ಏಮ್ಸ್ ಮಂಜೂರಾತಿಗಾಗಿ ನಡೆಸುತ್ತಿರುವ ಹೋರಾಟ ಸಾವಿರ ದಿನ ಪೂರೈಸಿದ್ದು, ಕೇಂದ್ರ ಸರಕಾರಕ್ಕೆ ಮನವಿ ಮಾಡಿದರೂ ಉದ್ದೇಶ ಪೂರ್ವಕವಾಗಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರವಿ ಬೋಸರಾಜ್ ಆರೋಪಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ರಾಯಚೂರಿನಲ್ಲಿ ಏಮ್ಸ್ ಮಂಜೂರಾತಿಗೆ ತನ್ನ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ. ಆದರೆ ಕೇಂದ್ರ ಸರ್ಕಾರ ತಮಗೆ ಸಂಬಂಧವಿಲ್ಲದಂತೆ ದಿಕ್ಕು ತಪ್ಪಿಸುತ್ತಿದೆ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದರೂ ಪ್ರಧಾನಿಯವರು ಮಾತನಾಡದೆ ಮೌನ ವಹಿಸಿದ್ದಾರೆ” ಎಂದರು.
“ಜಿಲ್ಲೆಯ ಹಾಗೂ ರಾಜ್ಯದ ಶಾಸಕರು ದೆಹಲಿಗೆ ತೆರಳಿದಾಗ ಏಮ್ಸ್ ಮಂಜೂರಾತಿಗಾಗಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿದ್ದಾರೆ. ಆದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಅಭಿವೃದ್ಧಿಗೆ ಬಳಸುವ ರಾಷ್ಟ್ರೀಯ ಆರೋಗ್ಯ ಮಿಷನ್ ಅನುದಾನದಲ್ಲಿ ಆಸ್ಪತ್ರೆ ಅಭಿವೃದ್ದಿಪಡಿಸುವುದಾಗಿ ಹೇಳುವ ಮೂಲಕ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ” ಎಂದು ಆರೋಪಿಸಿದರು.
“ರಾಜ್ಯದಿಂದಲೇ ಆಯ್ಕೆಯಾಗಿರುವ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೂಡಾ ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ದೇಶದ 22 ರಾಜ್ಯಗಳಲ್ಲಿ ಸ್ಥಾಪಿಸಲಾಗಿರುವ ಏಮ್ಸ್ ಕೇಂದ್ರವನ್ನು ಬೇರೆ ಯೋಜನೆಯಡಿ ಅನುದಾನ ನೀಡಿ ರಾಜ್ಯಕ್ಕೆ ಮಾತ್ರ ಎನ್‌ಆರ್‌ಎಚ್‌ಎಂ ಅನುದಾನ ನೀಡುವದಾಗಿ ಹೇಳುತ್ತಿರುವದು ಎಷ್ಟು ಸರಿ” ಎಂದು ಪ್ರಶ್ನಿಸಿದರು?.
“ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಹಾಗೂ ವಿಮಾನ ನಿಲ್ದಾಣ ನಿರ್ಮಿಸುವಂತೆ ಒತ್ತಾಯಿಸಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಸ್ತಾವನೆ ಸ್ಲಲಿಸಿದ್ದು, ಯಾವುದೇ ಅನುಮತಿಯಿಲ್ಲದೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಎಚ್‌ಕೆಡಿಬಿ ₹50 ಲಕ್ಷ ಅನುದಾನ ಹಿಂಪಡೆಯಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಜೆಟ್‌ನಲ್ಲಿ ಘೋಷಣೆಯೊಂದಿಗೆ ವಿಮಾನಯಾನ ಪ್ರಾಧಿಕಾರದಿಂದ ಸ್ಥಳಕ್ಕೆ ಅನುಮತಿ ಒದಗಿಸಲಾಯಿತು. ಈವರಗೆ ಸ್ಥಳಕ್ಕೆ ಅನುಮೋದನೆಯೇ ಇರಲಿಲ್ಲ. ಪರವಾನಿಗೆ ಇಲ್ಲದೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಮಹಾನಗರ ಪಾಲಿಕೆ ಪ್ರಸ್ತಾವನೆಯೂ ಬಿಜೆಪಿ ಅವಧಿಯಲ್ಲಿ ಸಲ್ಲಿಕೆಯಾಗಿದ್ದರೂ ಅನುಮೋದನೆ ದೊರೆತಿರಲಿಲ್ಲ. ಕಾಂಗ್ರೆಸ್ ಸರ್ಕಾರ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಿ ಮೂರು ಲಕ್ಷ ಜನಸಂಖ್ಯೆ ನಿಗದಿಗೊಳಿಸಿ ಮಹಾನಗರ ಪಾಲಿಕೆ ಘೋಷಿಸಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಪ್ಪು ಪಟ್ಟಿ ಧರಿಸಿ ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ
“ರಾಜ್ಯ ಸರ್ಕಾರದ ಮಹಾತ್ಮಗಾಂಧಿ ನಗರಾಭಿವೃದ್ಧಿ ಯೋಜನೆಯಡಿ ₹200 ಬಿಡುಗಡೆಗೊಳಿಸಲಾಗಿದೆ. ಕೇಂದ್ರ ಅನುದಾನ ನೀಡಿಲ್ಲ. ರಾಜ್ಯ ಸರ್ಕಾರವೇ ಅನುದಾನ ಮಂಜೂರಾತಿ ನೀಡಿದ ಪತ್ರವನ್ನು ಪ್ರದರ್ಶಿಸಿದರು. ಜಿಲ್ಲೆಯ ಬೇರೆ ಬೇರೆ ಪಕ್ಷದ ಮುಖಂಡರು ಏಮ್ಸ್ ಮಂಜೂರಾತಿ ಪಕ್ಷಾತೀತ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕಿದೆ. ರಾಜಕೀಯ ಏನೇ ಇದ್ದರೂ ಪಕ್ಷಾತೀತವಾಗಿ ಹೋರಾಟ ಮಾಡುವ ಮೂಲಕ ಕೇಂದ್ರದ ಮೇಲೆ ಒತ್ತಡ ಹಾಕಬೇಕಿದೆ” ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪಾಧ್ಯಕ್ಷ ಸಾಜೀದ ಸಮೀರ್, ನರಸಿಂಹಲು ಮಾಸದೊಡ್ಡಿ, ಮಹ್ಮದ ಶಾಲಂ, ಜಿಂದಪ್ಪ, ನರಸರೆಡ್ಡಿ, ಚಂದ್ರಶೇಖರ ರೆಡ್ಡಿ ಪೋಗಲ್, ಯು ಗೋವಿಂದರೆಡ್ಡಿ, ರಾಜೇಶ್ ಕುಮಾರ ಸೇರಿದಂತೆ ಬಹುತೇಕರು ಇದ್ದರು.
