಯ ಬಳಸುತ್ತಿದ್ದರು. ಪೌಷ್ಠಿಕಾಂಶ ಭರಿತ ಸಿರಿಧಾನ್ಯಗಳು ಉಳಿದೆಲ್ಲ ಧಾನ್ಯಗಳಿಗಿಂತ ಶ್ರೇಷ್ಠ. ಎಲ್ಲ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ, ಕೀಟ ಹಾಗೂ ರೋಗವಿಲ್ಲದೆ ರಸಾಯನಿಕ ಮುಕ್ತವಾಗಿ ಬೆಳೆದು ಉತ್ತಮ ಆರೋಗ್ಯ ನಿರ್ಮಾಣಕ್ಕೆ ಸಹಾಯವಾಗುತ್ತವೆ. ಸಿರಿಧಾನ್ಯಗಳನ್ನು ಪ್ರತಿನಿತ್ಯ ಬಳಸುವುದರಿಂದ ಅನೇಕ ರೋಗಗಳು ವಾಸಿಯಾದ ಉದಾಹರಣೆಗಳಿವೆʼ ಎಂದು ತಿಳಿಸಿದರು.
ʼಈಗ ಕೃಷಿ ಕ್ಷೇತ್ರವು ಕವಲು ದಾರಿಯಲ್ಲಿದೆ, ರೈತರ ಬೆಳೆಗೆ ಸರಿಯಾದ ಬೆಂಬಲ ಬೆಲೆ ದೊರೆಯಬೇಕಿದೆ, ಸ್ವಾಮಿನಾಥನ್ ಆಯೋಗದ ಪ್ರಕಾರ ವೈಜ್ಞಾನಿಕ ಬೆಲೆ ನಿಗದಿಯಾಗಬೇಕಿದೆʼ ಎಂದರು.
ʼಕೃಷಿ ಹೆಚ್ಚು ಲಾಭದಾಯಕ ಆಗುವ ನಿಟ್ಟಿನಲ್ಲಿ ರೈತರೇ ಕಾಲಕ್ಕೆ ಅನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ವಿಜ್ಞಾನಿಗಳನ್ನು ಸಂಪರ್ಕಿಸಿ ಆರ್ಥಿಕವಾಗಿಯೂ ಸದೃಢವಾಗಬೇಕಿದೆ. ಸಿರಿಧಾನ್ಯ ಬಳಕೆಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಸಾವಯವ ಕೃಷಿ ವಿಸ್ತರಣೆಗೆ ರೈತರು ಸಿದ್ದರಾಗಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ಸಖಿಯರು ಗ್ರಾಮಗಳಲ್ಲಿ ಹೆಚ್ಚೆಚ್ಚು ತಿಳುವಳಿಕೆ ಮೂಡಿಸಬೇಕುʼ ಎಂದು ಹೇಳಿದರು.

ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಮಾತನಾಡಿ, ʼಸಾವಯವ ಕೃಷಿ ಮಿಷನ ರಾಜ್ಯದ ರೈತರಿಗೆ ಮತ್ತೊಮ್ಮೆ ಸಿಗುವಂತಾಲಿ. ರಾಜ್ಯದ ಎಲ್ಲ ರೈತರು ಸಾವಯವ ಕೃಷಿ ಬೆಳೆದು ಒಳ್ಳೆಯ ಬೆಲೆ ಸಿಗುವಂತಾಗಲಿʼ ಎಂದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕ 50 | ಒಕ್ಕೂಟ ವ್ಯವಸ್ಥೆಗೆ ಮಾರಕವಾದ ರಾಜ್ಯಪಾಲರ ರಾಜಕಾರಣ
ಬೀದರ ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು ರಾಜ್ಯ ಪ್ರತಿನಿಧಿ ವಿಶ್ವನಾಥ ಪಾಟೀಲ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ ಬದೋಲೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ., ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಭವಾನಿ ಕೆ, ಡಾ.ಸುನಿಲಕುಮಾರ ಎನ್.ಎಮ್., ಕೃಷಿ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಸಹಾಯಕ ನಿರ್ದೇಶಕ ಅನ್ಸಾರಿ ಸೇರಿದಂತೆ ಕೃಷಿ ಸಖಿಯರು, ರೈತ ಮುಖಂಡರು, ರೈತರು ಸೇರಿದಂತೆ ಕೃಷಿ ಇಲಾಖೆ ಸಿಬ್ಬಂದಿ, ರೈತರು ಉಪಸ್ಥಿತರಿದ್ದರು.