ರಾಜ್ಯದ ಲಕ್ಷಾಂತರ ಬಗರ್ ಹುಕುಂ ಬಡ ಸಾಗುವಳಿದಾರರಿಗೆ ಭೂಮಂಜೂರಾತಿ ನೀಡುತ್ತಿರುವುದು ಸ್ವಾಗತಾರ್ಹ. ಜತೆಗೆ ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆಯೊಂದಿಗೆ ಮಂಜೂರಾತಿ ನೀಡಲು ಅಡ್ಡಿಯಾಗಿರುವ ಕಾನೂನು ತೊಡಕುಗಳ ನಿವಾರಣೆಯ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.
“ರಾಜ್ಯದಲ್ಲಿ ಹಲವು ದಶಕಗಳ ಕಾಲದಿಂದಲೂ ನನೆಗುದಿಗೆ ಬಿದ್ದಿದ್ದ ಲಕ್ಷಾಂತರ ಬಗರ್ ಹುಕುಂ ಬಡ ಸಾಗುವಳಿದಾರರಿಗೆ ಕರ್ನಾಟಕ ಸರ್ಕಾರ ಭೂಮಿಯ ಹಕ್ಕಿನ ಕನಸನ್ನು ಈಡೇರಿಸಲು ಮುಂದಾಗಿರುವುದಕ್ಕೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಕ್ತವಾಗಿ ಸ್ವಾಗತಿಸುತ್ತದೆ. ಕಂದಾಯ ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ತಾಲೂಕು, ಹೋಬಳಿ ಮತ್ತು ಗ್ರಾಮ ಹಂತದ ಕಂದಾಯ ನೌಕರ ವರ್ಗಗಳು ಇದಕ್ಕಾಗಿ ಅಪಾರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ” ಎಂದರು.
“ಬಡವರ ಹಿತದೃಷ್ಟಿಯಿಂದ ‘ಉಳುವವನೇ ಹೊಲದೊಡೆಯ ವಾಸಿಸುವವನೇ ಬಾಸು’ ಹಾಗೂ ‘ಸರ್ಕಾರಿ ಜಾಗಗಳ ಸಕ್ರಮ’ವೂ ಲಕ್ಷಾಂತರ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಫಾರಂ ನಂ. 50, 53 ಹಾಗೂ 57ರ ಅರ್ಜಿಗಳಲ್ಲಿ ಸರ್ಕಾರ ಕೆಲವು ಲಕ್ಷಗಳ ಅರ್ಜಿಗಳನ್ನು ಮಾನ್ಯ ಮಾಡಿ ಭೂಮಂಜೂರಾತಿಗೆ ಮುಂದಾಗಿರುವುದು ಈವರೆಗೂ ನಿರಂತರವಾಗಿ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ದಲಿತ, ರೈತ ಪ್ರಗತಿಪರರ ಹಲವಾರು ಸಂಘಟನೆಗಳು ನಡೆಸಿದ ಹೋರಾಟದ ಪ್ರತಿಫಲವೂ ಆಗಿದೆ” ಎಂದು ಹೇಳಿದರು.
“ಇದೇ ಸಮಯದಲ್ಲಿ ಬಹುತೇಕರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಕಾನೂನಿನ ಹೆಸರಿನಲ್ಲಿ ಭೂಮಂಜೂರಾತಿ ನೀಡದೆ ಅರ್ಜಿಗಳನ್ನು ಮಾನ್ಯ ಮಾಡುತ್ತಿಲ್ಲ. ಇದಕ್ಕೆ ಹಲವಾರು ರೀತಿಯ ಕಾರಣಗಳನ್ನು ನೀಡುತ್ತಿದ್ದು, ಕೃಷಿ ಯೋಗ್ಯವಲ್ಲದ ಭೂಮಿ, ಅರಣ್ಯ, ಖರಾಬ್, ಆ ಖರಾಬ್, ಬ ಖರಾಬ್, ರಾಳಗುಡ್ಡ, ಪಾರಂಪೋಕು, ಚೌಗು ಪ್ರದೇಶ, ಅರಳು ಪ್ರದೇಶ, ಸವಳು ಭೂಮಿ, ಉಸುಕು ಭೂಮಿ, ಹುಲ್ಲುಬನ್ನಿ, ಕಾವಲು, ಪೈಸಾರಿ, ಮಫತ್ ಭೂಮಿ, ಖಾರೀಜ್ ಖಾತಾ, ಇನಾಂ, ಲ್ಯಾಂಡ್ ಬ್ಯಾಂಕ್, ಗ್ರಾಮಠಾಣಾ, ಸಿ ಆಂಡ್ ಡಿ ಕಿರು ಅರಣ್ಯದ ಹೆಸರಿನಲ್ಲಿರುವ ಭೂಮಿಗಳು, ಮಲೆನಾಡಿನಲ್ಲಿ ಕರೆಯಲ್ಪಡುವ ಸೊಪ್ಪಿನ ಬೆಟ್ಟ(ಊರುಗುಪ್ಪೆ), ನೆಡುತೋಪು, ಬಾಣೆ, ದೇವರಕಾಡು ಹೆಸರಿನಲ್ಲಿರುವ ಭೂಮಿಗಳಾಗಿವೆ. ಇದೇ ಭೂಮಿಗಳಲ್ಲಿ ಭೂರಹಿತ ಜನರು ಕಷ್ಟಪಟ್ಟು ಹಸನುಗೊಳಿಸಿಕೊಂಡು ಬದುಕು ಕಟ್ಟಿಕೊಂಡಿದ್ದಲ್ಲದೆ ನಮ್ಮೆಲ್ಲರಿಗೂ ಆಹಾರದ ಉತ್ಪಾದನೆಯನ್ನೂ ಮಾಡುತ್ತಿದ್ದಾರೆ. ವಿಧದ ಭೂಮಿಗಳು ಸರ್ಕಾರದ ದೃಷ್ಟಿಯಲ್ಲಿ ಭೂಮಿಗಳಲ್ಲೇ ಲಕ್ಷಾಂತರ ಬಡ ಜನರು ದುಡಿಯುತ್ತ ಸ್ವಾಭಿಮಾನಿ ಬದುಕು ಕಟ್ಟಿಕೊಂಡು ದಶಕಗಳ ಕಾಲದಿಂದಲೂ ಬುದುಕಿಗೆ ಆಸರೆಯಾಗಿದ್ದ ಭೂಮಿಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಟಗಳನ್ನು ಮಾಡುತ್ತ ನೋವನ್ನು ಅನುಭವಿಸಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಮಾಡಿಕೊಂಡು ಬಂದ ಜನರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದೆ” ಎಂದರು.
“ರಾಜ್ಯದ ಹಲವಾರು ಭಾಗಗಲ್ಲಿ ಜನರು ಸಾಗುವಳಿ ಮಾಡುವ ಭೂಮಿಗಳನ್ನೇ ಸರ್ಕಾರ ಪವನ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಗಣಿಗಾರಿಕೆಗೆ, ಇನ್ನಿತರೆ ಕಂಪನಿಗಳಿಗೆ ಗುತ್ತಿಗೆ ಅಥವಾ ಮಾರಾಟ ಮಾಡಿರುವ ಉದಾಹರಣೆಗಳಿವೆ. ಆದರೆ ಸಾಗುವಳಿ ಮಾಡುತ್ತಿರುವ ಬಡವರಿಗೆ ಭೂಮಿ ಕೊಡುವುದಕ್ಕೆ ಕಾನೂನಿನ ಅಡ್ಡಿಯಾಕೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ l ಮುಂದುವರೆದ ಮೈಕ್ರೋ ಫೈನಾನ್ಸ್ ಕಿರುಕುಳ; ಕೊಟ್ಟಿಗೆಗೆ ಬಿದ್ದಿದ್ದ ಕುಟುಂಬ ಮರಳಿ ಮನೆಗೆ
“ಸಾಗುವಳಿ ಮಾಡುತ್ತ ಅರ್ಜಿ ಸಲ್ಲಿಸಿರುವ ಬಹುತೇಕರು ಭೂರಹಿತರೇ ಆಗಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರುಗಳಿಗೆ ಸಾಮಾಜಿಕ ನ್ಯಾಯವಾಗಿಯೂ ಈ ಭೂಮಿ ಮಂಜೂರಾತಿ ನೀಡುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾದ್ದು ಸರ್ಕಾರದ ಜವಾಬ್ದಾರಿ. ರಾಜ್ಯಾದ್ಯಂತ ವಸತಿ ವಿಚಾರವಿದ್ದು, ಪ್ರತಿ ಪಂಚಾಯಿತಿ ಮಟ್ಟದಲ್ಲಿ ವಸತಿ ರಹಿತರಿಗೆ ವಸತಿಯೂ ಮೂಲಭೂತ ಹಕ್ಕಾಗಿ ಪರಿಗಣಿಸಿ ಪ್ರತಿಯೊಬ್ಬರಿಗೂ ಗೌರವಯುತವಾದ ಬದುಕು ಕಟ್ಟಿಕೊಳ್ಳಲು ಇರುವ ಜಾಗ ಮಾನ್ಯ ಮಾಡಬೇಕು ಮತ್ತು ಜಾಗವಿಲ್ಲದವರಿಗೆ ವಾಸಕ್ಕೆ ಜಾಗ ನೀಡಬೇಕು” ಎಂದು ಮನವಿ ಮಾಡಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಮುಖಂಡರು, ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ಇದ್ದರು.