ಮನೆಗಳ್ಳತನ ಮಾಡುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರ ಠಾಣೆ ಪೊಲೀಸರ ವಿಶೇಷ ತಂಡ ಬಂಧಿಸಿದ್ದು, ಕಳ್ಳರಿಂದ ಸುಮಾರು 35 ಲಕ್ಷ ಮೌಲ್ಯದ ಚಿನ್ನಾಭರಣ, ನಗದನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ತಾಲೂಕಿನ ಜಿಗಣಿ ಬಳಿಯ ಹಾರೋಗದ್ದೆ ಗ್ರಾಮದ ನಿವಾಸಿ ಶಂ ನೂರುಲ್ಲಾ ಬಿನ್ ಫಕ್ರುದ್ದಿನ್(50), ವಿನೋದ್ ಮಾರ್ಕಕರ್ ಬಿನ್ ವೀರಭದ್ರಪ್ಪ ಮತ್ತು ಸಾಗರ್ ಬಂಧಿತ ಕಳ್ಳರು.
ಈ ಮೂವರು ಸೇರಿ ಗೌರಿಬಿದನೂರು ನಗರದ ತ್ಯಾಗರಾಜ ಕಾಲೋನಿಯ ನಿವಾಸಿ ಅಶ್ವತ್ಥನಾರಾಯಣ ಶೆಟ್ಟಿ ಬಿನ್ ಲೇ.ಸತ್ಯನಾರಾಯಣಶೆಟ್ಟಿ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬೀಗ ಮುರಿದು ಜ.14ರಂದು ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಸಂತ್ರಸ್ತರು ಗೌರಿಬಿದನೂರು ಠಾಣೆಯಲ್ಲಿ ಮರುದಿನ ದೂರು ನೀಡಿದ್ದರು.
ಎಸ್ಪಿ ಕುಶಾಲ್ ಚೌಕ್ಸೆ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದ ಚಿಕ್ಕಬಳ್ಳಾಪುರ ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರಿಂದ ಒಟ್ಟು 412 ಗ್ರಾಂ ಬಂಗಾರ, 2.5ಕೆಜಿ ಬೆಳ್ಳಿ, 2 ವಾಚ್ ಮತ್ತು 420ರೂಪಾಯಿ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ವಿಶೇಷ ತಂಡದಲ್ಲಿ ಗೌರಿಬಿದನೂರು ವೃತ್ತದ ಸಿಪಿಐ ಕೆ. ಪಿ ಸತ್ಯನಾರಾಯಣ, ಎಸ್‌ಐಗಳಾದ ಚಂದ್ರಕಲಾ, ಗೋಪಾಲ, ರಮೇಶ್ ಗುಗ್ಗುರಿ, ಪ್ರಭಾಕರ್, ಸಿಬ್ಬಂದಿಗಳಾದ ಶ್ರೀರಾಮಯ್ಯ, ರಿಜ್ವಾನ್, ಶ್ರೀನಿವಾಸ್‌ರೆಡ್ಡಿ, ಅಶ್ವತ್ಥ, ಮಹಂತೇಶ್, ಮರಳುಸಿದ್ದೇಶ್ವರ, ಶಿವಶೇಖರ್, ರವಿಕುಮಾರ್, ಮುನಿಕೃಷ್ಣ ಅವರಿದ್ದರು. ಕಳ್ಳರನ್ನು ಬಂಧಿಸಿದ ವಿಶೇಷ ತಂಡಕ್ಕೆ ಎಸ್ಪಿ ಕುಶಾಲ್ ಚೌಕ್ಸೆ ನಗದು ಬಹುಮಾನವನ್ನು ಘೋಷಣೆ ಮಾಡಿದ್ದು, ಶ್ಲಾಘಿಸಿದ್ದಾರೆ.