ಮಂಗಳೂರು ನಗರದ ಹೊರವಲಯದ ಫಲ್ಗುಣಿ ನದಿಗೆ ಕೈಗಾರಿಕಾ ತ್ಯಾಜ್ಯ ಬಿಡುಗಡೆಯಾಗುವುದನ್ನು ತಡೆಯಲು ವಿಫಲವಾದ ಮಂಗಳೂರು ಮಹಾನಗರಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಕರ್ನಾಟಕ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಜೂನ್ 4ರಂದು ಸುದ್ದು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳನ್ನು ಆಧಾರಿಸಿ ಲೋಕಾಯುಕ್ತ ಕಾಯಿದೆಯ ಸೆಕ್ಷನ್ 7(2) ಮತ್ತು 9(3-ಎ) ಅಡಿಯಲ್ಲಿ ಪ್ರಕರಣ ಕೈಗೆತ್ತಿಕೊಂಡಿರುವ ಉಪ ಲೋಕಾಯುಕ್ತ ಕೆ ಎನ್ ಫಣೀಂದ್ರ ಅವರು, ಮುಂದಿನ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಪಾಲಿಕೆ ಉಪಾಯುಕ್ತ (ಆಡಳಿತ), ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಹಾಗೂ ಕೆಐಎಡಿಬಿ ಕಾರ್ಯಕಾರಿ ಅಭಿಯಂತರರಿಗೆ ಸೂಚನೆ ನೀಡಿದ್ದಾರೆ.
ಆದೇಶ ದೊರೆತ 15 ದಿನಗಳ ಒಳಗೆ ವಿವರವಾದ ವರದಿ ಸಲ್ಲಿಸುವಂತೆಯೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಉಪ ಲೋಕಾಯುಕ್ತರು ಸೂಚಿಸಿದ್ದಾರೆ.

ಒಳಚರಂಡಿಗಳ ಮೂಲಕ ನದಿಗೆ ತ್ಯಾಜ್ಯ ಬಿಡುಗಡೆಯಾಗುತ್ತಿರುವುದು ಜಲಚರಗಳಿಗೆ ಮಾತ್ರವಲ್ಲ ಆ ನೀರನ್ನು ಬಳಸುವ ಮನುಷ್ಯರಿಗೆ, ಪ್ರಾಣಿಗಳಿಗೂ ಹಾನಿಕರವಾಗಿದೆ ಎಂದು ಸುದ್ದಿ ಮಾಧ್ಯಮ ವರದಿಗಳನ್ನು ಉಪಲೋಕಾಯುಕ್ತರು ಉಲ್ಲೇಖಿಸಿದ್ದಾರೆ.
ಪಣಂಬೂರು ಮತ್ತು ಬೈಕಂಪಾಡಿ ಪರಿಸರದಲ್ಲಿ ಕಾರ್ಯಾಚರಣೆ ನಡೆಸುವ ಹಲವು ಕೈಗಾರಿಕೆಗಳು ತ್ಯಾಜ್ಯ ಸಂಸ್ಕರಣೆ ನಡೆಸದೆ ನೇರವಾಗಿ ನದಿಗೆ ಬಿಡುಗಡೆಗೊಳಿಸುತ್ತಿವೆ. ಇದರಿಂದಾಗಿ ಸುತ್ತಮುತ್ತಲಿನ ಹಲವು ಬಾವಿ ನೀರು ಕಲುಷಿತಗೊಂಡಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಕೊಂಬಿಗೆ ಬಲೆ ಸಿಲುಕಿಕೊಂಡು ಜಿಂಕೆ ನರಳಾಟ
ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ಮಾಲೀಕತ್ವದ ಪತಂಜಲಿ ಫುಡ್ಸ್ (ರುಚಿ ಸೋಯಾ) ತುಳುನಾಡಿನ ಜೀವನದಿ ಫಲ್ಗುಣಿಗೆ ಮಾರಕ ಕೈಗಾರಿಕಾ ತ್ಯಾಜ್ಯ ಹರಿಸುವ ಕೊಳವೆಗಳು ಪತ್ತೆಯಾದ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳು ಹಾಗೂ ಎಡಪಕ್ಷಗಳ ಜಂಟಿ ನಿಯೋಗ ಬುಧವಾರ ಭೇಟಿ ನೀಡಿ ಆಗಿರುವ ಹಾನಿ ವೀಕ್ಷಿಸಿ. ಕಾನೂನು ಕ್ರಮಕ್ಕೆ ಆಗ್ರಹಿಸಿತ್ತು.