“ಸಿಐಟಿಯು ನೇತೃತ್ವದಲ್ಲಿ ವಿವಿಧ ವಿಭಾಗದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 3ರಿಂದಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅನಿರ್ಧಷ್ಟವಾಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ” ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.
ಹಾವೇರಿ ಪಟ್ಟಣದ ಪತ್ರಿಕಾ ಭವನದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ “ಮಾರ್ಚ್-03 ಗ್ರಾಮ ಪಂಚಾಯತ ನೌಕರರು, ಮಾರ್ಚ-04 ಬಿಸಿಯೂಟ ನೌಕರರು, ಮಾರ್ಚ-05 ಕಟ್ಟಡ ಕಾರ್ಮಿಕರು, ಮಾರ್ಚ-06 ಹಮಾಲಿ ಕಾರ್ಮಿಕರು, ಸೇರಿದಂತೆ ವಿವಿಧ ವಲಯದ ಅಸಂಘಟಿತ ಹಾಗೂ ಕಾರ್ಖಾನೆ ಕಾರ್ಮಿಕರು, ಮಾರ್ಚಿ-07 ರಂದು ಅಂಗನವಾಡಿ ನೌಕರರು, ಸಾವಿರಾರು ಕಾರ್ಮಿಕರು ಹೋರಾಟದಲ್ಲಿ ಭಾಗವಹಿಸಲಿದ್ದು, ಈ ಹೋರಾಟ ಕರ್ನಾಟಕದ ಶ್ರಮಜೀವಿಗಳ ಹೋರಾಟಗಳ ಪರ್ವವಾಗಲಿದೆ” ಎಂದರು.
“ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಇತ್ತೀಚಿಗೆ ಮಂಡಿಸಿದ 2025-26 ನೇ ಸಾಲಿನ ಬಜೆಟ್ ಮತ್ತೊಮೆ ಶೇ 99 ರಷ್ಟಿರುವ ದುಡಿಯುವ ವರ್ಗಕ್ಕೆ ದ್ರೋಹ ಬಗೆದಿದೆ. ಇದುವರೆಗೂ ನಮ್ಮ ಸಾರ್ವಜನಿಕ ಹೆಮ್ಮೆಯ ಕ್ಷೇತ್ರಗಳು ವಿದ್ಯುತ್, ತೈಲ, ಸಾರಿಗೆ ಮತ್ತು ಹೆದ್ದಾರಿಗಳು, ಕಲ್ಲಿದ್ದಲು ಮತ್ತು ಇತರ ಖನಿಜಗಳು ಸೇರಿದಂತೆ ಅಮೂಲ್ಯವಾದ ಮೂಲಸೌಕರ್ಯಗಳು, ಖನಿಜಗಳು, ಸಾರ್ವಜನಿಕ ಸೇವಾ ಜಾಲ ಇತ್ಯಾದಿಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು ಸ್ಪಷ್ಟ ನೀಲಿ ನಕ್ಷೆಯನ್ನು ಸಿದ್ಧಪಡಿಸಿದೆ” ಎಂದರು.
“ನಮ್ಮ ದೇಶದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಆಹಾರ ಪೂರೈಸಲು ಬೇಕಾದ ಸಂಪನ್ಮೂಲವನ್ನು ಕಡಿತಗೊಳಿಸಿದೆ. ದೇಶದ ದುಡಿಯುವ ಜನ ವಿಭಾಗಗಳಾದ ಅಂಗನವಾಡಿ, ಬಿಸಿಯೂಟ, ಆಶಾ, ಉದ್ಯೋಗ ಖಾತ್ರಿ ಮೊದಲಾದ ಯೋಜನೆಗಳಿಗೆ ಹಾಗೂ ಅಲ್ಲಿ ದುಡಿಯುತ್ತಿರುವ ಕೋಟ್ಯಾಂತರ ಗೌರವ ಧನ ಆಧಾರದಲ್ಲಿ ನೌಕರರು, ಹಾಗೂ ಅಸಂಘಟಿತ ಕಾರ್ಮಿಕ ವರ್ಗದ ಜೀವನೋಪಾಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಕೇಂದ್ರದಲ್ಲಿನ ಏನ್ ಡಿ ಎ ಸರ್ಕಾರವು ಅನುಸರಿಸುವ ಆರ್ಥಿಕ ನೀತಿಗಳನ್ನೇ ರಾಜ್ಯ ಕಾಂಗ್ರೆಸ್ ಸರ್ಕಾರವು ಬಹುತೇಕ ಅನುಸರಿಸುತ್ತಿದೆ. ಬಿಜೆಪಿ ನೇತ್ರತ್ವದ ಎನ್ ಡಿ ಎ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರು ಜೋರು ಧ್ವನಿಯಲ್ಲಿ ಮಾತಾಡುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ವಿಭಿನ್ನ ರೀತಿಯಲ್ಲಿ ರೂಪಿಸಲು ಆಗುತ್ತಿಲ್ಲ. ಈ ಎರಡೂ ಪಕ್ಷಗಳು ಬೇರೆ ಬೇರೆಯಾದರೂ ನೀತಿಗಳೆಲ್ಲ ಒಂದೇಯಾಗಿವೆ” ಎಂದರು.
“ಹಮಾಲಿ, ಆಟೋ, ಮನಕೆಲಸ, ಬೀದಿಬದಿ ಮೊದಲಾದ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳ ಜಾರಿಗೆ ಅಗತ್ಯವಿರುವ ಅನುದಾನವನ್ನು ನೀಡಲಿಲ್ಲ. ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸರ್ಕಾರಿ ಯೋಜನೆಗಳಲ್ಲಿ ಕೆಲಸಮಾಡುವ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಯಾವುದೇ ಕ್ರಮವಹಿಸಲಿಲ್ಲ. ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಅವುಗಳನ್ನು ಈಡೇರಿಸಲು ಸರಕಾರಗಳು ಮುಂದಾಗದಿರುವುದು ನೋವಿನ ಸಂಗತಿ. ಬೇಡಿಕೆಗಳನ್ನು ಈಡೇರಿಸುವಂತೆ ಅನಿರ್ದಿಷ್ಠ ಹೋರಾಟ ಹಮ್ಮಿಕೊಂಡಿದೆ” ಎಂದು ಎಂದು ಬಸವರಾಜ ಪೂಜಾರ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಒಳಮೀಸಲಾತಿ : ಒಲವು-ನಿಲುವು ಕೃತಿ ಲೋಕಾರ್ಪಣೆ
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಂದಾನೆಪ್ಪ ಕೆ ಹೆಬಸೂರು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆ ಜಿಲ್ಲಾ ಮುಖಂಡರಾದ ರಾಜೇಶ್ವರಿ ಹಿರೇಮಠ, ಸಿದ್ದಮ್ಮ ಚೌಟಿ, ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಇದ್ದರು.