ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮಹಿಳೆಯೊಬ್ಬರು ವೈವಾಹಿಕ ವೆಬ್ಸೈಟ್ ಮೂಲಕ ವಂಚನೆಗೆ ಒಳಗಾಗಿದ್ದು, ₹7 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.
ವಿಜಯಪುರದ ಹಿಟ್ಟಿನಹಳ್ಳಿ ಗ್ರಾಮದ ಭೀಮರಾಜ್(40) ವೈವಾಹಿಕ ವೆಬ್ಸೈಟ್ ಮೂಲಕ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದು, ದಾವಣಗೆರೆ ಜಿಲ್ಲೆಯ ಮೂಲ ಹೊಂದಿರುವ ರಾಜ್ಯ ಸರ್ಕಾರಿ ಉದ್ಯೋಗಿಯೆಂದು ಸುಳ್ಳು ಹೇಳಿಕೊಂಡು ಮಹಿಳೆಯಿಂದ ಹಣ ಪಡೆದಿದ್ದಾನೆ.
“ಆರೋಪಿ ಭೀಮರಾಜ್ ಮದುವೆಯಾವುದಾಗಿ ನಂಬಿಸಿ ಮಹಿಳೆಯಿಂದ ₹7 ಲಕ್ಷ ಹಣ ಪಡೆದುಕೊಂಡಿದ್ದಾನೆ. ಆರು ತಿಂಗಳ ಕಾಲ ಇಬ್ಬರೂ ಮಾತನಾಡುವುದು, ಭೇಟಿಯಾಗುವ ಮೂಲಕ ವಿಶ್ವಾಸವನ್ನು ಬೆಳೆಸಿಕೊಂಡಿದ್ದು, ʼತಮ್ಮ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಹಣ ಬೇಕಾಗಿದೆʼಯೆಂದು ಮಹಿಳೆಯನ್ನು ಪುಸಲಾಯಿಸಿ ಮಹಿಳೆಯಿಂದ ಹಣ ಪಡೆದುಕೊಂಡಿದ್ದಾನೆ” ಎಂದು ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರಿನಲ್ಲಿ ಕೋಮುಗಲಭೆ ಸೃಷ್ಟಿಸಲು ಆರ್‌ಎಸ್‌ಎಸ್-ಬಿಜೆಪಿ ಹುನ್ನಾರ?
“ವಂಚನೆ ಕಂಡು ಬಂದ ಬಳಿಕ ಸಂತ್ರಸ್ತೆ ಭದ್ರಾವತಿ ಹಳೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭೀಮರಾಜ್ ವಿರುದ್ಧ ರಾಜ್ಯದ ವಿವಿಧ ಭಾಗಗಳ 10 ಪೊಲೀಸ್ ಠಾಣೆಗಳಲ್ಲಿ 12 ಪ್ರಕರಣಗಳು ದಾಖಲಾಗಿವೆಯೆಂದು ತನಿಖೆಯಿಂದ ತಿಳಿದುಬಂದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಇದೀಗ ಭೀಮರಾಜ್ ಪ್ರಸ್ತುತ ಕೊಪ್ಪಳ ಜಿಲ್ಲಾ ಕಾರಾಗೃಹದ ಬಂಧನದಲ್ಲಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
