ಮಹಾ ಕುಂಭಮೇಳ ಕಾಲ್ತುಳಿತ ವಿಚಾರವನ್ನು ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪ್ರಸ್ತಾಪಿಸಿದ್ದಾರೆ. ಪ್ರಸ್ತುತ ಎಲ್ಲವೂ ಡಿಜಿಟಲೀಕರಣವಾಗಿರುವಾಗ ಮಹಾ ಕುಂಭಮೇಳ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ನಿಖರ ಸಂಖ್ಯೆಯನ್ನು ಈವರೆಗೂ ಯಾಕೆ ಬಹಿರಂಗಪಡಿಸಿಲ್ಲ ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.
ಮಹಾ ಕುಂಭಮೇಳವನ್ನು ಸರಿಯಾಗಿ ನಿರ್ವಹಣೆ ಮಾಡದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, “ಡಬಲ್ ಇಂಜಿನ್ ಸರ್ಕಾರವು ಈಗ ಪ್ರಮಾದವನ್ನು ಕೂಡಾ ಡಬಲ್ ಮಾಡುತ್ತಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕುಟುಂಬ ಸಮೇತ ಮಹಾ ಕುಂಭಮೇಳಕ್ಕೆ ತೆರಳಿದ ಡಿಸಿಎಂ ಡಿ ಕೆ ಶಿವಕುಮಾರ್
“ಮೊದಲ ಬಾರಿಗೆ ಕುಂಭಮೇಳಕ್ಕೆ ಹೋದ ಭಕ್ತರು ಸುಮಾರು 300 ಕಿಲೋ ಮೀಟರ್ ಸಂಚಾರದಟ್ಟಣೆಯಲ್ಲಿ ಸಿಲುಕುವಂತಾಯಿತು. ಗಡಿಗಳನ್ನು ಸೀಲ್ ಮಾಡಲಾಗಿದೆ. ಸರ್ಕಾರವು ಟ್ರಾಫಿಕ್ ಅನ್ನು ನಿರ್ವಹಿಸಲು ಸಾಧ್ಯವಾಗದೆ ಇರುವಂತದ್ದೆ ವೀಕ್ಷಿತ ಭಾರತವೇ? ನಾವು ಭೂಮಿಯಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೆ ಇರುವಾಗ ಚಂದ್ರನಲ್ಲಿಗೆ ಹೋಗುವುದರಲ್ಲೇನಿದೆ” ಎಂದು ಪ್ರಶ್ನಿಸಿದರು.
“ಡ್ರೋನ್‌ಗಳು ಈಗ ಎಲ್ಲಿದೆ ಎಂದು ನಾನು ಕೇಳಲು ಬಯಸುತ್ತೇನೆ? ಡಿಜಿಟಲೀಕರಣದ ಬಗ್ಗೆ ಸಾಕಷ್ಟು ಜಾಹೀರಾತುಗಳನ್ನು ನೀಡಿದರು. ಆದರೆ ಮಹಾ ಕುಂಭಮೇಳದಲ್ಲಾದ ಕಾಲ್ತುಳಿತದಿಂದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ನಿಖರ ಮಾಹಿತಿಯನ್ನು ಈವರೆಗೆ ನೀಡಲು ಸಾಧ್ಯವಾಗಿಲ್ಲ” ಎಂದು ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಅಖಿಲೇಶ್ ಯಾದವ್ ಟೀಕಿಸಿದರು.
ಸುಮಾರು 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳ ಪ್ರಯಾಗರಾಜ್‌ನಲ್ಲಿ ಜನವರಿ 13ರಿಂದ ಆರಂಭವಾಗಿದ್ದು 45 ದಿನಗಳ ಕಾಲ ಇರಲಿದೆ. ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದ್ದು ಉತ್ತರ ಪ್ರದೇಶ ಸರ್ಕಾರ 30 ಮಂದಿ ಸಾವನ್ನಪ್ಪಿ, 60 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ. ಆದರೆ ಮೃತರ ಸಂಖ್ಯೆ 50ರ ಆಸುಪಾಸಿನಲ್ಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ ಮತ್ತು ಸ್ಥಳೀಯರು ಹೇಳಿದ್ದಾರೆ. ಇನ್ನೂ ಕೂಡಾ ಹಲವು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
