ಈ ದಿನ ಸಂಪಾದಕೀಯ | ಚೀನಾಕ್ಕೆ ತಲೆನೋವಾಗಿರುವ ಜನಸಂಖ್ಯೆ- ಭಾರತ ಕಲಿಯಬೇಕಿರುವ ಪಾಠಗಳು!

Date:

Advertisements

ಹೆಚ್ಚು ಮಕ್ಕಳನ್ನು ಹಡೆಯಿರಿ ಎಂದು ಹೇಳುವ ಚೀನೀ ಸರ್ಕಾರದ ಕರೆಯು ಮಹಿಳೆಯರ ಕೋಪಕ್ಕೆ ಗುರಿಯಾಗಿದೆ. ಪುರುಷರೇ ತುಂಬಿರುವ ಈ ಸಮಿತಿಗಳ ಸದಸ್ಯರು ಹೆರಿಗೆ ನೋವೆಂದರೆ ಏನೆಂದು ತಿಳಿಯದು ಎಂಬುದು ಹೆಣ್ಣುಮಕ್ಕಳ ಆಕ್ರೋಶ. ತಜ್ಞರ ಪ್ರಕಾರ ನಗರಪ್ರದೇಶದ ಮಹಿಳೆಯರು ಹಳ್ಳಿಯ ಚೀನೀ ಪುರುಷರನ್ನು ಮದುವೆಯಾಗಲು ತಯಾರಿಲ್ಲ. ಹಳ್ಳಿಯ ಚೀನೀ ಪುರುಷರು ಹೆಣ್ಣು ಸಿಗದೆ ಅವಿವಾಹಿತರಾಗಿ ಉಳಿಯುತ್ತಿದ್ದಾರೆ.

ಮದುವೆ ಮಾಡಿಕೊಂಡು ಮಕ್ಕಳನ್ನು ಹೆರಲು ಚೀನೀಯರು ಹಿಂಜರಿಯುತ್ತಿದ್ದಾರೆ. ಕಳೆದ ವರ್ಷ ಚೀನಾದಲ್ಲಿ ಹೊಸ ವಿವಾಹಗಳ ಸಂಖ್ಯೆ ದಾಖಲೆ ಪ್ರಮಾಣಕ್ಕೆ ಕುಸಿದಿದೆ ಎಂಬ ವರದಿಗಳು ಪ್ರಕಟವಾಗಿವೆ. ಬದಲಾಗಿ ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ. ಜನಸಂಖ್ಯೆ ಚೀನಾದ ಬಲು ದೊಡ್ಡ ತಲೆನೋವು. ಒಂದೊಮ್ಮೆ ಹೆಚ್ಚಳದಿಂದ ಕಂಗೆಟ್ಟಿತ್ತು. ಇದೀಗ ಕುಸಿತ ಕಂಡಿದೆ. ಬಹುವಾಗಿ ತಲೆ ಕೆಡಿಸಿಕೊಂಡಿದೆ, ದುಡಿಯುವ ಕೈಗಳು ತಗ್ಗಿದರೆ ಆರ್ಥಿಕ ಪ್ರಗತಿಗೆ ಅಡ್ಡಿಯಾದೀತು ಎಂಬುದು ಈ ದೇಶದ ಬಹುದೊಡ್ಡ ಚಿಂತೆ. ‘ಬೇಕಾದಷ್ಟು ಮಕ್ಕಳ ಹಡೆಯಿರಿ… ಮದುವೆಯಾಗದಿದ್ದರೂ ಸರಿ’ ಎಂದು ಈ ಹಿಂದೆ ಅಂದಿತ್ತು ಚೀನಾ ಸರ್ಕಾರ. ವೀರ್ಯದಾನಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಪುಸಲಾಯಿಸಿತ್ತು. ಹಡೆದರೆ ಹಲವು ಸೌಲಭ್ಯಗಳ ನೀಡುವುದಾಗಿ ಆಮಿಷವೊಡ್ಡಿತ್ತು.

ಸಂತಾನ ಫಲವತ್ತತೆಯ ಚಿಕಿತ್ಸೆಗಳು ಮತ್ತು ಕೃತಕ ಗರ್ಭಧಾರಣೆಗಳಿಗೆ ಆರೋಗ್ಯವಿಮೆ ನೀಡಲು ಮುಂದಾಗಿತ್ತು. ಐದೂವರೆ ಅಡಿಗಳಿಗಿಂತ ಹೆಚ್ಚು ಎತ್ತರವಿದ್ದ ವಿದ್ಯಾರ್ಥಿಗಳು ವೀರ್ಯದಾನ ಮಾಡಿ 660 ಡಾಲರು ಗಳಿಸಬಹುದು. ವೀರ್ಯದ ಬ್ಯಾಂಕುಗಳು ತಲೆ ಎತ್ತತೊಡಗಿವೆ. ಸರ್ಕಾರದ ಈ ಕ್ರಮಗಳು ಸಾರ್ವಜನಿಕರ ಚರ್ಚೆಗೆ, ಲೇವಡಿಗೆ, ಸಿನಿಕತೆಗೆ ಗುರಿಯಾಗಿವೆ. ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ವಿದ್ಯಮಾನವನ್ನು ವರದಿ ಮಾಡಿತ್ತು.

ಹಲವಾರು ದಶಕಗಳ ಕಾಲ ‘ಒಂದೇ ಮಗು’ವಿನ ನೀತಿಯನ್ನು ಬಹು ಬಿಗಿಯಾಗಿ ಜಾರಿಗೊಳಿಸಿತ್ತು ಚೀನಾ. ಮದುವೆಯಾಗದೆ ಮಗು ಹೆತ್ತ ತಾಯಂದಿರಿಗೆ ಹೆರಿಗೆ ರಜೆ ಮುಂತಾದ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿತ್ತು. ಮೇಲಾಗಿ ದಂಡವನ್ನೂ ವಿಧಿಸುತ್ತಿದ್ದ ದಿನಗಳಿದ್ದವು. 2015ರಲ್ಲಿ ಈ ಮಿತಿಯನ್ನು ಎರಡು ಮಕ್ಕಳು ಮತ್ತು 2021ರಲ್ಲಿ ಮೂರು ಮಕ್ಕಳಿಗೆ ಏರಿಸಿತು. ಈ ನಿರ್ಬಂಧಗಳನ್ನು ಸಡಿಲಿಸಿ ಎಷ್ಟು ಬೇಕಾದರೂ ಹಡೆಯರಿ ಎಂದಿದೆ. ಆದರೂ ವಿವಾಹಗಳು ಮತ್ತು ಜನನ ದರಗಳ ಸತತ ಕುಸಿತವನ್ನು ತಡೆಯುವುದು ಸಾಧ್ಯವಾಗಿಲ್ಲ. ಪ್ರೌಢಾವಸ್ಥೆ ತಲುಪಿರುವ ಇಂದಿನ ಬಹುತೇಕ ಚೀನೀ ಯುವಜನರು ಆ ಕಾಲದಲ್ಲಿ ಜನಿಸಿದವರು. ಇಂದಿನ ಚೀನಾದಲ್ಲಿ ಮಗುವೊಂದನ್ನು ಹೆತ್ತು ಬೆಳೆಸುವುದು ಪ್ರಪಂಚದಲ್ಲೇ ಅತಿ ದುಬಾರಿಯ ಉಸಾಬರಿಯಂತೆ. ಹೀಗಾಗಿ ಯುವ ಜನರು ಸರ್ಕಾರ ಎಸೆಯುತ್ತಿರುವ ಗಾಳಗಳಿಗೆ ಬೀಳುತ್ತಿಲ್ಲ. ವಯಸ್ಸಾದ ತಮ್ಮ ತಂದೆ ತಾಯಿಗಳನ್ನು ಸಲಹುವುದು, ಏರುತ್ತಿರುವ ಶಿಕ್ಷಣವೆಚ್ಚ, ವಸತಿವೆಚ್ಚ ಹಾಗೂ ಆರೋಗ್ಯ ವೆಚ್ಚಗಳು ಅವರ ಸದ್ಯದ ಆತಂಕ. ಮಕ್ಕಳನ್ನು ಹೆತ್ತು ಬೆಳೆಸುವ ಹಣಕಾಸಿನ ಶಕ್ತಿ ಅವರಿಗಿಲ್ಲ. ಅದು ಸಾಧ್ಯವಾಗಲು ತಮ್ಮ ಮಾಸಿಕ ಆದಾಯವು ದುಪ್ಪಟ್ಟಾಗಬೇಕು ಎನ್ನುತ್ತಾರೆ. ಒಂದೇ ಮಗುವನ್ನು ಹೆರಬೇಕೆಂಬ ಬಿಗಿ ಕಾಯಿದೆಯು ಆ ಪೀಳಿಗೆಯ ಮೇಲೆ ಅತಿಯಾದ ಮಾನಸಿಕ ಭಾರ ಹೇರಿತು. ಭಾರೀ ದುಷ್ಪರಿಣಾಮವನ್ನೂ ಬೀರಿತು. ಚೀನೀ ಜನರನ್ನು ಮುಪ್ಪು ಇನ್ನೆಲ್ಲೂ ಇಲ್ಲದಂತೆ ಅತಿವೇಗದಿಂದ ಅಪ್ಪಿಕೊಳ್ಳತೊಡಗಿದೆ.

ಇತ್ತೀಚಿನ ವಿವಾಹಿತರ ದಾಖಲಾತಿಯ (61 ಲಕ್ಷ) ಅರ್ಧಕ್ಕರ್ಧದಷ್ಟು (26 ಲಕ್ಷ) ಜೋಡಿಗಳು ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡಿವೆ.
2024ರಲ್ಲಿ ದಾಖಲಾದ ವಿವಾಹಗಳ ಸಂಖ್ಯೆ 61 ಲಕ್ಷ ಮಾತ್ರ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.20ಕ್ಕೂ ಹೆಚ್ಚು ಕುಸಿತ ಕಂಡು ಬಂದಿದೆ. ಅದರ ಹಿಂದಿನ ವರ್ಷ 78 ಲಕ್ಷ ವಿವಾಹಗಳು ದಾಖಲಾಗಿದ್ದವು. 2019ರ ಕೋವಿಡ್ ನಂತರವೂ 2020ರಲ್ಲಿ ತಗ್ಗಿದ ವಿವಾಹ ದರ ಶೇ.12.2ಕ್ಕೆ ಸೀಮಿತವಾಗಿತ್ತು. 2013ರಲ್ಲಿ 1.34 ಕೋಟಿ ವಿವಾಹಗಳು ದಾಖಲಾಗಿದ್ದವು.

ಹೆಚ್ಚು ಮಕ್ಕಳನ್ನು ಹೆರುವಂತೆ ತನ್ನ ಪ್ರಜೆಗಳನ್ನು ಇನ್ನಿಲ್ಲದಂತೆ ಪ್ರೋತ್ಸಾಹಿಸುತ್ತಿದೆ. ಸಾಮೂಹಿಕ ಮದುವೆಗಳು, ಹಣಕಾಸು ಪ್ರೋತ್ಸಾಹ ಯೋಜನೆಗಳನ್ನು ಜಾರಿಗೊಳಿಸಿದೆ. ಬ್ಲೈಂಡ್ ಡೇಟಿಂಗ್ (ಪರಸ್ಪರ ಪರಿಚಯವೇ ಇಲ್ಲದ ವಧು-ವರರ ಸಮಾವೇಶಗಳು) ಏರ್ಪಡಿಸತೊಡಗಿದೆ. ಆದರೂ ಚೀನೀಯರು ವಿವಾಹವಾಗಲು ಮುಂದೆ ಬರುತ್ತಿಲ್ಲ. ಅಲ್ಲಿಯೂ ಆರ್ಥಿಕ ಅಭಿವೃದ್ಧಿಯ ಅನಿಶ್ಚಿತತೆಯಿಂದ ಹೊಸ ಉದ್ಯೋಗಾವಕಾಶಗಳು ದೊಡ್ಡ ಸಂಖ್ಯೆಯಲ್ಲಿ ಸೃಷ್ಟಿಯಾಗುತ್ತಿಲ್ಲ ಮತ್ತು ಇರುವ ಉದ್ಯೋಗಗಳು ಯಾವಾಗ ಇಲ್ಲವಾಗುತ್ತವೆಯೋ ಎಂಬ ಭೀತಿಯನ್ನು ಉದ್ಯೋಗಿಗಳು ಎದುರಿಸಿದ್ದಾರೆ. ಹೀಗಾಗಿಯೇ ವಿಶ್ವದ ಎರಡನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯೆನಿಸಿದ ಚೀನಾದ ಇತ್ತೀಚಿನ ಜನಸಂಖ್ಯೆ 141.07 ಕೋಟಿ.

ಚೀನಾ ಸರ್ಕಾರದ ಅತ್ಯುನ್ನತ ನೀತಿ ನಿರ್ಧಾರ ಸಮಿತಿಯೆಂದರೆ ಏಳು ಮಂದಿ ಸದಸ್ಯರ ಕಮ್ಯೂನಿಸ್ಟ್ ಪಾಲಿಟ್ ಬ್ಯೂರೋ ಸ್ಥಾಯೀ ಸಮಿತಿ. ದಶಕಗಳಿಂದ ಈ ಸಮಿತಿಯಲ್ಲಿ ಪುರುಷರೇ ತುಂಬಿದ್ದಾರೆ. ಪಾಲಿಟ್ ಬ್ಯೂರೋಗಿಂತ ಒಂದು ಸ್ತರ ಕೆಳಗಿರುವ ಮತ್ತೊಂದು ಸಮಿತಿಯ ಸದಸ್ಯರ ಸಂಖ್ಯೆ 20, ಆದರೆ ಈ ಸಮಿತಿಯಲ್ಲಿ ಒಬ್ಬ ಮಹಿಳೆಯೂ ಇಲ್ಲ.

ಹೆಚ್ಚು ಮಕ್ಕಳನ್ನು ಹಡೆಯಿರಿ ಎಂದು ಹೇಳುವ ಚೀನೀ ಸರ್ಕಾರದ ಕರೆಯು ಮಹಿಳೆಯರ ಕೋಪಕ್ಕೆ ಗುರಿಯಾಗಿದೆ. ಪುರುಷರೇ ತುಂಬಿರುವ ಈ ಸಮಿತಿಗಳ ಸದಸ್ಯರು ಹೆರಿಗೆ ನೋವೆಂದರೆ ಏನೆಂದು ತಿಳಿಯದು ಎಂಬುದು ಹೆಣ್ಣುಮಕ್ಕಳ ಆಕ್ರೋಶ. ತಜ್ಞರ ಪ್ರಕಾರ ನಗರಪ್ರದೇಶದ ಮಹಿಳೆಯರು ಹಳ್ಳಿಯ ಚೀನೀ ಪುರುಷರನ್ನು ಮದುವೆಯಾಗಲು ತಯಾರಿಲ್ಲ. ಹಳ್ಳಿಯ ಚೀನೀ ಪುರುಷರು ಹೆಣ್ಣು ಸಿಗದೆ ಅವಿವಾಹಿತರಾಗಿ ಉಳಿಯುತ್ತಿದ್ದಾರೆ. ಭಾರತದಲ್ಲಿ ವರದಕ್ಷಿಣೆಯ ಪಿಡುಗಿಗೆ ಹೋಲಿಸಲಾಗದಿದ್ದರೂ, ಚೀನಾದಲ್ಲಿ ವಧುದಕ್ಷಿಣೆ ಕಡಿಮೆಯೇನೂ ಇಲ್ಲ! ವಧುದಕ್ಷಿಣೆಯ ಜೊತೆಗೆ ಪುರುಷನಿಗೆ ಉದ್ಯೋಗ ಭದ್ರತೆಯೂ ಇರಬೇಕೆಂದು ಪಟ್ಟಣಪ್ರದೇಶದ ವಧುಗಳು ಬಯಸುತ್ತಾರೆ. ವಧುದಕ್ಷಿಣೆಯ ಪ್ರವೃತ್ತಿಯನ್ನು ನಿಯಂತ್ರಿಸುವ ಪ್ರಯತ್ನವೂ ಚೀನೀ ಸರ್ಕಾರದಿಂದ ಜರುಗಿದೆ.

ವಿವಾಹಗಳು ಮತ್ತು ಜನನಗಳ ಕುಸಿತ, ವೇಗವಾಗಿ ಕುಗ್ಗುತ್ತಿರುವ ಶ್ರಮಿಕರ. 60 ದಾಟಿರುವ ನಾಗರಿಕರ ಪ್ರಮಾಣ ಶೇ.22ಕ್ಕೆ ಹೆಚ್ಚತೊಡಗಿದೆ. 16 ವರ್ಷ ಮತ್ತು 59 ವರ್ಷದ ನಡುವಣ ಉತ್ಪಾದಕ ಶ್ರಮಿಕರ ವಯೋಮಾನವರ ಪ್ರಮಾಣ 68.30 ಲಕ್ಷದಷ್ಟು ಕುಸಿದಿದೆ. ಈ ಬೆಳವಣಿಗೆಗಳ ಜೊತೆ ಜೊತೆಗೆ ಮಂದಗೊಳ್ಳುತ್ತಿರುವ ಅರ್ಥವ್ಯವಸ್ಥೆ ಚೀನೀ ಸರ್ಕಾರವನ್ನು ತೀವ್ರ ಚಿಂತೆಗೆ ಈಡು ಮಾಡಿದೆ.

ದೈನಂದಿನ ಬದುಕು ದಟ್ಟ ದಣಿವಿನಿಂದ ತುಂಬಿ ಹೋಗಿದೆ. ಮದುವೆಯಾಗಲು ಧೈರ್ಯವೆಲ್ಲಿಂದ ಬಂದೀತು ಎಂಬುದು ಚೀನಾದ ಸಾಮಾಜಿಕ ಅಂತರ್ಜಾಲ ತಾಣ ‘ವೀಬೋ’ ಮೇಲಿನ ಅತ್ಯಧಿಕ ಲೈಕುಗಳನ್ನು ಪಡೆದಿರುವ ಕಮೆಂಟು. ವಿವಾಹಿತರು ಮಕ್ಕಳು ಮಾಡಿಕೊಳ್ಳುವುದನ್ನು ಮುಂದೂಡುತ್ತಿದ್ದಾರೆ. ಅವಿವಾಹಿತರು ವಿವಾಹದ ಆಲೋಚನೆಯನ್ನೇ ಕೈ ಬಿಡತೊಡಗಿದ್ದಾರೆ. ಹೆಚ್ಚು ಶಿಕ್ಷಿತರೂ, ಆರ್ಥಿಕವಾಗಿ ಸ್ವಾವಲಂಬಿಗಳೂ ಆಗುತ್ತಿರುವ ಬಹುತೇಕ ಚೀನೀ ಯುವತಿಯರು ವಿವಾಹ ಬಂಧನವನ್ನು ಬಯಸುತ್ತಿಲ್ಲ. ಮಗುವಿನ ಲಾಲನೆ ಪಾಲನೆ- ಮನೆಗೆಲಸ ಮಹಿಳೆಯದೇ ಎಂಬ ಗಂಡಾಳಿಕೆಯ ಭೇದ-ಭಾವದ ಸಂಪ್ರದಾಯಗಳು ಮಹಿಳೆಯರನ್ನು ವಿವಾಹ ಕುರಿತು ಭ್ರಮನಿರಸನಗೊಳಿಸಿವೆ.

ಕುಸಿಯುತ್ತಿರುವ ಜನಸಂಖ್ಯೆಯ ಇದೇ ಗಹನ ಸಮಸ್ಯೆಯನ್ನು ಜಪಾನ್, ರಷ್ಯಾ ಹಾಗೂ ಸ್ವೀಡನ್ ದೇಶಗಳೂ ಎದುರಿಸಿವೆ. ಮಕ್ಕಳ ಹಡೆಯಲು ಸಹಾಯಧನ ನೀಡುವ ಕ್ರಮಗಳು ಅಲ್ಲಿಯೂ ಫಲ ನೀಡಿಲ್ಲ. ಕೋವಿಡ್ ನಂತರ ಕಾಡಿರುವ ನಿರುದ್ಯೋಗವೂ ಯುವಜನರ ಈ ಸಿನಿಕತೆಗೆ ಕಾರಣವಾಗಿದೆ. ಮಕ್ಕಳನ್ನು ಹೆರಲು ನಿರಾಕರಿಸುತ್ತಿರುವ ಈ ಪ್ರತಿಕ್ರಿಯೆಯನ್ನು ಸರ್ಕಾರದ ವಿರುದ್ಧ ಪ್ರಕಟವಾಗುತ್ತಿರುವ ರಾಜಕೀಯ ಪ್ರತಿರೋಧ ಎಂದೂ ವ್ಯಾಖ್ಯಾನ ಮಾಡಲಾಗುತ್ತಿದೆ. ಚೀನಾಕ್ಕೆ ಹೋಲಿಸಿದರೆ ಭಾರತದ ಜನಸಂಖ್ಯೆ ಆರು ಕೋಟಿಯಷ್ಟು ಹೆಚ್ಚು. ಈ ಶತಮಾನದ ಉಳಿದ ಭಾಗದ ಉದ್ದಕ್ಕೂ ಭಾರತದ ಜನಸಂಖೆಯ ಕುಸಿಯುವ ಸಾಧ್ಯತೆಯಿಲ್ಲ ಎನ್ನುತ್ತಾರೆ ಜನಸಂಖ್ಯಾ ಶಾಸ್ತ್ರಜ್ಞರು.

ಚೀನಾಕ್ಕೆ ತದ್ವಿರುದ್ಧವಾಗಿ ಭಾರತ ತನ್ನಲ್ಲಿನ ಜನನ ದರ ಪ್ರಮಾಣವನ್ನು ತಗ್ಗಿಸಬೇಕಿದೆ. ಅದಕ್ಕಾಗಿ ಶಿಕ್ಷಣ, ಆರೋಗ್ಯ ಸೌಲಭ್ಯಗಳ ಹೆಚ್ಚಳ ಮತ್ತು ಮಹಿಳೆಯ ಸಬಲೀಕರಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಹಿಳೆಯರಿಗೆ ಹೆಚ್ಚು ಹೆಚ್ಚು ಆರ್ಥಿಕ ಅವಕಾಶಗಳನ್ನು ಒದಗಿಸಬೇಕಿದೆ. ಭಾರತದಲ್ಲಿ 60 ವರ್ಷ ವಯಸ್ಸು ದಾಟಿದವರ ಪ್ರಮಾಣ 2041ರ ಹೊತ್ತಿಗೆ ಶೇ.16ರಷ್ಟಾಗುವುದೆಂದು ಅಧ್ಯಯನಗಳು ಹೇಳುತ್ತವೆ. ಅದೇ ರೀತಿ ದುಡಿಯುವ ವಯೋಮಾನದವರ (20-59) ಪ್ರಮಾಣ ಶೇ.59ರಷ್ಟನ್ನು ಮುಟ್ಟಲಿದೆ. ಆರೋಗ್ಯ ಸೌಲಭ್ಯಗಳು ಇಂದಿನ ಕಳಪೆ ರೀತಿಯಲ್ಲೇ ಮುಂದುವರೆದರೆ ಭಾರತದ ಜನಸಂಖ್ಯಾ ಹೆಚ್ಚಳ ದರಗಳು ತೀವ್ರವಾಗಿ ಕುಸಿಯಲಿವೆ. ದೇಶದಲ್ಲಿ ಹಾಲಿ ಸಾವಿರ ಜನಸಂಖ್ಯೆಗೆ ಶೇ.1.3ರಷ್ಟು ಅನುಪಾತದ ಆಸ್ಪತ್ರೆ ಹಾಸಿಗೆ ಸೌಲಭ್ಯವಿದೆ. ಮುಂದಿನ 15 ವರ್ಷಗಳಲ್ಲಿ 22 ಲಕ್ಷ ಹಾಸಿಗೆಗಳ ಆರೋಗ್ಯ ಸೌಲಭ್ಯವನ್ನು ಸೃಷ್ಟಿಸಬೇಕಾಗುತ್ತದೆ ಎಂಬುದು ತಜ್ಞರ ಅಭಿಮತ.

ಇದನ್ನೂ ಓದಿ ‘ಆಮ್ ಆದ್ಮಿʼ ಆಗಿ ಉಳಿಯದೆ ಸೋತ ಕೇಜ್ರೀವಾಲ್ ಪಕ್ಷಕ್ಕೆ ಈಗ ಉಳಿವು ಅಳಿವಿನ ಪ್ರಶ್ನೆ

Advertisements
ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X