ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಜೊತೆಯಾಗಿ ಸ್ಪರ್ಧಿಸಬೇಕಿತ್ತು. ಉಭಯ ಪಕ್ಷಗಳ ನಡುವೆ ಒಗ್ಗಟ್ಟು ಅತೀ ಮುಖ್ಯವಾಗಿತ್ತು. ಬಹುತೇಕ ಭಾರತೀಯರಿಗೆ ಹಿಂದೂ ರಾಷ್ಟ್ರ ಬೇಕಾಗಿಲ್ಲ ಎಂದು ನೊಬೆಲ್ ಪುರಸ್ಕೃತ, ಭಾರತದ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪಿಟಿಐ ಜೊತೆ ಸಂದರ್ಶನದಲ್ಲಿ ಮಾತನಾಡಿದ ಅಮರ್ತ್ಯ ಸೇನ್ ಅವರು, “ಭಾರತದಲ್ಲಿ ಜಾತ್ಯತೀತತೆ ಉಳಿಯಬೇಕಾದರೆ ಒಗ್ಗಟ್ಟು ಇರುವುದು ಮಾತ್ರ ಮುಖ್ಯವಲ್ಲ. ಬಹುತ್ವಕ್ಕೆ ಉತ್ತಮ ಉದಾಹರಣೆಯಾದ ಭಾರತದಲ್ಲಿ ಇಂತಹ ವಿಚಾರದಲ್ಲಿ ಒಪ್ಪಂದ ಮಾಡಿಕೊಳ್ಳುವುದು ಅತೀ ಮುಖ್ಯ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆ | ಎಎಪಿ ಕೈಬಿಟ್ಟ ದಲಿತರು; ಮೀಸಲು ಕ್ಷೇತ್ರಗಳ ಸಮೀಕರಣ ಬದಲಾಗಿದ್ದೇಗೆ?
“ದೆಹಲಿ ಚುನಾವಣೆ ಫಲಿತಾಂಶವನ್ನು ಉತ್ಪ್ರೇಕ್ಷಿಸಬೇಕೆಂದು ನನಗೆ ಅನಿಸುವುದಿಲ್ಲ. ಆದರೆ ಅದಕ್ಕೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಎಎಪಿ ಅಲ್ಲಿ ಗೆದ್ದಿದ್ದರೆ ಆ ಗೆಲುವಿಗೆ ಒಂದು ತೂಕ ಇರುತ್ತಿತ್ತು” ಎಂದು ಹೇಳಿದರು.
ದೆಹಲಿಯಲ್ಲಿ ಹಿಂದುತ್ವಪರವಾದ ಸರ್ಕಾರವನ್ನು ಬಯಸದವರ ಜೊತೆ ಒಗ್ಗಟ್ಟು ಇಲ್ಲದಿರುವುದೇ ದೆಹಲಿಯಲ್ಲಿ ಎಎಪಿ ಸೋಲಲು ಕಾರಣ ಎಂದು ಅಮರ್ತ್ಯ ಸೇನ್ ಅಭಿಪ್ರಾಯಿಸಿದ್ದಾರೆ. “ಮತ ಲೆಕ್ಕಾಚಾರವನ್ನು ನೋಡಿದಾಗ ಬಿಜೆಪಿಯ ಮತ ಅಂತರ ಎಎಪಿಗಿಂತ ಕಡಿಮೆಯಾಗಿದೆ. ಕೆಲವೆಡೆ ಕಾಂಗ್ರೆಸ್ ಪಡೆದ ಮತಕ್ಕಿಂತ ಕಡಿಮೆಯಾಗಿದೆ” ಎಂದು ವಿವರಿಸಿದರು.
“ಎಎಪಿಯ ಹೊಣೆಗಾರಿಕೆಯೇನು? ಎಎಪಿ ಜಾತ್ಯಾತೀತ ಪಕ್ಷವೆಂದು ಎಲ್ಲರಿಗೂ ಸ್ಪಷ್ಪಪಡಿಸುವಲ್ಲಿ ಎಎಪಿ ಯಶಸ್ವಿಯಾಗಿದೆ ಎಂದು ನನಗನಿಸುವುದಿಲ್ಲ. ಎಎಪಿ ಈ ವಿಚಾರದಲ್ಲಿ ಸ್ಪಷ್ಟ ನಿಲುವನ್ನು ತೆಗೆದುಕೊಂಡಿಲ್ಲ” ಎಂದು ಹೇಳಿದರು.
