ಹೆಣ್ಣು ಮಕ್ಕಳ ವಿಚಾರದಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ನಟ ಚಿರಂಜೀವಿ ಹೊಂದಿರುವ ಧೋರಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಹೆಣ್ಣು ಮಕ್ಕಳನ್ನು ಚಿರಂಜೀವಿ ಈಗಲೂ ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಿದ್ದಾರೆ ಎಂದು ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.
ಇತ್ತೀಚೆಗೆ, ಚಿರಂಜೀವಿ ನೀಡಿರುವ ಹೇಳಿಕೆಯು ಆಕ್ರೋಶ-ಟೀಕೆಗೆ ಗುರಿಯಾಗಿದೆ. ‘ಬ್ರಹ್ಮಾಆನಂದಂ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಿರಂಜೀವಿ, ತಮ್ಮ ಮಗ, ರಾಮ್‌ಚರಣ್‌ಗೆ ಎರಡನೇ ಮಗುವಾದರೂ ಗಂಡು ಮಗು ಆಗಬೇಕು. ಆ ಮಗುವಿನಿಂದ ನಮ್ಮ ಲೆಗಸಿ ಮುಂದುವರೆಯಬೇಕು” ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಚಿರಂಜೀವಿ, “ನಾನು ಮನೆಯಲ್ಲಿ ಮೊಮ್ಮಕ್ಕಳ ಜೊತೆ ಇದ್ದಾಗ, ಲೇಡಿಸ್ ಹಾಸ್ಟೆಲ್‌ನ ವಾರ್ಡನ್ ಆಗಿದ್ದೀನೇನೋ ಎಂಬಂತೆ ಭಾಸವಾಗುತ್ತದೆ. ಸುತ್ತಲೂ ಹೆಣ್ಣುಮಕ್ಕಳೇ ಇರುತ್ತಾರೆ. ಚರಣ್ ಈ ಬಾರಿ ಒಂದು ಗಂಡು ಮಗು ಬೇಕು ಕಣೋ. ನಮ್ಮ ಲೆಗಸಿ ಮುಂದುವರೆಯಬೇಕು ಎಂಬುದು ನನ್ನ ಕೋರಿಕೆ. ಆದರೆ, ಚರಣ್‌ಗೆ ಮತ್ತೊಂದು ಹೆಣ್ಣು ಮಗು ಆಗುತ್ತದೆಯಾ ಎಂಬ ಭಯವಿದೆ” ಎಂದು ಹೇಳಿದ್ದರು.
ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಬ್ಬ ಸ್ಟಾರ್ ನಟ ಹೆಣ್ಣು ಮಕ್ಕಳ ಬಗ್ಗೆ ಎಂಥಹ ಧೋರಣೆ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಹೆಣ್ಣು ಮಕ್ಕಳಿದ್ದರೆ ಅವರ ಲೆಗಸಿ ಮುಂದುವರೆಯುವುದಿಲ್ಲವೇ. ಅವರ ವಂಶವನ್ನು ಮುಂದುವರೆಸಲು ಗಂಡೇ ಆಗಬೇಕೇ? ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವವರು, ತಮ್ಮನ್ನ ಫಾಲೋ ಮಾಡುವವರಿಗೆ ಮಾದರಿಯಾಗಿ ಇರಬೇಕಿರುವವರು ಗಂಡು-ಹೆಣ್ಣು ಎಂಬ ಭೇದ ಹೊಂದಿದ್ದರೆ, ಅವರು ಯಾವ ರೀತಿಯ ಮಾದರಿಯಾಗಬಲ್ಲರು.ಸಮಾಜಕ್ಕೆ ಎಂಥಹ ಸಂದೇಶ ನೀಡುವರು ಎಂದು ಟೀಕೆಗಳು ವ್ಯಕ್ತವಾಗಿವೆ.
ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸಾಧನೆ ಮಾಡುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಗಂಡಿಗೆ ಸಮಾನಳಾಗಿ ಗುರುತಿಸಿಕೊಂಡಿದ್ದಾರೆ. ಆದರೂ, ಸ್ಟಾರ್ ನಟನೊಬ್ಬ ಗಂಡು ಅಹಮ್ಮಿಕೆಗೆ ಬಲಿಯಾಗಿರುವುದು ವಿಷಾಧನೀಯ ಎಂದು ಹಲವರು ಆಕ್ರೋಶ ವ್ಯಕ್ತಪಡಿದ್ದಾರೆ.
ಅಂದಹಾಗೆ, ಚಿರಂಜೀವಿ ಅವರ ಪುತ್ರ ರಾಮ್‌ಚರಣ್ ಮತ್ತು ಉಪಾಸನಾ ದಂಪತಿಗೆ ಹೆಣ್ಣು ಮಗುವಿದ್ದು, ಆಕೆಗೆ ಕ್ಲಿಂಕಾರ ಎಂದು ಹೆಸರಿಟ್ಟಿದ್ದಾರೆ.