ತುಳಿತಕ್ಕೆ ಒಳಗಾದ ಹಾಗೂ ಶೋಷಣೆಗೆ ಒಳಗಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಲ್ಲಿ ಅಗತ್ಯ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ಪರ್ಯಾಯ ಕಾನೂನು ವೇದಿಕೆ ಹಾಗೂ ಅದಿಜಾಂಬವ ಯುವ ಬ್ರಿಗೇಡ್ ಸಹಯೋಗದಲ್ಲಿ ಎಸ್ಸಿ ಎಸ್ಟಿ ದೌರ್ಜನ್ಯ ತಡೆ, ಪಿಟಿಸಿಎಲ್ ಹಾಗೂ ಮಲ ಹೊರುವ ನಿಷೇಧ ಕಾಯಿದೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ನಡೆಸಲಾಯಿತು.
ಪಟ್ಟಣದ ಹರಿಜನ ಆದಿ ಜಾಂಬವ ಸಂಘದ ಭವನದಲ್ಲಿ ಆಯೋಜಿಸಿದ್ದ ಕಾನೂನು ಜಾಗೃತಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ವೀಣಾ ಮುಗ್ಧ ದಲಿತ ಸಮುದಾಯಕ್ಕೆ ಕಾನೂನು ಅರಿವು ಅತ್ಯಗತ್ಯವಿದೆ. ಸಮಾಜ ಕಲ್ಯಾಣ ಇಲಾಖೆ ಸಮಾಜದಲ್ಲಿ ತುಳಿತಕ್ಕೆ ಒಳಗಾದ ದಲಿತ ಸಮುದಾಯದ ಪರ ಕೆಲಸ ಮಾಡುತ್ತಿದೆ. ಸಂವಿಧಾನ ಬದ್ಧ ಕೆಲಸ ಮಾಡಲು ನಾವು ಸಿದ್ಧವಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ಒದಗಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಿದ್ದೇವೆ ಎಂದರು.

ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ ಶೋಷಿತರ ಪರ ರಚಿತ ಕಾಯಿದೆಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ತಿಳುವಳಿಕೆ ಇಲ್ಲದ ಜನರಿಗೆ ತಿಳಿ ಹೇಳಿ ಕಾಯಿದೆ ಬಳಕೆ ಬಗ್ಗೆ ಮಾಹಿತಿ ನೀಡಬೇಕು. ಅನಗತ್ಯ, ದುರುದ್ದೇಶದಲ್ಲಿ ಕಾಯಿದೆ ದುರ್ಬಳಕೆ ಮಾಡದಂತೆ ಮೊದಲು ಅರಿವು ಮೂಡಿಸಬೇಕು. ಜಾತಿ ನಿಂದನೆ ಕೇಸು ದುರುಪಯೋಗ ಆಗದಂತೆ ಪ್ರಜ್ಞಾವಂತರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೆಡ್ಸ್ ಸಂಸ್ಥೆ ಜಿಲ್ಲಾ ಸಂಚಾಲಕ ರಂಗಯ್ಯ ಮಾತನಾಡಿ ಪಿಟಿಸಿಎಲ್ ಕಾಯಿದೆ ಭೂಮಿ ಕಳೆದುಕೊಂಡ ಮುಗ್ಧ ದಲಿತರಿಗೆ ಮರಳಿ ಕೃಷಿ ಭೂಮಿ ನೀಡಿ ಬದುಕು ಕಟ್ಟಿಕೊಡುವ ಕಾಯಿದೆ ಸರಿಯಾಗಿ ಬಳಕೆ ಆಗಬೇಕಿದೆ. ಪರಿಣಾಮಕಾರಿ ಜಾರಿಗೆ ಸರ್ಕಾರಗಳು ಬೆಂಬಲ ಸೂಚಿಸಿಲ್ಲ. ನ್ಯಾಯಾಲಯ ಮೆಟ್ಟಿಲೇರಿರುವ ಈ ಕಾಯಿದೆ ದಲಿತರಿಗೆ ಮರು ಜೀವ ತರಲು ಜಾರಿಗೆ ಒತ್ತಡ ತರಲು ಮೊದಲು ಕಾಯಿದೆ ಬಗ್ಗೆ ತಿಳಿಯಬೇಕು ಎಂದು ಹೇಳಿದರು.
ಪರ್ಯಾಯ ಕಾನೂನು ವೇದಿಕೆ ವಕೀಲರಾದ ನರಸಿಂಹಪ್ಪ ಹಾಗೂ ಬಸವ ಪ್ರಸಾದ್ ಕುನಾಲೆ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ತಿಳಿಸಿದರು. ಕಾನೂನು ಪರ್ಯಾಯ ವೇದಿಕೆ ಸಂಶೋಧಕ ಸಿದ್ದಾರ್ಥ್ ಜೋಶಿ ಮಲ ಹೊರುವ ಪದ್ಧತಿ ನಿಷೇಧ ಬಗ್ಗೆ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಆಯೋಜಕ ಮನೋಜ್ ಕುಮಾರ್, ಮುಖಂಡರಾದ ಜಿ.ವಿ.ಮಂಜುನಾಥ್, ಚೇಳೂರು ಶಿವನಂಜಪ್ಪ, ಕೆಂಪರಾಜು, ಮನೋಹರ್, ಸವಿತಾ ಸಮಾಜದ ಪಾಪಣ್ಣ, ಆದಿ ಜಾಂಬವ ಯುವ ಬ್ರಿಗೇಡ್, ಭಾರತ್ ಭೀಮ ಸೇನೆ, ಮಾದಿಗ ದಂಡೋರ ಸಮಿತಿಯ ಪದಾಧಿಕಾರಿಗಳು ಇದ್ದರು.