ರಾಜ್ಯದ ಲಕ್ಷಾಂತರ ಬಡ ಸಾಗುವಳಿದಾರರಿಗೆ ಬಗರ್ ಹುಕುಂ ಭೂಮಂಜೂರಾತಿ ನೀಡುತ್ತಿರುವುದು ಸ್ವಾಗತಾರ್ಹ. ಜತೆಗ ತಿರಸ್ಕೃತ ಅರ್ಜಿಗಳನ್ನು ಮರು ಪರಿಶೀಲಿಸಿ ಮಂಜೂರಾತಿ ನೀಡಲು ಕಾನೂನು ತೊಡಕಾಗಿದ್ದು, ಇವುಗಳನ್ನು ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಕೊಪ್ಪಳ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಅರಣ್ಯ ಹಕ್ಕು ಕಾಯ್ದೆಯನ್ವಯ ಸಲ್ಲಿಸಿರುವ ಅರ್ಜಿಗಳು ಮಾನ್ಯಗೊಳ್ಳದೆ ಇನ್ನೂ ಆತಂತ್ರ ಸ್ಥಿತಿಯಲ್ಲಿಯೇ ಇರುವುದರಿಂದ ಸಾಗುವಳಿ ಮಾಡುತ್ತಿರುವ ಭೂಹೀನ ಬಡರೈತರು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೆ ಇದೇ ಕಾರಣಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳ ಕಿರುಕುಳವನ್ನೂ ಅನುಭವಿಸಬೇಕಾಗುತ್ತದೆ” ಎಂದರು.
“ಸರ್ಕಾರಿ ಆ ಖರಾಬ್, ಬ ಖರಾಬ್, ತಾಳಗುಡ್ಡ, ಪಾರಂದೂಕು, ಚೌಗು ಪ್ರದೇಶ, ಅವಳು ಪ್ರದೇಶ, ಸವಳು ಭೂಮಿ, ಉಸುಕು ಭೂಮಿ, ಹುಲ್ಲುಬನ್ನಿ, ಕಾವಲು, ಪೈಸಾರಿ, ಮರತ ಭೂಮಿ, ಪಾರೀಹ ಖಾತಾ, ಇನಾಂ ಭೂಮಿಗಳು ತನ್ನ ಮೂಲ ಕಂದಾಯ ನಿಯಮದಂತೆ ಮೂಲ ಸ್ವರೂಪ ಬದಲಾಯಿಸಿವೆ. ಇಷ್ಟು ವರ್ಷಗಳ ಕಾಲ ಅದೇ ಹೆಸರಿನಲ್ಲಿ ಮುಂದುವರೆಸಲಾಗಿದೆ. ನೂರು ವರ್ಷಗಳ ಕಣ್ಣೋಟದಲ್ಲೇ ಕಂದಾಯ ಇಲಾಖೆ ಗ್ರಹಿಸುತ್ತಿದ್ದು, ಇದು ಬದಲಾಗಬೇಕು” ಎಂದು ಒತ್ತಾಯಿಸಿದರು.
“ನಗರ ಮಿತಿಯ ಹೆಸರಲ್ಲಿ ಲಕ್ಷಾಂತರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. 1985ರ ಆಚೆಯಿಂದ ಸಾಗುವಳಿ ಮಾಡುತ್ತ ಫಾರಂ ನಂ. 50, 53ರಲ್ಲಿ ಅರ್ಜಿ ಸಲ್ಲಿಸಿದ್ದರೂ ಕೆಲವು ಕಡೆಗಳಲ್ಲಿ 2991-92ರಲ್ಲಿ ಭೂಮಂಜೂರಾತಿ ಆಗಿರುವ ಪ್ರಕರಣಗಳಿದ್ದರೂ, ಭೂಮಿಯ ಹಕ್ಕು ಜನರಿಗೆ ಸಿಕ್ಕಿಲ್ಲ” ಎಂದರು.
“ಸಾಗುವಳಿ ಮಾಡುತ್ತ ಅರ್ಜಿ ಸಲ್ಲಿಸಿರುವ ಬಹುತೇಕರು ಭೂರಹಿತರೇ ಆಗಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರುಗಳಿಗೆ ಸಾಮಾಜಿಕ ನ್ಯಾಯವಾಗಿಯೂ ಈ ಭೂಮಿ ಮಂಜೂರಾತಿ ನೀಡುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾದ್ದು ಸರ್ಕಾರದ ಜವಾಬ್ದಾರಿ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಶಾಸಕ ಸಂಗಮೇಶ್ ರಾಜಿನಾಮೆಗೆ ಆಗ್ರಹಿಸಿ ಫೆ.14 ರಂದು ಜೆಡಿಎಸ್ ಪ್ರತಿಭಟನೆ
“ವಸತಿ ವಿಚಾರವೂ ರಾಜ್ಯಾದ್ಯಂತ ಇದ್ದು, ವಸತಿಯೂ ಮೂಲಭೂತ ಹಕ್ಕಾಗಿರುವುದರಿಂದ ವಸತಿ ರಹಿತರಿಗೆ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಪ್ರತಿಯೊಬ್ಬರಿಗೂ ಗೌರವಯುತವಾದ ಬದುಕು ಕಟ್ಟಿಕೊಳ್ಳಲು ಇರುವ ಜಾಗ ಮಾನ್ಯ ಮಾಡಬೇಕು. ಜಾಗವಿಲ್ಲದವರಿಗೆ ವಾಸಕ್ಕೆ ಜಾಗ ನೀಡಬೇಕು” ಎಂದು ಆಗ್ರಹಿಸಿದರು.
“ಸರ್ಕಾರ ಬಡವರಿಗೆ ಭೂಮಿ-ವಸತಿ ಹಕ್ಕು ಮಾನ್ಯ ಮಾಡಿ ಮಂಜೂರಾತಿ ನೀಡಲು ಈ ಮೇಲಿನ ಭೂಮಿಗಳಿಗೆ ಇರಬೇಕಾದ ಮಾನದಂಡಗಳನ್ನು, ಇರುವ ಕಾನೂನು ತೊಡಕುಗಳನ್ನು ತಿದ್ದುಪಡಿ ಮಾಡುವ ಮೂಲಕ ಜನರಿಗೆ ಭೂಮಿಯ ಹಕ್ಕು ದೊರಕಿಸಿಕೊಡಬೇಕು” ಎಂದು ಮನವಿ ಮಾಡಿದರು.
