ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಬಾಣಂತಿಯರ, ತಾಯಂದಿರ ಸಾವು ತಡೆಯುವ ನಿಟ್ಟಿನಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಲಭ್ಯತೆಗೆ ಕ್ರಮ, ಆರೋಗ್ಯ ಹಕ್ಕು ಕಾಯ್ದೆಯ ಜಾರಿಗಾಗಿ ಡ್ರಗ್ ಆಕ್ಷನ್ ಫೋರಂ, ಸಾರ್ವತ್ರಿಕ ಆರೋಗ್ಯ ಆಂದೋಲನ-ಕರ್ನಾಟಕ ಆರೋಗ್ಯ ಹಕ್ಕಿನ ಜಾಥಾ ನಡೆಸಿ ಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ದಾವಣಗೆರೆ ಉಪನೋಂದಣಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿತು.
“ಬಳ್ಳಾರಿ ಜಿಲ್ಲಾಸ್ಪತ್ರೆ ಸೇರಿದಂತೆ ಇತರ ಜಿಲ್ಲೆಗಳಲ್ಲಿ ತಾಯಂದಿರ ಸಾವಿಗೆ ಕಾರಣವಾದ ಕಲುಷಿತ ಔಷಧಿಗಳು ಜನರನ್ನು ಬೆಚ್ಚಿಬೀಳಿಸಿವೆ. ಸಾರ್ವಜನಿಕರಿಗೆ ಬಿಡುಗಡೆ ಮಾಡುವ ಮೊದಲು ಪ್ರತಿ ಬ್ಯಾಚ್ ಔಷಧಿಗಳನ್ನು ಗುಣಮಟ್ಟವನ್ನು ಕೆಎಸ್ಎಂಆರ್ಸಿಎಲ್ ಖಚಿತಪಡಿಸಿಕೊಳ್ಳಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಲಭ್ಯವಾಗುವಂತೆ ನೋಡಿಕೊಳ್ಳುವಲ್ಲಿ ಕೆಎಸ್ಎಂಆರ್ಸಿಎಲ್ ವಿಫಲವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೊರಗಿನಿಂದ ಔಷಧಿ ಖರೀದಿಸಲು ಸೂಚಿಸುತ್ತಿರುವುದು ದುರಂತ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ನೀವು ಕರ್ನಾಟಕದ ಮುಖ್ಯ ಕಾರ್ಯದರ್ಶಿ, ಹಣಕಾಸು ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಮತ್ತು ಕೇರಳ, ತಮಿಳುನಾಡು ಮತ್ತು ರಾಜಸ್ಥಾನ ರಾಜ್ಯಗಳ ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಈ ಮೂರು ರಾಜ್ಯಗಳಲ್ಲಿನ ತಜ್ಞರು ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತಂದಿದ್ದಾರೆ, ಇದರ ಪರಿಣಾಮವಾಗಿ ಈ ರಾಜ್ಯಗಳ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಔಷಧಿಗಳ ಪೂರೈಕೆಯಾಗಿದೆ. ಹಾಗಾಗಿ ಸಮಿತಿ ರಚಿಸಬೇಕು” ಎಂದು ಒತ್ತಾಯಿಸಿದರು.

“ಕೆಎಸ್ಎಂಆರ್ಸಿಎಲ್ ಸಮಸ್ಯೆಯನ್ನು ಪರಿಹರಿಸುವ ಬದಲು, ಕರ್ನಾಟಕದ ಆರೋಗ್ಯ ಸಚಿವರು ‘ಡ್ರಗ್ ಅಂಡ್ ಕಾಸ್ಕೆಟಿಕ್ ಆಕ್ಟ್ 1940’ ರ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದಾರೆ. ಬದಲಿಗೆ ಕರ್ನಾಟಕ ಆರೋಗ್ಯ ಸಚಿವರು ಪಾರದರ್ಶಕತೆಯನ್ನು ತರುವ ಮೂಲಕ ಕೆಎಸ್ಎಂಆರ್ಸಿಎಲ್ ಅನ್ನು ಸುಧಾರಿಸಬೇಕು. ತಮಿಳುನಾಡು ವೈದ್ಯಕೀಯ ಸೇವಾ ಕೇಂದ್ರದಂತೆ ಪಾರದರ್ಶಕ, ರಾಜಸ್ಥಾನದಂತೆ ರಾಜ್ಯದಲ್ಲಿ ಆರೋಗ್ಯ ಹಕ್ಕು ಕಾಯ್ದೆಯನ್ನು ತಂದು ಜನರಿಗೆ ಉತ್ತಮ ಸೇವೆ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನರೇಗಾ ಕೆಲಸ, ಗೌರವಯುತ ಕೂಲಿ, ನಿರುದ್ಯೋಗ ಭತ್ಯೆಗೆ ಗ್ರಾಮೀಣ ಕೂಲಿ ಕಾರ್ಮಿಕರ ಪ್ರತಿಭಟನೆ.
“ಈ ಕಾಯ್ದೆ ರಾಜ್ಯದ ನಿವಾಸಿಗಳಿಗೆ ಯಾವುದೇ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಸೇವೆಗಳನ್ನು ಒಳಗೊಂಡಿದೆ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಹಕ್ಕುಗಳಿವೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಉಚಿತ ಹೊರ ರೋಗಿ ಮತ್ತು ಒಳರೋಗಿ ಚಿಕಿತ್ಸೆ ವಿಭಾಗ ಸೇವೆಗಳು, ಔಷಧಿಗಳು, ಪೂರ್ವಪಾವತಿ ಅಥವಾ ಪೊಲೀಸ್ ಅನುಮತಿಗಾಗಿ ಕಾಯದೆ ತುರ್ತು ಚಿಕಿತ್ಸೆ ಮತ್ತು ಆರೈಕೆ, ಅನಾರೋಗ್ಯ ಮತ್ತು ಕಾರಣ, ಫಲಿತಾಂಶಗಳು, ಚಿಕಿತ್ಸೆಯ ವೆಚ್ಚದ ಬಗ್ಗೆ ಮಾಹಿತಿ, ಮತ್ತು ಸಂಬಂಧಿತ ದಾಖಲೆಗಳನ್ನು ಕೇಳುವುದು, ನಿರ್ದಿಷ್ಟ ಪರೀಕ್ಷೆಗಳು ಅಥವಾ ಚಿಕಿತ್ಸೆಗಳಿಗೆ ಪೂರ್ವಮಾಹಿತಿ, ಆರೋಗ್ಯ ಆರೈಕೆ ಸಂಸ್ಥೆಗಳಲ್ಲಿನ ಚಿಕಿತ್ಸೆಗಳಲ್ಲಿ ಗೌಪ್ಯತೆ, ಸುರಕ್ಷತೆ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆ, ಕುಂದುಕೊರತೆ ಪರಿಹಾರ ಸೇರಿದಂತೆ ಜನಪರ ಆರೋಗ್ಯದಾಯಕ ಅಂಶಗಳಿದ್ದು, ರಾಜ್ಯದಲ್ಲೂ ಇಂತಹ ಆರೋಗ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸುತ್ತಿದ್ದೇವೆ” ಎಂದು ತಿಳಿಸಿದರು.
ಈ ವೇಳೆ ಕಬ್ಬು ಬೆಳೆಗಾರರ ಸಂಘದ ನಿರ್ದೇಶಕ ತೇಜಸ್ವಿ ಪಟೇಲ್, ರೈತ ಮುಖಂಡ ಅರುಣ್ ಕುರುಡಿ, ನೆರಳು ಬೀಡಿ ಕಾರ್ಮಿಕರ ಸಂಘಟನೆಯ ಅಧ್ಯಕ್ಷೆ ಜಬೀನಾ ಖಾನಂ, ಕರಿಬಸಪ್ಪ, ಗೋಪಾಲ, ಶರೀನಾ, ಮುಮ್ತಾಜ್, ಲಕ್ಷ್ಮೀ, ಆಶಾ, ಫಾತಿಮಾ ಬಾನು, ಶಬೀನಾ, ನಜೀಮಾ ಬಾನು, ಮೆಹಬೂಬ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
