ಕೇವಲ ಸಾಂಪ್ರದಾಯಿಕ ಬೆಳೆಗಳ ಮೇಲೆ ಅವಲಂಬಿತರಾದರೆ ಕೃಷಿಯಲ್ಲಿ ಅಧಿಕ ಆದಾಯ ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಯಶ ಕಾಣಬಹುದು. ನರೇಗಾ ಯೋಜನೆಯ ಲಾಭ ಪಡೆದು ಗುಲಾಬಿ ಹೂವು ಕೃಷಿಯಿಂದ ನಿರಂತರ ಆದಾಯ ಪಡೆಯುತ್ತಿರುವ ಯುವ ರೈತರೊಬ್ಬರ ಯಶೋಗಾಥೆ!
ಭಾಲ್ಕಿ ತಾಲ್ಲೂಕಿನ ಡೋಣಗಾಪುರ ಗ್ರಾಮದ ರೈತರೊಬ್ಬರು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ನರೇಗಾ) ಸಮಪರ್ಕವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಡೋಣಗಾಪುರ ಗ್ರಾಮದ ಜಗದೀಶ ಹೂಗಾರ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಡಚ್ ತಳಿಯ ಗುಲಾಬಿ ಬೆಳೆದು ನಿರಂತರವಾಗಿ ಆದಾಯ ಕಂಡುಕೊಳ್ಳುವ ಮೂಲಕ ಇತರೆ ರೈತರಿಗೂ ಮಾದರಿಯಾಗಿದ್ದಾರೆ. ಇದರಿಂದ ಆರ್ಥಿಕವಾಗಿ ಸಬಲರಾಗಿ ಸಂತೃಪ್ತಿ ಬದುಕು ನಡೆಸುತ್ತಿದ್ದಾರೆ.

ರೈತ ಜಗದೀಶ ಹೂಗಾರ ಅವರಿಗೆ ಒಟ್ಟು 12 ಎಕರೆ ಜಮೀನು ಇದೆ. ಎರಡು ಎಕರೆಯಲ್ಲಿ ಆಲೂಗಡ್ಡೆ ಹಾಗೂ ನಿಂಬೆ ಬೆಳೆಯುತ್ತಾರೆ. ಉಳಿದ ಜಮೀನಿನಲ್ಲಿ ಸಾಂಪ್ರದಾಯಿಕ ಬೆಳೆಗಳಾದ ತೊಗರಿ, ಸೋಯಾಬಿನ್, ಜೋಳ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದರು. ಅದೇ ಜಮೀನಿನಲ್ಲಿ ಮೂರು ಕೊಳವೆ ಬಾವಿಯಲ್ಲಿರುವ ನೀರು ಸದ್ಬಳಕೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಬರಡು ಭೂಮಿಯಾಗಿದ್ದ ಒಂದು ಎಕರೆ ಪ್ರದೇಶವನ್ನು ಹದಗೊಳಿಸಿ ಗುಲಾಬಿ ಹೂವು ಬೆಳೆಯಲು ಮುಂದಾದರು.
ಕೈ ಹಿಡಿದ ಮನರೇಗಾ :
ನರೇಗಾ ಯೋಜನೆಯಡಿ ಹೂವು, ಹಣ್ಣು, ತರಕಾರಿ ಬೆಳೆಯಲು ಗ್ರಾಮ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಸಹಾಯಧನ ನೀಡುತ್ತದೆ ಎಂಬುದನ್ನರಿತ ರೈತ, ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಈ ಯೋಜನೆಯ ಲಾಭ ಪಡೆದು ಸಾವಯವ ಕೃಷಿಯತ್ತ ಮುಖ ಮಾಡಬೇಕೆಂದು 2023ರಲ್ಲಿ ನರೇಗಾ ಯೋಜನೆಯ ನೆರವಿನಿಂದ 1 ಎಕರೆ ಜಮೀನಿನಲ್ಲಿ ಗಿಡದಿಂದ ಗಿಡಕ್ಕೆ 5 ಅಡಿ ಅಂತರದಲ್ಲಿ ಒಟ್ಟು 1,500 ಡಚ್ ತಳಿಯ ಸಸಿಗಳನ್ನು ನಾಟಿ ಮಾಡಿದ್ದಾರೆ.
ಮಹಾರಾಷ್ಟ್ರದ ಪುಣೆಯಿಂದ ಡಚ್ ತಳಿಯ ₹30 ಒಂದರಂತೆ ಒಟ್ಟು 1,500 ಸಸಿ ಖರೀದಿಸಿ ತಂದಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಕೊಟ್ಟಿಗೆ ಗೊಬ್ಬರ ಸೇರಿದಂತೆ ರಾಸಾಯನಿಕ ಗೊಬ್ಬರವೂ ಬಳಸಿದ್ದಾರೆ. ನಾಟಿ ಮಾಡಿದ 45 ದಿನ ಬಳಿಕ ಇಳುವರಿ ಬರಲು ಆರಂಭವಾಗಿದೆ.

ತಿಂಗಳಿಗೆ ₹50 ಸಾವಿರ ಆದಾಯ :
ಹುಲುಸಾಗಿ ಬೆಳೆದ ಹೂವಿನ ತೋಟವನ್ನು ಜತನದಿಂದ ನೋಡುತ್ತಿದ್ದಾರೆ. ಕೆಂಗುಲಾಬಿ ತೋಟವು ಡೋಣಗಾಪುರ-ಭಾಲ್ಕಿ ರಸ್ತೆಯಲ್ಲಿದ್ದು, ವಾಹನ ಸವಾರರು, ಪಾದಚಾರಿಗಳಿಗೆ ತನ್ನತ್ತ ಸೆಳೆಯುತ್ತಿದೆ. ತೋಟಕ್ಕೆ ಕಾಲಿಟ್ಟರೆ ಸಾಕು, ಹೂವುಗಳು ಸ್ವಾಗತಿಸುತ್ತಿವೆ, ಅವುಗಳನ್ನು ನೋಡುವುದೇ ಒಂದು ಚೆಂದವಾಗಿದೆ. ಕೆಲವರು ಹೂವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಔಷಧಿ ಸಿಂಪಡಣೆ, ಕಟಾವು ಸೇರಿದಂತೆ ಇನ್ನಿತರ ಸೇರಿ ಮೊದಲಿಗೆ ₹60 ಸಾವಿರ ಖರ್ಚು ಮಾಡಲಾಗಿದೆ. ಆಗಾಗ ಕಾಡುವ ಕೀಟಬಾಧೆಯಿಂದ ಸಸಿಗಳು ಸಂರಕ್ಷಿಸಲು ಔಷಧ ಸಿಂಪಡಣೆ ಬಿಟ್ಟರೆ ಹೆಚ್ಚಿನ ಖರ್ಚುಗಳಿಲ್ಲ. ಪ್ರತಿ ದಿನ 10-15 ಕೆ.ಜಿ. ಹೂವು ಕಟಾವು ಮಾಡುತ್ತಿದ್ದು, ಭಾಲ್ಕಿ, ಬಸವಕಲ್ಯಾಣದಲ್ಲಿ ಮಾರಾಟ ಮಾಡುತ್ತೇನೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹100 ದರ ಇದೆ. ಕಟಾವು, ಸಾಗಾಟ ಎಲ್ಲ ಖರ್ಚು ಕಳೆದು ನಿರಂತರವಾಗಿ ತಿಂಗಳಿಗೆ ₹50 ಸಾವಿರ ಆದಾಯ ಪಡೆಯುತ್ತಿದ್ದೇನೆʼ ಎಂದು ರೈತ ಜಗದೀಶ ಹೂಗಾರ ಹೇಳುತ್ತಾರೆ.
ದಸರಾ, ದೀಪಾವಳಿ ಹಾಗೂ ಮೊಹರಂ ಹಬ್ಬದ ವೇಳೆ ಹೂವಿಗೆ ಅಧಿಕ ಬೇಡಿಕೆಯಿತ್ತು. ಪ್ರತಿ ಕೆ.ಜಿ.ಗೆ ₹300 ನಂತೆ ಹೂವುಗಳನ್ನು ಮಾರಾಟ ಮಾಡಲಾಗಿತ್ತು. ಕನಿಷ್ಠ ಕೆ.ಜಿ.ಗೆ ₹200 ರಷ್ಟು ಬೆಲೆ ಇರಬೇಕು ಎಂಬುದು ರೈತ ಜಗದೀಶ ಅವರ ಅನುಭವದ ಮಾತು.
ನರೇಗಾ ವೈಯಕ್ತಿಕ ಫಲಾನುಭವಿ ಪ್ರಶಂಸಾ ಪತ್ರ :
ಡೋಣಗಾಪುರ ಗ್ರಾಮ ಪಂಚಾಯತಿ ಹಾಗೂ ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ನರೇಗಾ ಒಗ್ಗೂಡುವಿಕೆ ಸೌಲಭ್ಯ ಪಡೆದು ಉತ್ತಮವಾಗಿ ಒಂದು ಎಕರೆ ಗುಲಾಬಿ ಹೂವು ಬೆಳದಿದ್ದಕ್ಕಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ನರೇಗಾ ಹಬ್ಬ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ರೈತ ಜಗದೀಶ ಹೂಗಾರ್ ಅವರಿಗೆ ನರೇಗಾ ವೈಯಕ್ತಿಕ ಫಲಾನುಭವಿ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

ʼಬರಡು ಭೂಮಿಯಲ್ಲಿ ಸಹ ಗುಲಾಬಿ ಬೇಸಾಯ ಮಾಡಬಹುದು. ಈ ಹಿಂದೆ ತೊಗರಿ, ಸೋಯಾ, ಜೋಳ ಬೆಳೆಯುತ್ತಿದ್ದೆ. ಹೂವು ಕೃಷಿ ಮಾಡುವ ಆಸಕ್ತಿಯಿಂದ ಒಂದೂವರೆ ವರ್ಷದ ಮೊದಲು ಮೊದಲ ಬಾರಿಗೆ ಸಸಿ ನಾಟಿ ಮಾಡಲಾಗಿದೆ. ನಿರೀಕ್ಷೆಗಿಂತ ಹೆಚ್ಚಿನ ಆದಾಯ ಬರುತ್ತಿದೆ, ಮುಂದಿನ ವರ್ಷ ಬೇರೆ ಬಣ್ಣದ ಗುಲಾಬಿ ಹೂವು ಬೆಳೆಯಬೇಕೆಂದು ನಿರ್ಧರಿಸಿದ್ದೇವೆʼ ಎಂದು ರೈತ ಜಗದೀಶ ಹೂಗಾರ ಈದಿನ.ಕಾಮ್ ಜೊತೆ ಖುಷಿ ಹಂಚಿಕೊಂಡರು.
ಈ ಸುದ್ದಿ ಓದಿದ್ದೀರಾ? ಬೀದರ್ ವಿಶ್ವವಿದ್ಯಾಲಯ ಎಡವಟ್ಟು : ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ತಪ್ಪುಗಳ ಸರಮಾಲೆ
‘ರೈತರು ಒಂದೇ ಬೆಳೆ ಬೆಳೆದು ನಷ್ಟ ಅನುಭವಿಸುವ ಬದಲು ತೋಟಗಾರಿಕೆ ಬೆಳೆಗಳಿಗೆ ನರೇಗಾದಡಿ ಸಹಾಯಧನ ಪಡೆದು ಮಿಶ್ರ ಕೃಷಿ ಮಾಡಬೇಕು. ಇದರಿಂದ ಆರ್ಥಿಕವಾಗಿ ಸದೃಢವಾಗಲು ಅನೂಕೂಲವಾಗಲಿದೆ. ಭಾಲ್ಕಿ ತಾಲ್ಲೂಕಿನ 40 ಗ್ರಾಪಂಗಳ ಕೆಲ ರೈತರು ನರೇಗಾ ಯೋಜನೆಯ ಲಾಭ ಪಡೆದುಕೊಂಡು ಉತ್ತಮ ಆದಾಯ ಗಳಿಸಬಹುದು’ ಎಂದು ಭಾಲ್ಕಿ ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಾರುತಿ ಅವರು ಹೇಳುತ್ತಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
👌👌👌👌🌹