1948 ರಲ್ಲಿ ಮಹಾತ್ಮ ಗಾಂಧಿ ಚಿತಾಭಸ್ಮವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ತಟದಲ್ಲಿ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಚಂಗಲರಾಯ ರೆಡ್ಡಿಯವರ ನೇತೃತ್ವದಲ್ಲಿ ವಿಸರ್ಜನೆ ಮಾಡಲಾಗಿತ್ತು. ಗಾಂಧಿಯವರ ನೆನಪಾರ್ಥವಾಗಿ ಶಿಷ್ಯರು, ಅನುಯಾಯಿಗಳು ಪ್ರತಿ ವರ್ಷ ಸರ್ವೋದಯ ಮೇಳ ಕಾರ್ಯಕ್ರಮ ಆರಂಭಿಸಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಸಂಭ್ರಮ ಮಾಸುವ ಮುನ್ನವೇ ಜನವರಿ 30,1948 ರಂದು ಸಂಜೆಯ ಪ್ರಾರ್ಥನೆಯ ವೇಳೆ ನಾಥೂರಾಮ್ ಗೋಡ್ಸೆಯಿಂದ ಗಾಂಧೀಜಿ ಹತ್ಯೆಗೊಳಗಾದರು. ಆದರೆ, ‘ಗಾಂಧೀಜಿಯವರನ್ನು ಕೊಲ್ಲಲು ಸಾಧ್ಯವಾಯಿತೇ ವಿನ್ಹ, ಗಾಂಧಿ ತತ್ವ, ಸಿದ್ಧಾಂತಗಳನ್ನಲ್ಲ. ದೇಹಕ್ಕೆ ಮುಕ್ತಿ ಹೊರತು ಗಾಂಧಿ ಮಾರ್ಗಕ್ಕಲ್ಲ ಇವತ್ತಿಗೂ ಪ್ರಸ್ತುತ, ಎಂದಿಗೂ ನಿದರ್ಶನ’.
ಫೆ.12,1948 ರಲ್ಲಿ ಮೈಸೂರು ರಾಜ್ಯದ ಅಂದಿನ ಮುಖ್ಯಮಂತ್ರಿಗಳಾದ ಕೆ ಚಂಗಲರಾಯ ರೆಡ್ಡಿ ಅವರ ನೇತೃತ್ವದಲ್ಲಿ ಗಾಂಧಿ ಚಿತಾಭಸ್ಮ ವಿಸರ್ಜಿಸಿ ಕಾವೇರಿ ತಟದಲ್ಲಿ ಕಲ್ಲಿನ ಫಲಕದ ಸ್ಮಾರಕ ಸ್ಥಾಪಿಸಿದ್ದರು. ಬಳಿಕ ಪ್ರತಿ ವರ್ಷ ಗಾಂಧಿ ಅನುಯಾಯಿಗಳು ಮೂರು ದಿನಗಳ ಕಾಲ ಆಶ್ರಮ ಪ್ರಾರ್ಥನೆ, ಗಾಂಧಿ ವಿಚಾರಧಾರೆ ಕುರಿತಾಗಿ ಮಂಥನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ವೋದಯ ಮೇಳ ನಡೆಸುತಿದ್ದರು.

ಕ್ರಮೇಣ ಗಾಂಧಿ ಅನುಯಾಯಿಗಳ ಬರುವಿಕೆಯ ಸಂಖ್ಯೆ ಗಣನೀಯವಾಗಿ ಕಡಿಮೆ ಆದಂತೆ ಶ್ರೀರಂಗಪಟ್ಟಣದ ವೈದ್ಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಸಿ ಬಂಧಿಗೌಡ ಅವರು ಬೆರಳೆಣಿಕೆಯಷ್ಟು ಅನುಯಾಯಿಗಳನ್ನು ಸೇರಿಸಿಕೊಂಡು ಸರ್ವೋದಯ ಮೇಳ ನಡೆಸಿಕೊಂಡು ಬಂದರು.ಮೊದ ಮೊದಲಿಗೆ ಪಶ್ಚಿಮವಾಹಿನಿಯ ಮಹಾರಾಜರ ಛತ್ರದಲ್ಲಿ, ನಂತರದಲ್ಲಿ ಚಂದ್ರಗಿರಿ ಚೆಲುವರಾಯ ಶೆಟ್ಟಿ ಛತ್ರ, ಬರ ಬರುತ್ತಾ ಧರ್ಮ ರತ್ನಾಕರ ನಂದಿ ಬಸಪ್ಪ ಛತ್ರದಲ್ಲಿ ಸರ್ವೋದಯ ಮೇಳ ನಡೆಯಿತು.
ಗಾಂಧಿವಾದಿ ಹಾಗೂ ವೈದ್ಯರಾದ ಡಾ ಸುಜಯ್ ಕುಮಾರ್ ಹಾಗೂ ಸಮಾನ ಮನಸ್ಕರರು ಸೇರಿ ಕಳೆದ ಹನ್ನೆರೆಡು ವರ್ಷಗಳಿಂದ ಪಟ್ಟಣದ ಸುಬ್ರಹ್ಮಣೇಶ್ವರ ಕಲ್ಯಾಣ ಮಂಟಪದಲ್ಲಿ ಗಾಂಧಿ ಮಾರ್ಗ, ಅಹಿಂಸೆ, ಚಳುವಳಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರಗಳನ್ನೊಳಗೊಂಡ ವಿಚಾರ ಗೋಷ್ಠಿ ಮೂಲಕ ಈ ವರೆಗೆ ಸರ್ವೋದಯ ಮೇಳ ನಡೆದುಕೊಂಡು ಬಂದಿದೆ.

ಸರ್ವೋದಯ ಮೇಳದಲ್ಲಿ ಆಚಾರ್ಯರಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ಸುಚೇತ್ರ ಕೃಪಲಾನಿ, ಸರ್ವೋದಯ ಮಂಡಲದ ಅಧ್ಯಕ್ಷರಾಗಿದ್ದ ಸತ್ಯವ್ರತ, ಸ್ವಾತಂತ್ರ್ಯ ಹೋರಾಟಗಾರ ಸೀತಾರಾಮ ಅಯ್ಯಂಗಾರ್, ಗಾಂಧೀಜಿ ಸಹಪಾಠಿ ದಾದಾ ಧರ್ಮಾಧಿಕಾರಿ, ಎಚ್ ಎಸ್ ದೊರೆಸ್ವಾಮಿ, ಎಂ ಎನ್ ಜೋಯಿಸ್, ನೀಲತ್ತಹಳ್ಳಿ ಭದ್ರಯ್ಯ, ವೆಂಕೋಬ ರಾವ್, ಶಂಕರ ಉತ್ತೂರು, ಸುರೇಂದ್ರ ಕೌಲಗಿ, ಗೊರೂರು ಗರುಡ ಶರ್ಮಾ, ವೆಂಕೋಬರಾವ್, ಅನಂತ ರಂಗಾಚಾರ್, ಪ್ರಾಣೇಶ್ ರಾವ್ ಸೇರಿದಂತೆ ಪ್ರಮುಖರ ಸಾರಥ್ಯದಲ್ಲಿ ನಡೆದಿದೆ.
ಇತ್ತೀಚಿಗಿನ ವರ್ಷಗಳಲ್ಲಿ ಗಾಂಧಿ ಅನುಯಾಯಿಗಳಾದ ಕಾಸರಗೋಡಿನ ಸದಾಶಿವ ಶೆಣೈ, ಆ ಶ್ರೀಧರ, ನಾರಾಯಣ ರೆಡ್ಡಿ, ಡಾ ಎಚ್ ಎಸ್ ಅನುಪಮಾ, ಕೆ ಪಿ ಸುರೇಶ್, ಜಿ ಎಸ್ ಜಯದೇವ, ಸವಿತಾ ನಾಗಭೂಷಣ್, ಶಂಕರ ದೇವನೂರು ಇದುವರೆಗೆ ವಿಚಾರ ಮಂಡಿಸಿದ್ದಾರೆ.
ಆಧುನಿಕ ಸಮಾಜಕ್ಕೆ ತೆರೆದುಕೊಂಡಂತೆಲ್ಲ ಪ್ರಸ್ತುತ ಸಮಾಜಕ್ಕೆ ಗಾಂಧಿ ಪ್ರಾಮುಖ್ಯತೆ, ಗಾಂಧಿ ವಿಚಾರಧಾರೆ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಯಾಗುತ್ತಿದೆ. ಪ್ರಸ್ತುತ ಸಮಾಜದ ಅಗತ್ಯಾನುಸಾರ ಪ್ರಜಾಪ್ರಭುತ್ವದ ಮೌಲ್ಯಗಳು, ಚುನಾವಣೆ ಮಹತ್ವ, ಮತದಾನದ ಪ್ರಾಮುಖ್ಯತೆ, ಶಿಕ್ಷಣ ನೀತಿ, ನಿರುದ್ಯೋಗ, ಯುವ ನಾಯಕತ್ವ, ಸಮಾಜದಲ್ಲಿ ಮಾಧ್ಯಮಗಳ ಮಹತ್ವ, ಸಾಮಾಜಿಕ ಹೊಣೆಗಾರಿಕೆ, ಮಹಿಳಾ ಸ್ವಾತಂತ್ರ್ಯ ಹೀಗೆ ಹತ್ತಾರು ವಿಚಾರಗಳ ಮೇಲೆ ಗೋಷ್ಠಿಗಳು ನಡೆದಿವೆ.

ಈದಿನ. ಕಾಮ್ ಜೊತೆ ಮಾತನಾಡಿದ ಗಾಂಧಿವಾದಿ ಹಾಗೂ ವೈದ್ಯರಾದ ಡಾ ಸುಜಯ್ ಕುಮಾರ್ , “ಸರ್ವೋದಯ ಮೇಳ ದೇಶದಲ್ಲಿ ನಿರಂತರವಾಗಿ ಒಂದು ವರ್ಷವೂ ತಪ್ಪದಂತೆ ನಡೆದುಕೊಂಡು ಬಂದಿದೆ ಅಂದ್ರೆ ಅದು ಶ್ರೀರಂಗಪಟ್ಟಣದಲ್ಲಿ ಮಾತ್ರ.ಮೊದಲಿಗೆ ಗಾಂಧೀಜಿ ಶಿಷ್ಯರು, ಅನುಯಾಯಿಗಳು ನಡೆಸುತ್ತಿದ್ದರು. ಕಾಲ ಕಳೆದಂತೆಲ್ಲ ತಂದೆಯವರಾದ ಬಂಧಿಗೌಡರು ರೂವಾರಿಗಳಾಗಿ ನಡೆಸಿಕೊಂಡು ಬಂದಿದ್ದಾರೆ” ಎಂದು ತಿಳಿಸಿದರು.
ನನಗೆ 60 ರ ದಶಕದಿಂದ ನೆನಪಿದೆ. ಅಂದು ಐದು ದಿನಗಳ ಸರ್ವೋದಯ ಮೇಳ ಜರುಗುತ್ತಾ ಇತ್ತು. ಕಡೆಗೆ ದಿನದ ಮಟ್ಟಿಗೆ ನಡೆದಿದ್ದು ಇದೆ. ಆದರೆ ಗಾಂಧೀಜಿ ಆದರ್ಶ ಮೈಗೂಡಿಸಿಕೊಂಡವರು, ಸಮಾನ ಮನಸ್ಕರರು ಸೇರಿದಂತೆಲ್ಲ ಪ್ರತಿ ವರ್ಷ ಚಾಚು ತಪ್ಪದೆ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ. ಇದರಲ್ಲಿ ವಿಶೇಷ ಅಂದರೆ ನಾ ಖಂಡಂತೆ ಅತಿ ಹೆಚ್ಚು ಬಾರಿ ಸರ್ವೋದಯ ಮೇಳದಲ್ಲಿ ಬಹಳ ಉತ್ಸಾಹದಿಂದ, ಸ್ವತಃ ಭಾಗಿಯಾಗುತ್ತಿದ್ದವರು ಶತಾಯುಷಿ, ಹಿರಿಯ ಸ್ವಾತಂತ್ರ್ಯ ಸೇನಾನಿ ಎಚ್ ಎಸ್ ದೊರೆಸ್ವಾಮಿಯವರು. ಜತೆಗೆ ಕಾರ್ಯಕ್ರಮಕ್ಕೆ ಯಾರೇ ಆಗಲಿ ಸ್ವಂತ ಹಣದಲ್ಲಿ, ಯಾವುದೇ ಅಪೇಕ್ಷೆ ಇರದೆ ಪಾಲ್ಗೊಂಡು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಎಂದು ಅಭಿಮಾನದಿಂದ ಹೇಳಿದರು.
ಈ ಬಾರಿಯು ಫೆ.10ರಿಂದ 12ರವರೆಗೆ ಸರ್ವೋದಯ ಮೇಳವು ನಡೆಯಲಿದೆ. ಫೆ.10ರ ಸಂಜೆ 7 ಗಂಟೆಗೆ ಚರ್ಚೆ, 8 ಗಂಟೆಗೆ ಆಶ್ರಮ ಪ್ರಾರ್ಥನೆ ನಡೆಯಲಿದೆ. ಫೆ.11 ರ ಬೆಳಗ್ಗೆ 8 ಕ್ಕೆ ಆಶ್ರಮ ಪ್ರಾರ್ಥನೆ, ಬೆಳಗ್ಗೆ 10 ಗಂಟೆಗೆ ಹಿರಿಯ ಪತ್ರಕರ್ತ ಹಾಗೂ ಪರಿಸರ ತಜ್ಞರಾದ ನಾಗೇಶ್ ಹೆಗ್ಡೆ ಅವರಿಂದ ‘ ಗಾಂಧಿ ಮತ್ತು ಯಾಂತ್ರಿಕ ಬುದ್ಧಿಮತ್ತೆ’ ಕುರಿತಾಗಿ ವಿಚಾರ ಮಂಡಿಸಲಿದ್ದಾರೆ. ಫೆ.12 ರಂದು ಬೆಳಗ್ಗೆ 10 ಗಂಟೆಗೆ ಶಿಕ್ಷಣ ತಜ್ಞ ಹಾಗೂ ಕೃಷಿಕ ಬಿಳಿಗೆರೆ ಕೃಷ್ಣಮೂರ್ತಿ ‘ ಕೃಷಿ ಮತ್ತು ಆಹಾರ ‘ ಕುರಿತು ವಿಚಾರ ಮಂಡಿಸಲಿದ್ದಾರೆ. ಗಾಂಧಿವಾದಿ ಚಾಮರಾಜನಗರದ ವೆಂಕಟರಾಜು ಈ ಮೂರು ದಿನಗಳ ಕಾರ್ಯಕ್ರಮದ ಆಚಾರ್ಯರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.

ಶಿಕ್ಷಕರಾದ ಕ್ಯಾತನಹಳ್ಳಿ ಚಂದ್ರಣ್ಣ ಮಾತನಾಡಿ, ಗಾಂಧೀಜಿ ಅವರ ಮಾರ್ಗ ಎಂದಿಗೂ ಅನುಕರಣೀಯ. ಯಾವುದೇ ಹೋರಾಟ ಆಗಲಿ ಅಹಿಂಸೆಯಿಂದ ಕೂಡಿರಲು, ಹೋರಾಟ ನಡೆಸಲು ಸ್ಫೂರ್ತಿ. ಇಂದಿನ ಪೀಳಿಗೆ ಶ್ರಮರಹಿತ ಜೀವನದ ಕಡೆ ಮುಖ ಮಾಡಿದೆ. ಆದರೆ ಗಾಂಧೀಜಿ ಸ್ವ ಉದ್ಯೋಗ, ಶ್ರಮದ ಜೀವನದ ಮೌಲ್ಯಗಳನ್ನು ಸಾರಿದವರು ಎಂದು ತಿಳಿಸಿದರು.
‘ಗಾಂಧೀಜಿ ತತ್ವ, ಸರಳತೆ ಎಂದಿಗೂ ಮಾದರಿ ಯುವ ಪೀಳಿಗೆ ಓದುವುದು, ಅರಿಯುವುದು, ತಿಳುವಳಿಕೆ ಸಾಧಿಸುವುದು ಅತ್ಯಗತ್ಯ. ಗಾಂಧಿ ಎಂದರೆ ವ್ಯಕ್ತಿಯಲ್ಲ ಅದೊಂದು ಶಕ್ತಿ’ ಅನ್ನುವುದನ್ನು ಇವತ್ತಿನ ಯುವ ಸಮೂಹ ಅರ್ಥ ಮಾಡಬೇಕು ಎಂದು ಸಲಹೆ ನೀಡಿದರು.
ಇವತ್ತಿನ ಪೀಳಿಗೆಗೆ ಗಾಂಧೀಜಿಯವರ ಕನಸಿನ ಅನವಾರಣ ಆಗಬೇಕು ಅದಕ್ಕಿರುವ ಮಾರ್ಗ ಎಂದರೆ ಓದುವ ಹವ್ಯಾಸ. ಇಂತಹ ಸರ್ವೋದಯ ಮೇಳದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳು ವಿಚಾರ ಆಲಿಸಬೇಕು ಎಂದರು.

ವಕೀಲರಾದ ವೆಂಕಟೇಶ್ ಮಾತನಾಡಿ, ಒಂದು ಕಾಲದಲ್ಲಿ ಸತ್ಯಾಗ್ರಹಿ ಅಂದರೆ ಯಾವ ಬೇಲ್ (ಮುಚ್ಚಳಿಕೆ) ಅಗತ್ಯ ಇರಲಿಲ್ಲ, ಅದನ್ನೇ ಬರೆದು ಕಳಿಸುತಿದ್ದರು. ನ್ಯಾಯಾಲಯದಲ್ಲಿ ಕಲಾಪದ ಸಮಯಕ್ಕೆ ಆ ಸತ್ಯಾಗ್ರಹಿ ಕೂಡ ತಪ್ಪದೆ ಆ ಕ್ಷಣಕ್ಕೆ ಹಾಜರು ಇರುತಿದ್ದರು. ಇದೇ ಗಾಂಧೀ ಮಾರ್ಗ. ಆದರೆ ಇವತ್ತು ಅಂತಹ ಪರಿಸ್ಥಿತಿ ಇಲ್ಲ ಯಾರ ಮೇಲು ಯಾರಿಗೂ ವಿಶ್ವಾಸವಿಲ್ಲ ಎಂದು ಹೇಳಿದರು.
ಗಾಂಧಿ ಎಂದಿಗೂ ಪ್ರಸ್ತುತ, ವಿದೇಶದಿಂದ ಬಂದ ಗಾಂಧಿ ನನ್ನ ಜನರಿಗೆ ತೊಡಲು, ಉಡಲು ಬಟ್ಟೆಯಿಲ್ಲ ನಾನು ಸೂಟು ಬೂಟಿನಲ್ಲಿ ಇದ್ದರೆ ಅದು ಸರಿಯು ಅಲ್ಲ ಅನ್ನುವ ಸರಳತೆಯ ಜೀವನಕ್ಕೆ ಮಾದರಿಯಾಗಿ ಬದುಕಿದವರು. ಹಿಂಸೆಗೆ ಎಂದು ಪ್ರಚೋದನೆ ನೀಡದೆ ಅಹಿಂಸಾ ಮಾರ್ಗ ಪಾಲಿಸಿ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ. ಇಂದಿಗೂ ದೇಶದಲ್ಲಿ ಯಾವುದೇ ಹೋರಾಟ ನಡೆಯಲಿ ಅಲ್ಲಿ ಅಹಿಂಸೆ ತತ್ವ ಪಾಲನೆ ಆಗುತ್ತದೆ. ಗಾಂಧಿ ಮಾರ್ಗ ಅನುಸರಣೆ ಆಗುತ್ತದೆ. ಇದೇ ಗಾಂಧಿ ನಮಗೆ ಬಿಟ್ಟು ಹೋದ ಬಳುವಳಿ. ನಾವು ಗಾಂಧೀಜಿಯವರ ಬಗ್ಗೆ ತಿಳಿಯುವಂತಹ ಕೆಲಸ ಮಾಡಬೇಕು, ಅವರ ಮಾರ್ಗದಲ್ಲಿ ನಡೆಯಬೇಕು ಆಗ ನಿಜವಾದ ಬದುಕಿಗೆ ಅರ್ಥ ಬರುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 20 ವರ್ಷ ಜೈಲು
ಪಶ್ಚಿಮವಾಹಿನಿಯ ಕಾವೇರಿ ತಟದಲ್ಲಿರುವ ಗಾಂಧೀಜಿ ಚಿತಾಭಸ್ಮ ವಿಸರ್ಜಿತ ಸ್ಥಳದಲ್ಲಿರುವ ಕಲ್ಲಿನ ಸ್ಮಾರಕ ಫಲಕ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಮಾಹಿತಿಯ ಕೊರತೆಯು ಇದೆ, ಇತಿಹಾಸದ ಕುರುಹಾಗಿರುವ ಸ್ಮಾರಕ ಕೈತಪ್ಪುವಂತೆ ಕಾಣುತ್ತಿದೆ. ಕಾರಣ ಸಧ್ಯ ಅಲ್ಲಿಯ ಸುತ್ತಲೂ ಪಿಂಡ ಪ್ರಧಾನ ಕಾರ್ಯ ನಡೆಯುತ್ತಿದೆ. ಕರ್ಮಾಧಿ ಕಾರ್ಯಗಳು, ವಾಮಾಚಾರದ ತಂತ್ರಗಾರಿಕೆಗಳು, ಸ್ನಾನ, ಬಹಿರ್ದೆಸೆ ಇನ್ನಿತರೆ ಕಾರಣಗಳಿಂದ ನಿರ್ಲಕ್ಷಕ್ಕೊಳಗಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗಾಂಧೀಜಿಯವರ ಗೌರವಾರ್ಥ ಸರ್ಕಾರ, ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಕಲ್ಲಿನ ಸ್ಮಾರಕ ಫಲಕವನ್ನು ಉಳಿಸಿಕೊಳ್ಳಬೇಕು. ಯಾಕೆಂದರೆ ಮೈಸೂರು ರಾಜ್ಯದ ಅಂದಿನ ಮುಖ್ಯಮಂತ್ರಿಗಳೇ ಅನಾವರಣ ಮಾಡಿರುವ ಕುರುಹಾಗಿದ್ದು, ಸುತ್ತಲ ಪ್ರದೇಶ ಸಂರಕ್ಷಸಿ, ಬಿಸಿಲು, ಮಳೆಯಿಂದ ಪಾರು ಮಾಡಿ ಗಾಂಧಿವಾದಿಗಳಿಗೆ, ಪ್ರವಾಸಿಗರಿಗೆ ಅನುವು ಮಾಡಿಕೊಟ್ಟು. ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯರು.