ರಾಜ್ಯದಲ್ಲಿ ಮೈಕ್ರೊ ಫೈನಾನ್ಸ್ ಹಾವಳಿ ಮುಂದುವರೆದಿದ್ದು, ಸಾಲ ಮರುಪಾವತಿಸದ ಕಾರಣಕ್ಕೆ ಮನೆಗೆ ಬೀಗ ಹಾಕಿ ಕುಟುಂಬವನ್ನು ಹೊರಹಾಕಿರುವ ಘಟನೆ ಹಾಸನ ತಾಲೂಕಿನ ದೊಡ್ದ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆಧಾರ್ ಹೌಸಿಂಗ್ ಫೈನಾನ್ಸ್ ಸಂಸ್ಥೆಯಿಂದ ಗ್ರಾಮದ ಮಂಜೇಗೌಡ ಮನೆ ನಿರ್ಮಾಣಕ್ಕಾಗಿ ₹9 ಲಕ್ಷ ಸಾಲ ಪಡೆದಿದ್ದರು. ಮನೆ ನಿರ್ಮಾಣದ ಹಂತದಲ್ಲಿರುವಾಗಲೇ ಮಂಜೇಗೌಡ ಅವರ ಮಗ ಅಪಘಾತಕ್ಕೀಡಾದ ಕಾರಣ, ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಸಾಲ ಕಟ್ಟಲು ಸಾಧ್ಯವಾಗದೆ ಪರದಾಡಿದೆ. ಸಾಲ ಮರುಪಾವತಿ ಮಾಡಲು ವಿಳಂಬವಾಗಿದ್ದರಿಂದ ಮನೆಗೆ ಬೀಗ ಹಾಕಿ ಕುಟುಂಬವನ್ನು ಆಧಾರ್ ಹೌಸಿಂಗ್ ಫೈನಾನ್ಸ್ ಸಂಸ್ಥೆ ಬೀದಿಗಿಟ್ಟಿತ್ತು.
ಫೈನಾನ್ಸ್ ಕಂಪನಿಯ ಕಿರುಕುಳದ ಕಾರಣ ಮಂಜೇಗೌಡರ ಕುಟುಂಬ ತಿಂಗಳುಗಳಿಂದ ಕೊಟ್ಟಿಗೆಯಲ್ಲಿಯೇ ಜೀವನ ನಡೆಸುತ್ತಿತ್ತು. ವಿಷಯ ಬೆಳಕಿಗೆ ಬಂದ ಬಳಿಕ ರೈತ ಸಂಘದ ಕಾರ್ಯಕರ್ತರು ಇಂದು ಫೈನಾನ್ಸ್ ಕಂಪನಿ ಹಾಕಿದ್ದ ಬೀಗ ಒಡೆದು ಕುಟುಂಬವನ್ನು ಮನೆಯೊಳಗೆ ಸೇರಿಸಿದೆ.
ಇದನ್ನೂ ಓದಿದ್ದೀರಾ?ಹಾಸನ | ಜೀತ ಕಾರ್ಮಿಕ ಪದ್ದತಿ ಆಚರಣೆ ಶಿಕ್ಷಾರ್ಹ ಅಪರಾಧ: ಪಿಡಿಒ ಆರ್ ಪ್ರಭಾ
ಆರು ತಿಂಗಳ ಹಿಂದೆ ಕಂಪನಿ ಮನೆಯನ್ನು ಸೀಜ್ ಮಾಡಿತ್ತು. ರೈತ ಸಂಘ ಮಾಡಿದ ಕಾರ್ಯದಿಂದ ಇದೀಗ ಮಂಜೇಗೌಡ ಕುಟುಂಬ ನಿಟ್ಟುಸಿರು ಬಿಟ್ಟಂತಾಗಿದೆ.
