ಧಾರವಾಡ ಬೈಪಾಸ್‌ನಲ್ಲಿ ಭಾನುವಾರ ಬೆಳಗಿನ ಜಾವ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ.
ರಾಷ್ಟ್ರೀಯ ಹೆದ್ದಾರಿ 4 ರ ಹಳಿಯಾಳ ಸೇತುವೆ ಬಳಿ ಕ್ಯಾರಕೊಪ್ಪದ ಸಮೀಪ ಈ ಅವಘಡ ಸಂಭವಿಸಿದ್ದು, ವೇಗವಾಗಿ ಹೋಗುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಬೆಳಗಾವಿ ಕಡೆಯಿಂದ ಹೋಗುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮೃತರೆಲ್ಲರೂ ಅರಸೀಕೆರೆ ಚನ್ನರಾಯಪಟ್ಟಣದವರು ಎನ್ನಲಾಗಿದೆ.
ಮೈಸೂರು ಜಿಲ್ಲೆ ಕೆ ಆರ್ ನಗರದ ಪುಟ್ಟೇಗೌಡ (33), ಹಾಸನ ಜಿಲ್ಲೆ ಹೊಳೆನರಸಿಪುರದ ದೀಪಕ್ (24) ಹಾಗೂ ಹೊಳೆನರಸಿಪುರದ ಚಂದನಗೌಡ (22) ಮೃತರು. ಗಾಯಗೊಂಡ ಇನ್ನೊಬ್ಬನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಫಲ್ಗುಣಿ ನದಿಗೆ ತ್ಯಾಜ್ಯ; ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯುಕ್ತ