‘ಅಂತ್ಯದ ಆರಂಭವಿದು’ ಎಂದು ಒಂದೊಮ್ಮೆ ಆಪ್ ನಾಯಕರಾಗಿದ್ದ ಪ್ರಸಿದ್ಧ ನ್ಯಾಯವಾದಿ ಪ್ರಶಾಂತ್ ಭೂಷಣ್ ಆಪ್ ನ ಸೋಲನ್ನು ಬಣ್ಣಿಸಿದ್ದಾರೆ. ಭೂಷಣ್ ಅವರನ್ನು 2015ರಲ್ಲಿ ಪಕ್ಷದಿಂದ ಉಚ್ಛಾಟಿಸಿದ್ದರು ಕೇಜ್ರೀವಾಲ್. ಪಕ್ಷದ ಈ ಸೋಲಿಗೆ ಕೇಜ್ರೀವಾಲ್ ಅವರೇ ಮುಖ್ಯ ಕಾರಣ. ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಪರ್ಯಾಯ ರಾಜಕಾರಣ ಆಪ್ ನ ಮೂರು ಮುಖ್ಯ ಸ್ಥಾಪಕ ತತ್ವಗಳಾಗಿದ್ದವು. ಈ ತತ್ವಗಳನ್ನು ಕೇಜ್ರೀವಾಲ್ ಸಾರಾಸಗಟಾಗಿ ತ್ಯಜಿಸಿದರು. ಪಕ್ಷದ ಸರ್ವಾಧಿಕಾರಿಯಾದರು.
ಹತ್ತು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯನ್ನು ಆಳಿದ ಆಮ್ ಆದ್ಮಿ ಪಾರ್ಟಿ ಭಾರೀ ಸೋಲನ್ನು ಮೈಮೇಲೆಳೆದುಕೊಂಡಿದೆ. 27 ವರ್ಷಗಳ ದೊಡ್ಡ ಕಾಲಾಂತರದ ನಂತರ ಬಿಜೆಪಿ ಅಧಿಕಾರಕ್ಕೆ ಮರಳಿದೆ.
ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಕಟ್ಟಿದ್ದ ಭದ್ರ ಕೋಟೆ ಕಡೆಗೂ ಉರುಳಿದೆ. 2024ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಎದುರಿಸಿದ ಹಿನ್ನಡೆಯ ತರುವಾಯ ಪ್ರತಿಪಕ್ಷಗಳ ಮುಖದಲ್ಲಿ ಮೂಡಿದ್ದ ಮುಗುಳುನಗೆ ಮಾಸಿದೆ. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಭಾರೀ ಗೆಲುವು ಕಂಡ ಬಿಜೆಪಿ ಇದೀಗ ದೆಹಲಿಯನ್ನೂ ಬಾಚಿಕೊಂಡು ಬೀಗಿದೆ.
ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಬಿಜೆಪಿ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಕೇಜ್ರೀವಾಲರ ಆಪ್ ನ್ನು ಗೆಲ್ಲಿಸುತ್ತ ಬಂದಿದ್ದರು ದೆಹಲಿ ಮತದಾರರು. ಲೋಕಸಭೆಗೆ ಬಾಪ್ (ಮೋದಿ), ವಿಧಾನಸಭೆಗೆ ಆಪ್ (ಕೇಜ್ರೀವಾಲ್) ಎನ್ನುವ ಮಾತಿತ್ತು. ಆರಂಭದಲ್ಲಿ ಆಮ್ ಆದ್ಮೀ ಪಾರ್ಟಿಯೂ ಈ ಘೋಷಣೆಯನ್ನು ಗುಪ್ತವಾಗಿಯೇ ಚಲಾಯಿಸಿದ್ದುಂಟು. ಆದರೆ ಸಲ ದೆಹಲಿಯ ಗಣನೀಯ ಪ್ರಮಾಣದ ಮತದಾರರು ಲೋಕಸಭೆಯ ನಂತರ ಆಪ್ ಕಡೆಗೆ ವಾಲದೆ ಬಿಜೆಪಿಯಲ್ಲೇ ಉಳಿದಿರುವುದು ಹೊಸ ಬೆಳವಣಿಗೆ.
ದೆಹಲಿಯ ಗೆಲುವು ಬಿಜೆಪಿಯ ಪಾಲಿಗೆ ಅದರಲ್ಲೂ ಮೋದಿ- ಅಮಿತ್ ಶಾ ಜೋಡಿಯ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ದಕ್ಷಿಣದ ವಿನಾ ಭಾರತದ ಉಳಿದೆಲ್ಲ ಸೀಮೆಗಳಲ್ಲಿ ತನ್ನ ವಿಜಯಧ್ವಜ ಹಾರಿಸಿ ಗಹಗಹಿಸಿತ್ತು ಈ ಜೋಡಿ. ಆದರೆ ದೀಪದ ಕೆಳಗಿನ ಕತ್ತಲೆಯಾಗಿ ಉಳಿದು ಹೋಗಿತ್ತು ರಾಜಧಾನಿ ದೆಹಲಿ. ಹಾಗೆ ನೋಡಿದರೆ ದೆಹಲಿಯ ಲೋಕಸಭಾ ಸ್ಥಾನಗಳ ಸಂಖ್ಯೆ ಕೇವಲ ಏಳು. ಏಳರ ಪೈಕಿ ಬಹುತೇಕ ಎಲ್ಲವನ್ನೂ ಗೆಲ್ಲುತ್ತಿದ್ದ ಬಿಜೆಪಿ ಈ ಸಲ ಏಳಕ್ಕೆ ಏಳನ್ನೂ ಗೆದ್ದಿತ್ತು. ಗೆಲ್ಲಲು ಉಳಿದದ್ದು ಒಂದೇ. ಅದು ದೆಹಲಿ ವಿಧಾನಸಭೆ. ವಿಧಾನಸಭೆಯ ಸದಸ್ಯಬಲ 70. ಕಳೆದ ಎರಡು ಅವಧಿಗಳಲ್ಲಿ 67 ಮತ್ತು 63 ಸೀಟುಗಳನ್ನು ಗೆದ್ದು ರಾಜಧಾನಿಯ ಮೇಲೆ ಬಿಗಿಮುಷ್ಠಿ ಸಾಧಿಸಿತ್ತು ಅರವಿಂದ ಕೇಜ್ರೀವಾಲ್ ಅವರ ಆಮ್ ಆದ್ಮೀ ಪಾರ್ಟಿ.
ಪಕ್ಷದ ‘ನಂಬರ್ ಒನ್’ ಮತ್ತು ‘ನಂಬರ್ ಟೂ’ ಎನಿಸಿದ್ದ ಅರವಿಂದ ಕೇಜ್ರೀವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ಸೋಲಿನಿಂದ ಆಪ್ ಅಧೀರವಾಗಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಸೋಲು ಪಕ್ಕದ ರಾಜ್ಯ ಪಂಜಾಬಿನ ಕಾಂಗ್ರೆಸ್ ಪಕ್ಷದಲ್ಲಿ ಆಶಾವಾದ ಮೂಡಿಸಿದೆ. ಪಂಜಾಬಿನಲ್ಲಿ ತನ್ನ ಸರ್ಕಾರ ಉರುಳದಂತೆ ಕಾಪಾಡಿಕೊಳ್ಳಲು ಅಲ್ಲಿನ ತಮ್ಮ ಶಾಸಕರ ತುರ್ತುಸಭೆ ಕರೆದಿದ್ದಾರೆ ಕೇಜ್ರೀವಾಲ್.
ಸ್ವತಃ ತಾನೇ ಸೋತು ದುರ್ಬಲನಾಗಿರುವ ದಂಡನಾಯಕ ಮತ್ತು ಅವನ ಸೇನೆಯ ಮೇಲೆ ಮಾರಣಾಂತಿಕ ದಾಳಿ ನಡೆಸಲು ಸಜ್ಜಾಗತೊಡಗಿದೆ ಮೋದಿ ಬಳಗ. ಕೇಜ್ರೀವಾಲ್ ಸಂಗಾತಿಗಳ ಮೇಲೆ ಕೇಸುಗಳನ್ನು ಹೆಣೆದು ಹೆಟ್ಟುವ ಕೆಲಸ ಈಗಾಗಲೇ ಶುರುವಾಗಿದ್ದರೆ ಆಶ್ಚರ್ಯವಿಲ್ಲ. ತಮ್ಮ ಪ್ರತಿಸ್ಪರ್ಧಿಗಳನ್ನು, ತಮ್ಮ ಅಹಂ ಗಳಿಗೆ ಪೆಟ್ಟು ಕೊಡುವ ರಾಜಕೀಯ ಹಗೆಗಳ ಹುಟ್ಟಡಗಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲವರು ತಾವು ಎಂದು ಮೋದಿ-ಶಾ ಜೋಡಿ ಈಗಾಗಲೆ ತೋರಿಸಿಕೊಟ್ಟಿದೆ.

ತನ್ನೆಲ್ಲ ಮಿತಿಗಳು, ತಿಕ್ಕಲುತನಗಳು ಹಾಗೂ ಕೇಜ್ರೀವಾಲ್ ಅವರ ಸರ್ವಾಧಿಕಾರಿ ವರ್ತನೆಯ ನಡುವೆಯೂ ದೆಹಲಿಯ ಆಮ್ ಆದ್ಮಿ ಪಾರ್ಟಿಯ ರಾಜಕಾರಣ ಕೆಲ ಕಾಲವಾದರೂ ಹೊಸ ಗಾಳಿ ಮತ್ತು ಹೊಸ ಬೆಳಕಿನ ಅನುಭವ ನೀಡಿದ್ದು ಹೌದು.
2015ರಲ್ಲಿ ಪ್ರಚಂಡ ಬಹುಮತ ಗಳಿಸಿದ ಕೇಜ್ರೀವಾಲ್ ಮತ್ತು ಸಂಗಾತಿಗಳ ಚುನಾವಣಾ ಯಶಸ್ಸಿನ ಕುರಿತ ಕುತೂಹಲ ದಶದಿಕ್ಕುಗಳಿಗೆ ಹಬ್ಬಿತ್ತು. ಈ ಪಕ್ಷದ ಜನಪ್ರಿಯತೆ ದೆಹಲಿಯ ಗಡಿಗಳ ದಾಟಿ ದೇಶದ ಉದ್ದಗಲಕ್ಕೆ ಹಬ್ಬಿದರೆ ಗತಿಯೇನು ಎಂದು ಮೋದಿ-ಅಮಿತ್ ಶಾ ಜೋಡಿ ಕೂಡ ಚಿಂತಾಕ್ರಾಂತವಾಗಿದ್ದ ದಿನಗಳೂ ಇದ್ದವು. ಕೇಜ್ರೀವಾಲ್ ಪಾರ್ಟಿಯ ರೆಕ್ಕ ಪುಕ್ಕಗಳನ್ನು ಮೋದಿ ಸರ್ಕಾರ ಕತ್ತರಿಸಿ ಕುತ್ತಿಗೆಯನ್ನೂ ಅದುಮಿ ಇಟ್ಟದ್ದು ಅಂತಹ ಆ ದಿನಗಳಲ್ಲೇ. ಚುನಾವಣಾ ಆಯೋಗ ಕೂಡ ಆಳುವ ಪಕ್ಷದ ಮರ್ಜಿಯನ್ನು ಅನುಸರಿಸಿ, ‘ಆಪ್’ನ 20 ಮಂದಿ ಶಾಸಕರನ್ನು ಅನರ್ಹಗೊಳಿಸಿತ್ತು. ದೆಹಲಿ ಹೈಕೋರ್ಟ್ ಮಧ್ಯಪ್ರವೇಶಿಸದೆ ಹೋಗಿದ್ದರೆ ಈ ಅನ್ಯಾಯ ಮುಂದುವರೆಯುತ್ತಿತ್ತು.
ದೇಶದ ರಾಜಧಾನಿ ಎಂಬ ಕಾರಣಕ್ಕಾಗಿ ದೆಹಲಿ ಅರೆ-ರಾಜ್ಯವೇ ವಿನಾ ಪೂರ್ಣ ಪ್ರಮಾಣದ ರಾಜ್ಯ ಅಲ್ಲ. ಅರ್ಥಾತ್ ಪೂರ್ಣ ಪ್ರಮಾಣದ ರಾಜ್ಯವೊಂದು ಹೊಂದಿರುವ ಎಲ್ಲ ಅಧಿಕಾರಗಳೂ ದೆಹಲಿ ಸರ್ಕಾರದ ಬಳಿ ಇಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೂಡಿಯೇ ದೆಹಲಿಯನ್ನು ಆಳುತ್ತವೆ. ಎಲ್ಲ ಐ.ಎ.ಎಸ್., ಐ.ಪಿ.ಎಸ್., ಅಧಿಕಾರಿಗಳ ನೇಮಕ, ವರ್ಗಾವಣೆ, ಬಡ್ತಿ, ಅಮಾನತು, ಶಿಸ್ತುಕ್ರಮದ ಎಲ್ಲ ಅಧಿಕಾರ ಕೇಂದ್ರ ಸರ್ಕಾರದ್ದು. ದೆಹಲಿ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಲೋಕೋಪಯೋಗಿ ಇಲಾಖೆಯನ್ನು ನೇರವಾಗಿ ಕೇಂದ್ರ ನಗರಾಭಿವೃದ್ಧಿ ಮಂತ್ರಿ ನಿಯಂತ್ರಿಸುತ್ತಾರೆ. ಉದಾಹರಣೆಗೆ ಕರ್ನಾಟಕದಂತಹ ಪೂರ್ಣಪ್ರಮಾಣದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ಸರ್ಕಾರದ್ದೇ ಹೊಣೆಗಾರಿಕೆ. ಪೊಲೀಸ್ ವ್ಯವಸ್ಥೆ ರಾಜ್ಯ ಸರ್ಕಾರಕ್ಕೆ ವರದಿ ಮಾಡಿಕೊಳ್ಳುತ್ತದೆ ಮತ್ತು ಐ.ಎ.ಎಸ್.- ಐ.ಪಿ.ಎಸ್. ಅಧಿಕಾರಿಗಳ ನಿಯುಕ್ತಿ, ವರ್ಗಾವಣೆಯ ಅಧಿಕಾರ ರಾಜ್ಯ ಸರ್ಕಾರದ್ದು. ಆದರೆ ದೆಹಲಿಯ ಪೊಲೀಸ್ ವ್ಯವಸ್ಥೆ ಕೇಂದ್ರ ಗೃಹಮಂತ್ರಿಯವರಿಗೆ ವರದಿ ಮಾಡಿಕೊಳ್ಳುತ್ತದೆ.
ದೆಹಲಿ ರಾಜ್ಯ ವಿಧಾನಸಭೆ ಮತ್ತು ದೆಹಲಿ ಮುಖ್ಯಮಂತ್ರಿ ಮತ್ತು ಅವರ ಸಹೋದ್ಯೋಗಿಗಳ ಕಚೇರಿಗಳು ನಿವಾಸಗಳ ಜೊತೆ ಜೊತೆಗೆ ದೇಶದ ಸಂಸತ್ ಸದನ, ರಾಷ್ಟ್ರಪತಿ ಮತ್ತು ಅವರ ನಿವಾಸ, ಸಂಸದರ ವಸತಿ, ಪ್ರಧಾನಮಂತ್ರಿ ಮತ್ತು ಅವರ ಮಂತ್ರಿಮಂಡಲದ ಸದಸ್ಯರ ಕಚೇರಿಗಳು- ನಿವಾಸಗಳು, ಸುಪ್ರೀಂ ಕೋರ್ಟ್- ಮುಖ್ಯನ್ಯಾಯಮೂರ್ತಿ- ಇತರೆ ಎಲ್ಲ ನ್ಯಾಯಮೂರ್ತಿಗಳ ನಿವಾಸಗಳು, ದೇಶದ ಸೇನಾ ಮುಖ್ಯಸ್ಥರ ಕಚೇರಿಗಳು ಮತ್ತು ನಿವಾಸಗಳು ಇಲ್ಲಿವೆ. ಕಾಲ ಕಾಲಕ್ಕೆ ಭೇಟಿ ನೀಡುವ ವಿದೇಶೀ ಗಣ್ಯರು, ಜಗತ್ತಿನ ಬಹುತೇಕ ದೇಶಗಳ ದೂತಾವಾಸಗಳು ಮತ್ತು ಅವುಗಳ ನೂರಾರು ರಾಜತಾಂತ್ರಿಕರು ರಾಯಭಾರಿಗಳ ನೆಲೆ. ಅಂತಾರಾಷ್ಟ್ರೀಯ ಒಪ್ಪಂದಗಳ ಪ್ರಕಾರ ಇವರಿಗೆ ಭದ್ರತೆ ಒದಗಿಸುವುದು ಕೇಂದ್ರದ ಕರ್ತವ್ಯ. ಈ ಕಾರಣದಿಂದಾಗಿ ದೆಹಲಿ ಪೊಲೀಸ್ ವ್ಯವಸ್ಥೆಯು ಉಪರಾಜ್ಯಪಾಲರ ಮೂಲಕ ಕೇಂದ್ರ ಗೃಹಮಂತ್ರಿಯವರ ನಿಯಂತ್ರಣದಲ್ಲಿ ಕೆಲಸ ಮಾಡುತ್ತದೆ. ನೀರು, ವಿದ್ಯುಚ್ಛಕ್ತಿ, ಆರೋಗ್ಯ, ಆಹಾರ ಮತ್ತು ನಾಗರಿಕ ಸರಬರಾಜು, ಶಿಕ್ಷಣ (ಕೇವಲ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ), ಸಮಾಜ ಕಲ್ಯಾಣದಂತಹ ವಿಷಯಗಳು ಮಾತ್ರವೇ ದೆಹಲಿ ಸರ್ಕಾರದ ಅಧೀನದಲ್ಲಿವೆ. ಈ ವಿಷಯಗಳ ಕುರಿತ ರಾಜ್ಯ ಸರ್ಕಾರದ ನೀತಿ ನಿರ್ಧಾರಗಳನ್ನು ಕೂಡ ಉಪರಾಜ್ಯಪಾಲರು ತಡೆ ಹಿಡಿಯಬಲ್ಲರು. ಇಂತಹ ಹಲವು ಕಾರಣಗಳಿಗಾಗಿ ದೆಹಲಿ ಮುಖ್ಯಮಂತ್ರಿ ಅರೆಬರೆ ಮುಖ್ಯಮಂತ್ರಿ. ನಿಜದ ಅಧಿಕಾರದಂಡ ಇರುವುದು ಉಪರಾಜ್ಯಪಾಲರ ಬಳಿ. ಜನರಿಂದ ಆರಿಸಿ ಬಂದ ಮುಖ್ಯಮಂತ್ರಿಗಿಂತ ಕೇಂದ್ರ ಸರ್ಕಾರ ನೇಮಿಸುವ ಉಪರಾಜ್ಯಪಾಲರೇ ಹೆಚ್ಚು ಶಕ್ತರು.

ಸೋತ ಆಪ್ ಪ್ರಮುಖರು ಅರವಿಂದ ಕೇಜ್ರೀವಾಲ್ ಮತ್ತು ಮನೀಶ್ ಸಿಸೋಡಿಯಾ
‘ಅಂತ್ಯದ ಆರಂಭವಿದು’ ಎಂದು ಒಂದೊಮ್ಮೆ ಆಪ್ ನಾಯಕರಾಗಿದ್ದ ಪ್ರಸಿದ್ಧ ನ್ಯಾಯವಾದಿ ಪ್ರಶಾಂತ್ ಭೂಷಣ್ ಆಪ್ ನ ಸೋಲನ್ನು ಬಣ್ಣಿಸಿದ್ದಾರೆ. ಭೂಷಣ್ ಅವರನ್ನು 2015ರಲ್ಲಿ ಪಕ್ಷದಿಂದ ಉಚ್ಛಾಟಿಸಿದ್ದರು ಕೇಜ್ರೀವಾಲ್. ಪಕ್ಷದ ಈ ಸೋಲಿಗೆ ಕೇಜ್ರೀವಾಲ್ ಅವರೇ ಮುಖ್ಯ ಕಾರಣ. ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಪರ್ಯಾಯ ರಾಜಕಾರಣ ಆಪ್ ನ ಮೂರು ಮುಖ್ಯ ಸ್ಥಾಪಕ ತತ್ವಗಳಾಗಿದ್ದವು. ಈ ತತ್ವಗಳನ್ನು ಕೇಜ್ರೀವಾಲ್ ಸಾರಾಸಗಟಾಗಿ ತ್ಯಜಿಸಿದರು. ಪಕ್ಷದ ಸರ್ವಾಧಿಕಾರಿಯಾದರು. ತಮಗಾಗಿ 45 ಕೋಟಿ ರುಪಾಯಿ ವೆಚ್ಚದ ಶೀಶ್ ಮಹಲ್ ಕಟ್ಟಿಕೊಂಡರು. ವಿಲಾಸಿ ಕಾರುಗಳಲ್ಲಿ ತಿರುಗಾಡತೊಡಗಿದರು. ಆಪ್ ಅನ್ನು ಭ್ರಷ್ಟಾಚಾರಿ ಪಕ್ಷ ಆಗಿಸಿದರು ಎಂದು ಭೂಷಣ್ ಟೀಕಿಸಿದ್ದಾರೆ.
70 ಸದಸ್ಯಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 48 ಸೀಟುಗಳನ್ನು ಗಳಿಸಿದ್ದು, ಆಮ್ ಆದ್ಮಿ ಪಾರ್ಟಿ 22 ಕ್ಕೆ ಕುಸಿದಿದೆ. ಅರವಿಂದ ಕೇಜ್ರೀವಾಲ್, ಮನೀಶ್ ಸಿಸೋಡಿಯ, ಸತ್ಯೇಂದ್ರ ಜೈನ್ ಸೇರಿದಂತೆ ಪಕ್ಷದ ಹಲವಾರು ಅತಿರಥ ಮಹಾರಥರು ಸೋತಿದ್ದಾರೆ. ಪಕ್ಷದ ನಂಬರ್ ಒನ್ ಮತ್ತು ನಂಬರ್ ಟೂ ನಾಯಕರೆನಿಸಿದ್ದ ಕೇಜ್ರೀವಾಲ್ ಮತ್ತು ಸಿಸೋಡಿಯಾ ಸೋಲು ಅನಿರೀಕ್ಷಿತ ಆಘಾತ.
ದೊಡ್ಡ ಪ್ರಮಾಣದಲ್ಲಿ ಮುಸಲ್ಮಾನ ಮತದಾರರನ್ನು ಹೊಂದಿದ ಏಳು ಕ್ಷೇತ್ರಗಳನ್ನು ಹೊಂದಿದೆ ದೆಹಲಿ. ಏಳರಲ್ಲಿ ಆರನ್ನು ಗೆದ್ದಿದೆ ಆಪ್. ಆರರಲ್ಲಿ ನಾಲ್ವರು ಮುಸಲ್ಮಾನ ಉಮೇದುವಾರರು- ಬಲ್ಲೀಮರನ್ ಕ್ಷೇತ್ರದಿಂದ ಇಮ್ರಾನ್ ಹುಸೇನ್, ಮಾಟಿಯಾ ಮಹಲ್ ಕ್ಷೇತ್ರದಿಂದ ಆಲೇ ಮೊಹಮ್ಮದ್ ಇಕ್ಬಾಲ್, ಓಖ್ಲಾ ಕ್ಷೇತ್ರದಿಂದ ಅಮಾನತುಲ್ಲಾ ಖಾನ್ ಹಾಗೂ ಸೀಲಂಪುರ್ ಕ್ಷೇತ್ರದಿಂದ ಚೌಧರಿ ಝುಬೇರ್ ಅಹ್ಮದ್. 2020ರಲ್ಲಿ ಎಲ್ಲ ಏಳನ್ನೂ ಗೆದ್ದಿತ್ತು ಆಪ್.
ದೆಹಲಿಯ ಜನಾದೇಶವು ಆಪ್‌ನ ಘನಘೋರ ಸೋಲೇ ವಿನಾ ಬಿಜೆಪಿಯ ಗೆಲುವಲ್ಲ ಎಂದಿದೆ ಕಾಂಗ್ರೆಸ್ ಪಕ್ಷ. ಕೇಜ್ರೀವಾಲ್ ಅವರ ಮರೆಮೋಸ ಹಾಗೂ ಉತ್ಪ್ರೇಕ್ಷೆಗಳ ರಾಜಕಾರಣವನ್ನು ದೆಹಲಿ ಮತದಾರರು ತಿರಸ್ಕರಿಸಿದ್ದಾರೆ. ಈ ತಿರಸ್ಕಾರದ ಫಲಾನುಭವಿ ಬಿಜೆಪಿ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಈ ಸಲವೂ ಸೇರಿದಂತೆ ಸತತ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಒಂದೂ ಸ್ಥಾನವನ್ನು ಗೆದ್ದಿಲ್ಲ. ಎಡಪಂಥೀಯ ಪಕ್ಷಗಳು ಸ್ಪರ್ಧಿಸಿದ್ದ ಆರು ಸೀಟುಗಳಲ್ಲಿ ಒಟ್ಟು 2,158 ಮತಗಳನ್ನು ಗಳಿಸಿವೆ. ‘ನೋಟಾ’ಗಿಂತ ಕಡಿಮೆ ಮತಗಳಿವು. ನೋಟಾದಲ್ಲಿ 5,657 ಮತಗಳು ಚಲಾವಣೆಯಾಗಿವೆ.
ಜನಸಾಮಾನ್ಯರ ಪಕ್ಷ ಎಂಬುದು ಆಮ್ ಆದ್ಮಿ ಪಾರ್ಟಿಯ ಅರ್ಥ. ಆದರೆ ಕೇಜ್ರೀವಾಲ್ ಸಂಗಾತಿಗಳು ಜನಸಾಮಾನ್ಯರಾಗಿ ಉಳಿಯಲಿಲ್ಲ. ಸರ್ಕಾರಿ ನಿವಾಸ, ಕೆಂಪುದೀಪದ ಕಾರು, ಪೊಲೀಸ್ ಮೈಗಾವಲು ಬೇಡವೆಂದವರು ಅವೆಲ್ಲವುಗಳನ್ನು ಧಾರಾಳ ಬಳಸಿದರು. ಮೋದಿ ಮತ್ತು ಅಮಿತ್ ಶಾ ರಾಜಕೀಯ ಸೇಡಿನ ಕೇಸುಗಳನ್ನು ಹೆಟ್ಟಿದ ಪರಿಣಾಮವಾಗಿ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ವಾಸವನ್ನೂ ಅನುಭವಿಸಿದರು.
ವಿಶೇಷವಾಗಿ ಸರ್ಕಾರಿ ಶಾಲೆಗಳನ್ನು ಸುಧಾರಿಸಿ, ಆರೋಗ್ಯ ವ್ಯವಸ್ಥೆಯನ್ನೂ ಹದಗೆಟ್ಟ ಸ್ಥಿತಿಯಿಂದ ಹೊರತಂದದ್ದು ಹೌದು. ಆದರೆ ಉಳಿದಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುಚ್ಛಕ್ತಿ ಸರಬರಾಜು (200 ಯೂನಿಟ್ ಗಳವರೆಗೆ), ಉಚಿತ ನೀರು ಸರಬರಾಜು, ಉಚಿತ ಪಡಿತರ, ಹಿರಿಯ ನಾಗರಿಕರಿಗೆ ಉಚಿತ ತೀರ್ಥಯಾತ್ರೆ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಗಳು, ಉಪಾಧ್ಯಾಯರಿಗೆ ವಿದೇಶಗಳಲ್ಲಿ ತರಬೇತಿಯಂತ ಉಚಿತ ಯೋಜನೆಗಳು ಕೈ ಹಿಡಿಯುತ್ತವೆ ಎಂದು ನಂಬಿದ್ದರು.

ಆದರೆ ಹೊಸತಾಗಿ ತಮಗೇನೂ ಸಿಗಲಿಲ್ಲವೆಂಬ ಲೆಕ್ಕಾಚಾರದಲ್ಲಿ ಅಸಮಾಧಾನ ಹೊಂದಿತ್ತು ದೆಹಲಿಯ ಮಧ್ಯಮ ವರ್ಗ. ತಮ್ಮ ತೆರಿಗೆ ಹಣ ಬಡವರಿಗೆ ವಿನಿಯೋಗ ಆಗುತ್ತಿದೆಯೆಂಬ ಅತೃಪ್ತಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇತ್ತು. ಉಚಿತ ಯೋಜನೆಗಳನ್ನು ಟೀಕಿಸುತ್ತಿದ್ದ ಮೋದಿಯವರು ಈ ಸಲ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಎಲ್ಲ ಉಚಿತ ಯೋಜನೆಗಳನ್ನು ಮುಂದುವರೆಸುವುದೇ ಅಲ್ಲದೆ ಮಹಿಳೆಯರಿಗೆ ಆಪ್ ನೀಡುತ್ತಿರುವ 2100 ರುಪಾಯಿಗಳ ಮಾಸಿಕ ಕೊಡುಗೆಯನ್ನು 2500 ರುಪಾಯಿಗೆ ಹೆಚ್ಚಿಸುವ ಆಶ್ವಾಸನೆ ನೀಡಿದರು. 12 ಲಕ್ಷ ರುಪಾಯಿಗಳವರೆಗಿನ ಆದಾಯಕ್ಕೆ ತೆರಿಗೆಯಿಲ್ಲ ಎಂಬ ಬಜೆಟ್ ಘೋಷಣೆ ಮಧ್ಯಮವರ್ಗಕ್ಕೆ ತಾವು ನೀಡಿದ ಐತಿಹಾಸಿಕ ಕೊಡುಗೆ ಎಂದು ಘೋಷಿಸಿದರು. ಆಮ್ ಆದ್ಮಿ ಪಾರ್ಟಿಯನ್ನು ಹೀಗೆ ಹಲವು ಹತಾರುಗಳಿಂದ ಹಣಿದರು. ಈ ಪಾರ್ಟಿ ತನ್ನನ್ನು ತಾನೇ ಹಣಿದುಕೊಂಡಿತ್ತು. ಹೀಗಾಗಿ ನೆಲಕ್ಕೆ ಉರುಳಿತು.
ಕೆಲವು ಲೆಕ್ಕಾಚಾರಗಳ ಪ್ರಕಾರ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಬಿದ್ದ ಮತಗಳ ಸಂಖ್ಯೆ ಮತ್ತು ಆಪ್ ಉಮೇದುವಾರರು ಸೋತ ಅಂತರ ಒಂದೇ ಆಗಿತ್ತು. ಕಾಂಗ್ರೆಸ್ ಬೆಂಬಲಿಸದೆ ಕೈ ಕೊಟ್ಟ ಕಾರಣ ತಾನು ಸೋಲಬೇಕಾಯಿತು ಎಂಬುದಾಗಿ ಕೇಜ್ರೀವಾಲ್ ಸಂಗಾತಿಗಳು ಗೋಳಾಡಿದ್ದಾರೆ.
ಆದರೆ ಹರಿಯಾಣದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಿ ಗೆಲುವಿನ ಹೊಸ್ತಿಲಲ್ಲಿದ್ದ ಕಾಂಗ್ರೆಸ್ಸನ್ನು ಕೆಡವಿತ್ತು ಕೇಜ್ರೀವಾಲ್ ಪಾರ್ಟಿ ಎಂಬುದು ಕಾಂಗ್ರೆಸ್ ಆರೋಪ. ಅಷ್ಟೇ ಅಲ್ಲ, ದೆಹಲಿಯಲ್ಲಿ ಭ್ರಷ್ಟಾಚಾರ ವಿರೋಧಿ ಚಳವಳಿ ನಡೆಸಿದಾಗ ಶೀಲಾ ದೀಕ್ಷಿತ್ ನೇತೃತ್ವದ ದೆಹಲಿ ಸರ್ಕಾರ ಮತ್ತು ಕೇಂದ್ರದ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ತೀಕ್ಷ್ಣ ದಾಳಿಯನ್ನು ನಡೆಸಿತ್ತು ಕೇಜ್ರೀವಾಲ್ ಸರ್ಕಾರ ಎಂದಿದೆ. ಅರವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತಾನು ಠೇವಣಿ ಕಳೆದುಕೊಂಡಿದ್ದರೂ ಸೊಕ್ಕಿನ ಕೇಜ್ರೀವಾಲ್ ಪಕ್ಷವನ್ನು ಮೊಣಕಾಲೂರುವಂತೆ ಮಾಡಿರುವ ತೃಪ್ತಿಯಲ್ಲಿದೆ ಕಾಂಗ್ರೆಸ್ ಪಕ್ಷ.
ಇದನ್ನೂ ಓದಿ ಇಂಡಿಯಾ ಬ್ಲಾಕ್‌ಗೆ ಮುಳುವಾಗುತ್ತಿರುವ ʼಯಾದವೀ ಕಲಹʼ

ಡಿ ಉಮಾಪತಿ
ಹಿರಿಯ ಪತ್ರಕರ್ತರು