ಸಂವಿಧಾನದ 174(1)ನೇ ವಿಧಿಯು ವಿಧಾನಸಭಾ ಅಧಿವೇಶನಗಳ ನಡುವಿನ ಅಂತರ ಆರು ತಿಂಗಳಿಗಿಂತ ಹೆಚ್ಚು ಇರಬಾರದು. ಅಧಿವೇಶನ ಮುಗಿದ ಆರು ತಿಂಗಳೊಳಗೆ ಮತ್ತೊಂದು ಅಧಿವೇಶನ ನಡೆಸಬೇಕು ಎಂದು ಹೇಳುತ್ತದೆ. ಆದರೂ, ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲ ಅವರು ಅಧಿವೇಶನ ನಡೆಸಲು ಸರ್ಕಾರಕ್ಕೆ ಸೂಚಿಸುತ್ತಿಲ್ಲ. ಸಾಂವಿಧಾನಿಕವಾಗಿ ಕಡ್ಡಾಯವಾಗಿರುವ ನಿಯಮವನ್ನು ರಾಜ್ಯಪಾಲರು ಯಾಕೆ ಉಲ್ಲಂಘಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸುಮಾರು 2ವರ್ಷದಿಂದ ಮಣಿಪುರವು ಜನಾಂಗೀಯ ಹಿಂಸಾಚಾರವನ್ನು ಎದುರಿಸುತ್ತಿದೆ. ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಮಣಿಪುರ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ. ಇದೀಗ, ಹಿಂಸಾಚಾರ ಆರಂಭವಾಗಿ 2 ವರ್ಷಗಳ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ಇದೆಲ್ಲ ಬೆಳವಣಿಗೆಗಳ ನಡುವೆ ಅಧಿವೇಶನ ಕರೆಯದೇ ಇರುವ ರಾಜ್ಯಪಾಲರನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಸಾಂವಿಧಾನಿಕ ನಿಯಮದ ಪ್ರಕಾರ, ಮಣಿಪುರ ವಿಧಾನಸಭಾ ಅಧಿವೇಶನ ಕರೆಯಲು ಇಂದು (ಮಂಗಳವಾರ) ಕಡೆಯ ದಿನವಾಗಿದೆ. ಆದರೂ, ರಾಜ್ಯಪಾಲರು ಮೌನವಾಗಿದ್ದಾರೆ” ಎಂದು ಗಮನ ಸೆಳೆದಿದ್ದಾರೆ.
“ಮಣಿಪುರ ರಾಜ್ಯಪಾಲರು ಮಣಿಪುರ ವಿಧಾನಸಭೆ ಅಧಿವೇಶನವನ್ನು ಕರೆಯದೆ, ಸಂವಿಧಾನದ 174(1)ನೇ ವಿಧಿಯನ್ನು ಯಾಕೆ ಉಲ್ಲಂಘಿಸುತ್ತಿದ್ದಾರೆ?” ರಮೇಶ್ ಹೇಳಿದ್ದಾರೆ.
“ಸೋಮವಾರ ವಿಧಾನಸಭೆ ಕರೆದರೆ, ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಈ ನಡುವೆ, ಬಿರೇನ್ ಸಿಂಗ್ ಭಾನುವಾರ ರಾಜೀನಾಮೆ ನೀಡಿದರು. ಬಿರೇನ್ ಸಿಂಗ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಿಸಲು ಬಿಜೆಪಿಗ ಸಾಧ್ಯವಾಗಿಲ್ಲ. ಹೀಗಾಗಿಯೇ, ವಿಧಾನಸಭಾ ಅಧಿವೇಶನವನ್ನೇ ಅನೂರ್ಜಿತಗೊಳಿಸಲಾಗಿದೆ” ಎಂದು ರಮೇಶ್ ಆರೋಪಿಸಿದ್ದಾರೆ.
ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ಅವರ ರಾಜೀನಾಮೆ ನೀಡಿದ್ದನ್ನು ‘ವಿಳಂಬ’ ಎಂದು ಕಾಂಗ್ರೆಸ್ ಬಣ್ಣಿಸಿದೆ. ಮುಖ್ಯಮಂತ್ರಿ ರಾಜೀನಾಮೆ ತಡವಾಯಿತು ಎಂದಿದೆ. ರಾಜ್ಯದ ಜನರು ಈಗಲಾದರೂ, ಪ್ರಧಾನಿ ಮೋದಿ ಅವರನ್ನು ರಾಜ್ಯಕ್ಕೆ ಬರಬಹುದೆಂದು ಕಾಯುತ್ತಿದ್ದಾರೆ ಎಂದು ಹೇಳಿದೆ.