ಚಿಕ್ಕಬಳ್ಳಾಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ವಾನದ ಆಗರವಾಗಿದ್ದು, ಕುಡಿಯುವ ನೀರು, ಶೌಚಾಲಯ ಯಾವುದೇ ಮೂಲಸೌಕರ್ಯಗಳಿಲ್ಲದೆ ರೈತರು ನಿತ್ಯ ಪರದಾಡುವಂತಾಗಿದೆ.
ಹೌದು, ಚಿಕ್ಕಬಳ್ಳಾಪುರ ನಗರದ ಎಂ ಜಿ ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವು, ತರಕಾರಿ ವ್ಯಾಪಾರ ವಹಿವಾಟುಗಳು ನಡೆಯುತ್ತಲೇ ಇರುತ್ತವೆ. ಹಳ್ಳಿಗಳಿಂದ ನಿತ್ಯ ನೂರಾರು ಮಂದಿ ರೈತರು ತರಕಾರಿ, ಹೂವು ಮಾರಾಟಕ್ಕೆಂದು ಮಾರುಕಟ್ಟೆ ಎಡತಾಕುತ್ತಲೇ ಇರುತ್ತಾರೆ. ಕೆಲ ರೈತರು ಹೂವು, ತರಕಾರಿ ಇತ್ಯಾದಿ ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಬೆಳ್ಳಂಬೆಳಗ್ಗೆ ಮಾರುಕಟ್ಟೆಗೆ ಬಂದರೆ, ಇನ್ನೂ ಕೆಲ ರೈತರು ರಾತ್ರಿಯೇ ಮಾರುಕಟ್ಟೆಗೆ ಬರುತ್ತಾರೆ. ಆದರೆ, ಮಾರುಕಟ್ಟೆಗೆ ಬರುವ ರೈತರಿಗೆ ಸರಿಯಾದ ಮೂಲಸೌಕರ್ಯಗಳು ಮರೀಚಿಕೆಯಾಗಿವೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ಎಲ್ಲೂ ಸಹ ಯೋಗ್ಯವಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಮಾರುಕಟ್ಟೆಯಲ್ಲಿನ ಕಚೇರಿ ಮುಂಭಾಗವೇ ನೀರಿನ ಟ್ಯಾಂಕ್ ಕೂರಿಸಲಾಗಿದೆ. ಆದರೆ, ಅದು ಫಿಲ್ಟರ್ ಮತ್ತು ಇತ್ಯಾದಿ ಸಮಸ್ಯೆಯಿಂದ ಉಪಯೋಗಕ್ಕೆ ಬಾರದೆ ಧೂಳಿಡಿದಿದೆ.

ಇನ್ನೂ ಮಾರುಕಟ್ಟೆಯಲ್ಲಿರುವ ಶೌಚಾಲಯವನ್ನು ಟೆಂಡರ್ ನೀಡಲಾಗಿದ್ದು, ಅಲ್ಲಿರುವ ಶೌಚಾಲಯಗಳು ಸರಿಯಾದ ನಿರ್ವಹಣೆಯಿಲ್ಲದೆ ದುರ್ವಾಸನೆಯಿಂದ ಕೂಡಿವೆ. ಬೆಳ್ಳಂಬೆಳಗ್ಗೆಯೇ ಬರುವ ರೈತರಿಗೆ ಸೂಕ್ತ ಶೌಚಾಲಯ ವ್ಯವಸ್ಥೆಯೂ ಇಲ್ಲ.
ವಯೋವೃದ್ಧರು, ಮಹಿಳೆಯರು, ವಯಸ್ಕರು, ಹಮಾಲಿಗಳು ಸೇರಿದಂತೆ ಸಾವಿರಾರು ಮಂದಿ ಮಾರುಕಟ್ಟೆಯಲ್ಲಿ ತಿರುಗಾಡುತ್ತಾರೆ. ರೈತರು ತರುವ ಹೂವು, ತರಕಾರಿಗಳನ್ನು ವರ್ತಕರಿಗೆ ಮಾರಾಟ ಮಾಡಿ ಅಲ್ಲಿಂದ ಮನೆಗಳಿಗೆ ವಾಪಾಸಾಗುವವರಿಗೆ ನೀರು, ಶೌಚಾಲಯ, ತಂಗಲು ಸೂಕ್ತ ಸ್ಥಳಾವಕಾಶ ಇದ್ಯಾವದೂ ಇಲ್ಲವಾಗಿದ್ದು, ಇದರಿಂದ ರೈತರು ನಿತ್ಯ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಅನೈತಿಕ ಚಟುವಟಿಕೆಗಳ ತಾಣ :
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆ ಮಾರುಕಟ್ಟೆಯ ತಡೆಗೋಡೆಯನ್ನು ಸಂಪೂರ್ಣ ಕೆಡವಲಾಗಿದ್ದು, ಸೂಕ್ತ ಭದ್ರತೆ ಇಲ್ಲವಾಗಿದೆ. ರಾತ್ರಿಯಾದರೆ ಅನೈತಿಕ ಚಟುವಟಿಕೆಗಳು ಆರಂಭವಾಗುತ್ತವೆ. ಭದ್ರತಾ ಸಿಬ್ಬಂದಿ ಕೊರತೆಯ ಕಾರಣ ಸಂಜೆ ವೇಳೆಗೆ ಮದ್ಯಸೇವನೆ ಮಾಡುವವರು ಸೇರಿದಂತೆ ಮುಂತಾದವರು ಮಾರುಕಟ್ಟೆಯೊಳಗೆ ಸೇರುತ್ತಾರೆ. ಕತ್ತಲಾದರೆ ಸಾಕು ಮಾರುಕಟ್ಟೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿಯೊಬ್ಬರು.

ಹಣ ಕೊಟ್ಟು ಕೊಂಡು ನೀರು ಕುಡಿಯುತ್ತೇವೆ :
ಕಳೆದ 25 ವರ್ಷಗಳಿಂದ ಇದೇ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲಿಯೂ ಸಹ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿಲ್ಲ. ನೀರು ಬೇಕಾದಾಗ ಹಣ ಕೊಟ್ಟು ಕೊಂಡು ಕುಡಿಯುತ್ತೇವೆ ಎನ್ನುತ್ತಾರೆ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಹಮಾಲಿ ಹನುಮಂತಪ್ಪ.
ಎಲ್ಲಿ ನೋಡಿದರೂ ಕಸದ ರಾಶಿ, ಅನೈರ್ಮಲ್ಯದ ಹೆಚ್ಚಳ :
ಮಾರುಕಟ್ಟೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿಲ್ಲ. ಎಲ್ಲಿ ನೋಡಿದರೂ ಕಸದ ರಾಶಿಗಳು ಕಾಣುತ್ತವೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲಗಳು ಹಾರಾಡುತ್ತಿರುತ್ತವೆ. ಇದರಿಂದ ಮಾರುಕಟ್ಟೆಯಲ್ಲಿ ಅನೈರ್ಮಲ್ಯತೆ ಹೆಚ್ಚಾಗಿದೆ ಎನ್ನುತ್ತಾರೆ ಕನ್ನಡಸೇನೆ ಸದಸ್ಯರೊಬ್ಬರು.

ದಿಬ್ಬೂರಹಳ್ಳಿ ರೈತ ಮಂಜಣ್ಣ ಮಾತನಾಡಿ, ನೀರಿನ ವ್ಯವಸ್ಥೆಯಿಲ್ಲ ಸ್ವಾಮಿ, ಹೊರಗಡೆ ಹೋಗಬೇಕು. ಶೌಚಾಲಯ ಇದೆ. ಆದರೆ, ಅಲ್ಲಿ ಗಬ್ಬು ವಾಸನೆ. ಅಲ್ಲಿ ಶೌಚಕ್ಕೆ ಹೋಗಲು ಸಾಧ್ಯವೇ ಇಲ್ಲ. ಅದರ ಬಳಕೆ ಮಾಡಿದರೆ ಯಾವ ಕಾಯಿಲೆ ಬರುತ್ತದೋ ಎಂಬ ಭಯ. ಸರಿಯಾದ ನಿರ್ವಹಣೆ ಮಾಡಿಲ್ಲ ಎಂದು ದೂರಿದರು.
ಈ ಕುರಿತು ಕನ್ನಡಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿ, ಎಪಿಎಂಸಿ ಮಾರುಕಟ್ಟೆಗೆ ತಡೆಗೋಡೆ ಇಲ್ಲ, ಭದ್ರತಾ ಸಿಬ್ಬಂದಿ ಇಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ. ಇದನ್ನೂ ಕೇಳುವವರು ಯಾರೂ ಇಲ್ಲ. ನೀರಿನ ಟ್ಯಾಂಕ್ ಇಂದೋ ನಾಳೆ ಬಿದ್ದೋಗುವ ಸ್ಥಿತಿ ತಲುಪಿದೆ. ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಿಲ್ಲ. ನಗರದಲ್ಲಿ ಎಲ್ಲೂ ಇಲ್ಲದ ಪ್ಲಾಸ್ಟಿಕ್ ಮಾರುಕಟ್ಟೆಯಲ್ಲಿದೆ. ಎತ್ತ ನೋಡಿದರೂ ಅನೈರ್ಮಲ್ಯ ತುಂಬಿದೆ. ಗೇಟ್ ಬಳಿ ಇರುವ ಶೌಚಾಲಯ ಬಾಗಿಲು ಹಾಕಿರುತ್ತದೆ. ಕೆಲ ಬೀದಿಬದಿ ವ್ಯಾಪಾರಿಗಳು ಶೌಚಾಲಯದ ಒಳಗಡೆಯೇ ತರಕಾರಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ರಾತ್ರಿ ವೇಳೆ ಬರುವ ರೈತರಿಗೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಕುಡಿಯಲು ನೀರಿಲ್ಲ. ಶೌಚಾಲಯವೂ ಸರಿಯಾಗಿಲ್ಲ ಎಂದು ಆರೋಪಿಸಿದರು.

ಈ ಕುರಿತು ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಎಪಿಎಂಸಿ ಕಾರ್ಯದರ್ಶಿ ಉಮಾ, ಕುಡಿಯುವ ನೀರಿನ ಟ್ಯಾಪ್ ಮುರಿದಿದೆ. ರಿಪೇರಿ ಮಾಡಿಸಿದರೂ ಪದೇ ಪದೇ ಟ್ಯಾಪ್‌ಗಳನ್ನು ಹಾಳು ಮಾಡುತ್ತಿದ್ದಾರೆ. ಜತೆಗೆ ಕೋತಿಗಳ ಕಾಟವೂ ಇದೆ. ಸಿಸ್ಟನ್ ನೀರು ಕೈಕಾಲು ತೊಳೆಯಲು ಬಳಕೆ ಮಾಡಲಾಗುತ್ತಿದೆ. ಸಿಬ್ಬಂದಿ ಕೊರತೆ ಇದೆ, ಗೇಟಿಲ್ಲದ ಕಾರಣ ಹೊರಗಿನವರು ಬರುತ್ತಿದ್ದಾರೆ. ಸ್ವಲ್ಪ ದಿನಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಆಗಲಿದೆ ಎಂದು ಹೇಳಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಚೀನಾಕ್ಕೆ ತಲೆನೋವಾಗಿರುವ ಜನಸಂಖ್ಯೆ- ಭಾರತ ಕಲಿಯಬೇಕಿರುವ ಪಾಠಗಳು!
ಒಟ್ಟಾರೆಯಾಗಿ, ನಿತ್ಯ ನೂರಾರು ಮಂದಿ ರೈತರು ಬಂದೋಗುವ ಎಪಿಎಂಸಿ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿದ್ದು, ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಮಾರುಕಟ್ಟೆ ಸಮಿತಿ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ಸೂಕ್ತ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ನಾಗರೀಕರ ಒತ್ತಾಸೆಯಾಗಿದೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.