ಬಸವಣ್ಣನವರು ತಮ್ಮ ಸಹೋದರಿಯರಿಗೆ ಮನೆಯಲ್ಲಿ ಸಮಾನತೆ ಅವಕಾಶ ಸಿಗಲ್ಲಿಲ್ಲವೆಂಬ ಕಾರಣಕ್ಕೆ ಅದರ ವಿರುದ್ಧ 8ನೇ ವಯಸ್ಸಿನಲ್ಲೇ ಮಹಿಳೆಯರ ಸಮಾನತೆಗಾಗಿ ಬಂಡಾಯವೆದ್ದ ಮಹಾನ್ ದಾರ್ಶನಿಕರು ಎಂದು ರಾಜ್ಯ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಹೇಳಿದರು.
ಬೀದರ್ ನಗರದ ಪಾಪನಾಶ ಸಮೀಪದ ಬಸವಗಿರಿಯಲ್ಲಿ ಬಸವ ಸೇವಾ ಪ್ರತಿಷ್ಠಾನದಿಂದ ಹಮ್ಮಿಕೊಂಡಿರುವ ಮೂರು ದಿನಗಳ 23ನೇ ವಚನ ವಿಜಯೋತ್ಸವ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಶೇ.50ರಷ್ಟಿರುವ ಹೆಣ್ಣು ಮಕ್ಕಳನ್ನು ಬಿಟ್ಟು ದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಪುರುಷರಂತೆ ಮಹಿಳೆಯರಿಗೂ ಸಮಾನ ಅವಕಾಶ ಮಾಡಿಕೊಟ್ಟರೆ ಮಾತ್ರ ದೇಶ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಬಸವಣ್ಣನವರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸಮಾನತೆ ಅವಕಾಶ ಕಲ್ಪಿಸಿದ್ದು ದೇಶಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆʼ ಎಂದರು.

ʼಸಾಮಾಜಿಕ ಪಿಡುಗಿಗೆ ಬಸವಣ್ಣನವರ ತತ್ವಗಳು ಔಷಧವಾಗಿವೆ. ಬಸವಣ್ಣನವರ ವಚನಗಳು ಸರಿಯಾಗಿ ಅನುಷ್ಠಾನಗೊಂಡರೆ ಸೌಹಾರ್ದ ಭಾರತ ನಿರ್ಮಾಣವಾಗಲು ಸಾಧ್ಯವಿದೆ. ಸಮಾಜ ಯಾವ ರೀತಿ ಇರಬೇಕೆಂದು 900 ವರ್ಷಗಳ ಹಿಂದೆ ಕಲ್ಯಾಣದಲ್ಲಿ ಶರಣರು ತೋರಿಸಿದ್ದರು. ನಾವು ಅದನ್ನು ಪಾಲಿಸಬೇಕಷ್ಟೇ. ನಮ್ಮನ್ನು ನೋಡಿ ಬೇರೆಯವರು ಕೂಡ ಪಾಲಿಸುವಂತಾಗಬೇಕು. ಬಸವಾದಿ ಶರಣರ ಮೌಲ್ಯಗಳ ಜಾಗೃತಿ ಕಾರ್ಯಕ್ರಮಗಳು ನಮ್ಮ ಭಾಗದಲ್ಲಿಯೂ ಆಯೋಜಿಸಿದರೆ ನಾವು ಸಹಕಾರ ನೀಡುತ್ತೇವೆʼ ಎಂದು ಹೇಳಿದರು.
ʼಮನುಷ್ಯರಲ್ಲಿ ಮಾನವೀಯತೆ, ಪ್ರೀತಿ ಹಾಗೂ ವಿಶ್ವಾಸ ಬಿತ್ತುವುದು ಎಲ್ಲ ಧರ್ಮಗಳ ಮುಖ್ಯ ಸಂದೇಶ. ಸಣ್ಣಪುಟ್ಟ ವಿಚಾರಗಳಿಗೆ ವೈಷಮ್ಯ ದೂರವಾಗಲು ವಚನಗಳ ಅನುಷ್ಠಾನ ಅಗತ್ಯವಾಗಿದೆ. ದೇವರ ಮುಂದೆ ಎಲ್ಲರೂ ಸಮಾನರು. ಮನುಷ್ಯರ ನಡುವೆ ತಾರತಮ್ಯ ಮಾಡದೆ ಸಹೋದರತೆಯ ಕೊಂಡಿಯಾಗಿ ಬದುಕಬೇಕು. ಮಾನವೀಯತೆ ಮುಂದೆ ಅಧಿಕಾರ, ಆಸ್ತಿ, ಸಂಪತ್ತು ಯಾವುದೂ ಶಾಶ್ವತವಲ್ಲʼ ಎಂದು ತಿಳಿಸಿದರು.
ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ʼಬಸವಣ್ಣನವರು ತಮ್ಮ ಸಮಾಜ ತೊರೆದು ಹೊಸ ಸಮಾಜ ನಿರ್ಮಿಸಿದ್ದು ಯಾಕೆ ಎಂಬ ಕುರಿತು ಇಂದು ಚರ್ಚೆ ಆಗಬೇಕಿದೆ. ಬೇರೆಡೆ ಹೋಗದೆ ʼದೇಹವೇ ದೇವಾಲಯʼ ಲಿಂಗದಲ್ಲಿಯೇ ದೇವರಿದ್ದಾನೆ ದೇವರೊಬ್ಬನೇʼ ಎಂದು ಬಸವಣ್ಣನವರು ಹೇಳಿದ್ದರು. ಆದರೆ ಹೆಚ್ಚಿನವರು ಅವರು ಹೇಳಿದಂತೆ ನಡೆಯುತ್ತಿಲ್ಲ. ನಾವು ಹೇಳುವುದು ಒಂದು ಮಾಡುವುದು ಒಂದು ಆಗಬಾರದು. ಬಸವಣ್ಣನವರ ವಿಚಾರಗಳು ಮೈಗೂಡಿಸಿಕೊಂಡು ಅದಕ್ಕೆ ಬದ್ಧರಾಗಬೇಕು.ಇಡೀ ವಿಶ್ವಕ್ಕೆ ಈ ನೆಲದ ಶರಣರ ಸಂದೇಶ ತಲುಪಿಸಲು ಹೆಚ್ಚಿನ ಪರಿಶ್ರಮ ಹಾಕಬೇಕುʼ ಎಂದು ತಿಳಿಸಿದರು.
ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ʼ12ನೇ ಶತಮಾನದಲ್ಲಿ ಶರಣರ ಅನುಭಾವದಿಂದ ಮೂಡಿ ಬಂದ ವಚನಗಳನ್ನು ಸಂರಕ್ಷಿಸಲು ಅನೇಕ ಜನ ಶರಣರು ಪ್ರಾಣ ಕೊಟ್ಟಿದ್ದರು. ವಚನ ಸಾಹಿತ್ಯ ಸಂರಕ್ಷಣೆಗೆ ನಡೆದ ಹೋರಾಟದ ಸ್ಮರಣೆಗಾಗಿ ಕಳೆದ 2002ರಿಂದ ಪ್ರತಿ ವರ್ಷ ವಚನ ವಿಜಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆʼ ಎಂದರು.
ಮೈಸೂರಿನ ಶಂಕರ ದೇವನೂರು ಅನುಭಾವ ನೀಡಿ, ʼಸಮಾಜದಲ್ಲಿ ಮಾನವೀಯ ಮೌಲ್ಯಗಳ ಅನುಷ್ಠಾನಕ್ಕಾಗಿ ಶರಣರು ತಮ್ಮ ಬದುಕು ಪಣಕಿಟ್ಟು ಹೋರಾಡಿದರು. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಆತ್ಮವಲೋಕನ ಮಾಡಿಕೊಂಡರೆ ಅದೇ ನಿಜವಾದ ಶರಣರ ವಿಜಯೋತ್ಸವ ಆಗಿದೆʼ ಎಂದರು.

ʼಮನುಷ್ಯರ ನಡುವೆ ದ್ವೇಷ ಬಿತ್ತುವ ಕೆಲಸ ಇಂದಿಗೂ ಮುಂದುವರೆದಿದೆ. ಭೂಮಿಯನ್ನು ಸ್ವರ್ಗವನ್ನಾಗಿಸಿದ ಬಸವಾದಿ ಶರಣರ ಮಾನವೀಯ ಮೌಲ್ಯಗಳ ಜಾಗೃತಿ ಕಾರ್ಯ ಹೆಚ್ಚೆಚ್ಚು ನಡೆಯಬೇಕಿದೆ. ಶತಶತಮಾನಗಳಿಂದ ತುಳಿತಕ್ಕೊಳಗಾದ ಜನರಿಗೆ ದನಿಯಾಗಿ ಸಾಮಾಜಿಕ ನ್ಯಾಯ ಕಲ್ಪಿಸಿದರು. ಎಲ್ಲ ಕಾಯಕ ಜೀವಿಗಳು ಜಗತ್ತಿಗೆ ನೀಡಿದ ವಚನ ಸಾಹಿತ್ಯ ಕಾಪಾಡಿಕೊಳ್ಳುವುದೇ ನಮ್ಮೆಲ್ಲರ ಬಹುದೊಡ್ಡ ಜವಾಬ್ದಾರಿಯಾಗಿದೆʼ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಬೀದರ್ ಜಿಲ್ಲೆಯಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿರುವ ಶರಣರ ಎಲ್ಲ ಸ್ಮಾರಕಗಳ ಸಂರಕ್ಷಣೆಗೂ ಪ್ರಯತ್ನಿಸಲಾಗುವುದು. ರಾಜ್ಯದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕಟಿಬದ್ಧರಾಗಿದ್ದೇವೆ. ವಚನ ಸಾಹಿತ್ಯವು ನಮ್ಮ ಸಮಾಜದ ಶ್ರೇಯೋಭಿವೃದ್ಧಿಗೆ ನೇರವಾಗಿ ಪ್ರಭಾವ ಬೀರುತ್ತವೆ. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವು ಪ್ರತಿಯೊಬ್ಬರ ಬದುಕಿಗೆ ಬೆಳಕಾಗಬೇಕುʼ ಎಂದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಆಣದೂರ ಧಮ್ಮ ಭೂಮಿಯ ಧಮ್ಮಾನಂದ ಮಹಾಥೇರೋ, ಗುರುದ್ವಾರ ಪ್ರಬಂಧಕ ಕಮಿಟಿಯ ಬಲವಂತ ಸಿಂಗ್, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಸೋಮಶೇಖರ ಪಾಟೀಲ, ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬು ವಾಲಿ, ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಮಡಿವಾಳ, ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಟಿಳೆಕರ್, ಮೇದಾರ ಕೇತಯ್ಯ ಸಮಾಜದ ಜಿಲ್ಲಾಧ್ಯಕ್ಷ ರಾಜಕುಮಾರ ನಾಗೇಶ್ವರ, ನೇಕಾರ ಸಮಾಜದ ಜಿಲ್ಲಾಧ್ಯಕ್ಷ ಸೋಮಶೇಖರ, ಡೋಹಾರ ಕಕ್ಕಯ್ಯ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಗಜರೆ, ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಕಾಂತ ಹೂಗಾರ ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೃಷಿ ಹೊಂಡದ ಹೆಸರಲ್ಲಿ ಕಲ್ಲು ಗಣಿಗಾರಿಕೆ: ಗ್ರಾಮಸ್ಥರ ಮನೆಯ ಗೋಡೆಯಲ್ಲಿ ಬಿರುಕು!
ಶಿವಕುಮಾರ ಪಂಚಾಳ ವಚನ ಸಂಗೀತ ನಡೆಸಿಕೊಟ್ಟರು. ಸುವರ್ಣಾ ಚಿಮಕೋಡೆ ಸ್ವಾಗತಿಸಿದರು. ಜ್ಷಾನದೇವಿ ಬಬಚೋಡೆ ನಿರೂಪಿಸಿದರೆ, ಸಾವಿತ್ರಿ ಮಹಾಜನ್ ವಂದಿಸಿದರು.