ಕರ್ತವ್ಯ ನಿರತ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ನಿಂದಿಸಿ, ಬೆದರಿಕೆ ಹಾಕಿದ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಅವರ ಮಗ ಬಿ.ಎಸ್ ಬಸವೇಶ್ವರನನ್ನು ಬಂಧಿಸಬೇಕು ಹಾಗೂ ಶಾಸಕ ಸಂಗಮೇಶ್ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಫೆ.14 ರಂದು ಜೆಡಿಎಸ್ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮರಳು ಅವ್ಯವಹಾರದಲ್ಲಿ ತೊಡಗಿದ್ದೂ ಅಲ್ಲದೆ, ಮಹಿಳಾ ಅಧಿಕಾರಿಯನ್ನು ನಿಂದಿಸಿರುವ ಮೂವರನ್ನ ಬಂಧಿಸಲಾಗಿದೆ. ಇವರನ್ನ ಬಿಟ್ಟು ನಿಜವಾದ ಆರೋಪಿ ಬಸವೇಶ್ವರನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವಿದ್ಯಾರ್ಥಿ ಸಾವು
ಭದ್ರಾವತಿಯಲ್ಲಿ ಘಟನೆಗೆ ಕಾರಣ ಯಾರು ಕಾರಣಕರ್ತರಾದವರನ್ನು ಬಿಟ್ಟು ನಾಮ ಮಾತ್ರಕ್ಕೆ ಇನ್ಯಾರನ್ನೋ ಬಂಧಿಸಲಾಗಿದೆ. ಪೊಲೀಸ್ ಇಲಾಖೆ ಈ ರೀತಿ ನಡೆದುಕೊಳ್ಳುತ್ತಿರುವುದನ್ನು ಜೆಡಿಎಸ್ ಉಗ್ರವಾಗಿ ಖಂಡಿಸುತ್ತದೆ. ಅಲ್ಲದೆ ಇಲಾಖೆ ಪ್ರಾಮಾಣಿಕವಾಗಿ ಕರ್ತವ್ಯದಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಶಾಸಕರ ಮಕ್ಕಳು ಎಂದ ಮಾತ್ರಕ್ಕೆ ಅತಿರೇಕದ ವರ್ತನೆ ಸರಿಯಲ್ಲ. ಘಟನೆ ಕುರಿತು ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
