ಶಿರಾ ತಾಲೂಕು ಲಕ್ಕನಹಳ್ಳಿ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಬೆಳಗ್ಗೆ ತಿಂಡಿ ತಿಂದ ಕೆಲ ಹೊತ್ತಿನಲ್ಲಿಯೇ ಹೊಟ್ಟೆನೋವು ಕಾಣಿಸಿಕೊಂಡು ವಾಂತಿಭೇದಿಯಾಗಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಶಿರಾ ತಾಲೂಕಿನ ಲಕ್ಕನಹಳ್ಳಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳು ರಾತ್ರಿ ಚಿಕನ್ ಆಹಾರ ಸೇವನೆ ಮಾಡಿದ್ದು, ಬೆಳಿಗ್ಗೆ ಇಡ್ಲಿ ಹಾಗೂ ಚಟ್ನಿಯನ್ನು ತಿಂದಿದ್ದು ಆಹಾರದಲ್ಲಿ ವ್ಯತ್ಯಾಸದ ಉಂಟಾಗಿ 14 ಮಕ್ಕಳಿಗೆ ಫುಡ್ ಪಾಯಿಸನ್ ಆಗಿದೆ.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ನಂತರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿಗಳು ಆರೋಗ್ಯವಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಸಿದ್ದೇಶ್ವರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಕೆ ಬಡಿಗೇರ, ಜೆಡಿಎಸ್ ಮುಖಂಡ ಆರ್ ಉಗ್ರೇಶ್ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.
