ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ, ಮಾಜಿ ಸಂಸದ ಅಭಿಜಿತ್ ಮುಖರ್ಜಿ ಅವರು ಸುಮಾರು ನಾಲ್ಕು ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಭಿಜಿತ್ ನಾಲ್ಕು ವರ್ಷಗಳ ಹಿಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರ್ಪಡೆಗೊಂಡಿದ್ದರು.
65 ವರ್ಷದ ಅಭಿಜಿತ್ ಮುಖರ್ಜಿ ಅವರು, ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ಗುಲಾಬ್ ಅಹಮದ್ ಮೀರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಇದನ್ನು ಓದಿದ್ದೀರಾ? ಭಾರತವೆಂಬ ಮಹಾನ್ ಮಾರುಕಟ್ಟೆಯ ಹೆಬ್ಬಾಗಿಲುಗಳನ್ನು ವಿದೇಶೀ ಕಂಪನಿಗಳಿಗೆ ಹಾರು ಹೊಡೆದು ತೆರೆಯಲಿಲ್ಲವೇ ಮನಮೋಹನ್ ಸಿಂಗ್?
ಇಂಜಿನಿಯರಿಂಗ್ ಪದವಿ ಪಡೆದಿರುವ ಅಭಿಜಿತ್ ರಾಜಕೀಯಕ್ಕೆ ಎಂಟ್ರಿ ನೀಡುವ ಮುನ್ನ ಹಲವು ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಭಿಜಿತ್ ತಂದೆ ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾದ ಬಳಿಕ 2012ರಲ್ಲಿ ಅಭಿಜಿತ್ ಪಶ್ಚಿಮ ಬಂಗಾಳದ ಜಂಗೀಪುರ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
2014ರಲ್ಲಿ ಅಭಿಜಿತ್ ಮತ್ತೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದರಾದರು. ಆದರೆ 2019ರಲ್ಲಿ ಟಿಎಂಸಿ ಅಭ್ಯರ್ಥಿ ಖಲಿಲೂರು ರಹಮಾನ್ ಎದುರು ಪರಾಭವಗೊಂಡರು. 2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಭರ್ಜರಿ ಜಯಗಳಿಸಿದ ಬಳಿಕ ಅಭಿಜಿತ್ ಟಿಎಂಸಿ ಸೇರ್ಪಡೆಗೊಂಡರು. ಕಾಂಗ್ರೆಸ್ ತನಗೆ ಸದಸ್ಯತ್ವ ಹೊರಡುಪಡಿಸಿ ಯಾವುದೇ ಸ್ಥಾನವನ್ನು ನೀಡಿಲ್ಲ ಎಂದು ಆರೋಪಿಸಿದ್ದರು. ಟಿಎಂಸಿ ಸೇರಿದ ಬಳಿಕ ಅಭಿಜಿತ್ ರಾಜಕೀಯದಲ್ಲಿ ಸಕ್ರಿಯರಾಗಿರಲಿಲ್ಲ. ಇದೀಗ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಸೇರಿದ್ದಾರೆ.
2012ರಲ್ಲಿ ದೆಹಲಿ ಸಾಮೂಹಿಕ ಅತ್ಯಾಚಾರದ ಬಗ್ಗೆ ಅಭಿಜಿತ್ ಮುಖರ್ಜಿ ನೀಡಿದ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿತ್ತು. “ದೆಹಲಿ ಅತ್ಯಾಚಾರದ ವಿರುದ್ಧವಾಗಿ ಮೇಣದಬತ್ತಿ ಪ್ರತಿಭಟನೆಯಲ್ಲಿ ಭಾಗಿಯಾಗುವ ಮಹಿಳೆಯರಿಗೆ ಏನು ನಡೆದಿದೆ ಎಂಬುದು ಕೂಡಾ ತಿಳಿದಿಲ್ಲ. ಪ್ರತಿಭಟನೆಗೆ ಬರುವ ಆ ಸುಂದರ ಮಹಿಳೆಯರು ಈ ಹಿಂದೆ ತಮ್ಮ ತಪ್ಪಿನಿಂದಾಗಿ ಲೈಂಗಿಕ ಅತ್ಯಾಚಾರಕ್ಕೆ ಒಳಗಾದವರು ಮತ್ತು ಉತ್ತಮ ಜೀವನಶೈಲಿ ಹೊಂದಿರುವವರು (highly dented and painted)” ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಬಳಿಕ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರು.
