ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಆದರೆ ಇಲ್ಲಿನ ಆಸ್ಪತ್ರೆಯ ಶೌಚಾಲಯಗಳು ಸ್ವಚ್ಛತೆಯಿಲ್ಲದೆ ಗಬ್ಬು ನಾರುತ್ತಿದ್ದು, ರೋಗಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ವಚ್ಛತೆಯ ಕುರಿತು ಜಾಗೃತಿ ಕಾರ್ಯಕ್ರಮಗಳು ಆಯೋಜಿಸುವ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆಯಲ್ಲಿನ ಶೌಚಾಲಯಗಳೇ ಅವ್ಯವಸ್ಥೆ ಸರಿಪಡಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಶೌಚಾಲಯಗಳು ಸುಮಾರು ದಿನಗಳಿಂದ ಗಬ್ಬು ನಾರುತ್ತಿದು, ರೋಗ ವಾಸಿ ಮಾಡಿಕೊಳ್ಳಲು ಆಸ್ಪತ್ರೆಗೆ ಬಂದ ಜನರಿಗೆ ರೋಗ ಅಂಟಿಸುವ ತಾಣಗಳಾಗಿವೆ. ಆದರೂ ಇಲ್ಲಿನ ವೈದ್ಯ ಸಿಬ್ಬಂದಿ, ಅಧಿಕಾರಿಗಳು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೋರಾಟಗಾರ ರಾಹುಲ್ ಕೊಲ್ಲೂರಕರ್ ಈದಿ.ಕಾಮ್ ಜೊತೆ ಮಾತನಾಡಿ, ʼಆಸ್ಪತ್ರೆಯಲ್ಲಿ ನಾಲ್ಕೈದು ಶೌಚಾಲಯಗಳಿವೆ. ಆದರೆ ನಿರ್ವಹಣೆ ಕೊರತೆಯಿಂದ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿಲ್ಲ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಜೊತೆಗೆ ಬರುವ ಸಂಬಂಧಿಕರು ಶೌಚಾಲಯಕ್ಕಾಗಿ ಪರದಾಡುವಂತಹ ಸ್ಥಿತಿ ಎದುರಾಗಿದೆ ಎಂದು ದೂರಿದರು.
ʼಹೊಸ ಜಿಲ್ಲಾ ಆಸ್ಪತ್ರೆ ಉದ್ಘಾಟನೆಯಾಗಿ ಮೂರು ವರ್ಷಗಳಾಗಿದೆ. ಇಲ್ಲಿನ ಶೌಚಾಲಯ ದುರಸ್ತಿಗೆ ಆಸ್ಪತ್ರೆ ನಿರ್ದೇಶಕರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಶೌಚಾಲಯ ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದುʼ ಎಂದು ಸ್ಥಳೀಯ ನಿವಾಸಿ ಬಂಡೆಪ್ಪ ಕಟ್ಟಿಮನಿ ಎಚ್ಚರಿಸಿದರು.