ನರೇಗಾದಡಿ ನಿರಂತರ ಕೆಲಸ ಹಾಗೂ ಗೌರವಯುತ ಕೂಲಿಗೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ದಾವಣಗೆರೆ ಜಿಲ್ಲಾ ಘಟಕದ ಕಾರ್ಯಕರ್ತರು ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಗ್ರಾಮ ಪಂಚಾಯತ್ ಎದುರು ಜಿಲ್ಲಾ ಪಂಚಾಯತ್ ಸಿಇಓ, ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನೆ ನಡೆಸಿದೆ.
“ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕಿನ ದೊಣ್ಣೆಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮದ ನರೇಗಾ ಕೂಲಿ ಕಾರ್ಮಿಕರಿಗೆ ನಿರಂತರ ಕೆಲಸ ಕೊಡುತ್ತಿಲ್ಲ. ಕಾನೂನಿನ ಪ್ರಕಾರ ನಮೂನೆ-6 ಫಾರಂ ಕೊಟ್ಟರೂ ಕೆಲಸ ಕೊಡುತ್ತಿಲ್ಲ. ನಮೂನೆ-6 ಫಾರಂ ಕೊಟ್ಟು 15 ದಿನಗಳಲ್ಲಿ ಕಾನೂನಿನ ಪ್ರಕಾರ ಕೆಲಸ ಕೊಡಬೇಕು, ಇಲ್ಲವಾದರೆ, ಕಾನೂನಿನ ಪ್ರಕಾರ ನಿರುದ್ಯೋಗಿ ಭತ್ಯೆ ಮತ್ತು ಕೂಲಿ ಭತ್ಯೆಗೆ ಫಾರಂ ನೀಡಬೇಕಿದೆ. ಕಳೆದ 04 ವರ್ಷಗಳಿಂದ ಗೌರವಯುತ ಕೂಲಿ ಪಾವತಿಸಿಲ್ಲ. ಕಡಿಮೆ ಕೂಲಿ ಪಾವತಿಸುತ್ತಿದ್ದಾರೆ” ಕೂಲಿ ಕಾರ್ಮಿಕರು ಎಂದು ಆರೋಪಿಸಿದರು.

“ನರೇಗಾ ಕಾರ್ಮಿಕರ ಸಮಸ್ಯೆ ಗೊತ್ತಿದ್ದರೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮತ್ತು ಮೇಟಿಗಳಿಗೆ ಗೌರವಯುತ ಕೂಲಿ ಕೊಡುತ್ತಿಲ್ಲ. ಆರು ಕಿ.ಮೀ. ದೂರಕ್ಕೆ ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸುತ್ತಿದ್ದು, ಇದುವರೆಗೂ ಪ್ರಯಾಣದ ವೆಚ್ಚ ಹಾಕಿಲ್ಲ. ಮೇಟಿ ಚಾರ್ಜ್ ಕೊಡಲು ಎಸ್ಟಿಮೇಟ್ ನಲ್ಲಿ ಪ್ರಾವಿಜನ್ ಮಾಡದೇ ತೊಂದರೆ ಮಾಡುತ್ತಿದ್ದಾರೆ. ಈ ಮೇಲಿನ ಎಲ್ಲಾ ಸಮಸ್ಯೆಗಳು ಕೂಡಲೇ ಇತ್ಯರ್ಥವಾಗಬೇಕು. ಅಥವಾ ಕೂಡಲೇ ನರೇಗಾ ಕಾನೂನನ್ನು ಉಲ್ಲಂಘಿಸಿ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು. ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲು ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ ಹೇಳಿದಂತೆ ಭಾರತದಲ್ಲಿ ಸಾಂವಿಧಾನಿಕ ನೈತಿಕತೆ ಸಾಮಾನ್ಯವಾಗಿಲ್ಲ: ಚಿಂತಕ ಶಿವಸುಂದರ್
“ದೊಣೆಹಳ್ಳಿ ಗ್ರಾಮ ಪಂಚಾಯಿತಿ, ಕೆಚ್ಚೇನಹಳ್ಳಿ ಗ್ರಾಮ ಪಂಚಾಯಿತಿ, ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ, ಮರಿಕುಂಟೆ, ಮಾದನಹಳ್ಳಿ ಹಾಗೂ ಬಿಳಿಚೋಡು ಗ್ರಾಮ ಪಂಚಾಯಿತಿಗಳಲ್ಲಿ ನಿರಂತರ ಕೆಲಸಬೇಕು. ಹಾಗೂ ಗೌರಯುತ ಕೂಲಿಬೇಕು. ದಿದ್ದಿಗಿ ಗ್ರಾಮ ಪಂಚಾಯಿತಿಯಲ್ಲಿ ನಿರಂತರ ಕೆಲಸ, ಪ್ರಯಾಣದ ವೆಚ್ಚ ಕೊಡುವಲ್ಲಿ ಸಮಸ್ಯೆಗಳಿದ್ದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕಾಗಮಿಸಿ ಪರಿಹಾರ ಕೊಡಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಕೂಸ್ ತಾಲೂಕಿನ ಸಂಚಾಲಕಿ ಸುಧಾ ಪಲ್ಲಾಗಟ್ಟೆ, ನೇತ್ರಾವತಿ, ಬೋರಪ್ಪ, ಮಾಲಾಶ್ರೀ, ಓಬಳೇಶ್, ಶಶಿಕಲಾ, ಲಲಿತಮ್ಮ, ಸವಿತಾ, ಸೋಮಶೇಖರ್, ತಿಪ್ಪೆರುದ್ರಪ್ಪ, ಮಂಜುನಾಥ, ತಿಪ್ಪೇಸ್ವಾಮಿ, ಶಾರದಮ್ಮ, ಜಯಮ್ಮ, ರಾಜಮ್ಮ, ಚೌಡಮ್ಮ, ಏಕಾಂತಮ್ಮ, ಬಸಮ್ಮ, ಸಾಕಮ್ಮ, ಇಂದ್ರಮ್ಮ, ಓಂಕಾರಮ್ಮ, ರತ್ನಮ್ಮ, ಮಂಜುನಾಥ, ಮುಸ್ಷೂರಮ್ಮ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದರು.
