ಬಸವ ಸೇವಾ ಪ್ರತಿಷ್ಠಾನದಿಂದ ಆಯೋಜಿಸಲಾದ 23ನೇ ವಚನ ವಿಜಯೋತ್ಸವ ಅಂಗವಾಗಿ ಬೀದರ್ ನಗರದ ಬಸವೇಶ್ವರ ವೃತ್ತದಿಂದ ಬಸವಗಿರಿಯವರೆಗೆ ಲಿಂಗಾಯತ ಧರ್ಮಗ್ರಂಥ, ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಿತು.
ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಶಿವಯೋಗೇಶ್ವರ ಮಹಾಸ್ವಾಮಿ, ಶಿವಾನಂದ ಮಹಾಸ್ವಾಮಿ, ಡಾ.ಗಂಗಾಂಬಿಕಾ ಅಕ್ಕ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಜೊತೆಯಾದರು.
ಜಿಲ್ಲಾ ಪಂಚಾಯತ ಸಿಇಒ ಡಾ.ಗಿರೀಶ ಬದೋಲೆ ವಚನ ಪಠಣ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ʼಬಸವಣ್ಣ ಈ ಭೂಮಿಯ ಸಂಪತ್ತು, ಬಸವಣ್ಣನವರು ಬರೆದ ವಚನಗಳಿಗೆ ಡಾ.ಅಂಬೇಡ್ಕರ್ ಅವರು ಕಾನೂನು ರೂಪ ಕೊಟ್ಟು ಸಂವಿಧಾನ ರಚಿಸಿದರು. ಬಸವಣ್ಣ ಓರ್ವ ದಾರ್ಶನಿಕ, ಸಮಾನತೆಯ ಹರಿಕಾರರು, ಇವನಮ್ಮವ ಇವನಮ್ಮವ ಎಂದು ಎಲ್ಲರನ್ನೂ ಇಂಬಿಟ್ಟುಕೊಂಡ ಮಹಾಮಾನವತವಾದಿʼ ಎಂದು ಹೇಳಿದರು.
ಸಾನಿದ್ಯವಹಿಸಿದ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ʼಜಗ ಬದುಕಲಿ ಜನ ಬದುಕಲೆಂದು ಬಸವಾದಿ ಶರಣರು ಪ್ರಾಣತ್ಯಾಗ ಮಾಡಿ ವಚನ ಸಾಹಿತ್ಯವನ್ನು ಸಂರಕ್ಷಿಸಿದ್ದಾರೆ. ಕಲ್ಯಾಣ ಕ್ರಾಂತಿಯ ಫಲವಾಗಿ ಸ್ವಾತಂತ್ರ್ಯ, ಸಮಾನತೆಗೆ ಬೆಲೆ ಬಂದಿದೆʼ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ʼವಚನಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹುತ್ತವ ಬಡಿದೆ ಹಾವು ಸಾಯಬಲ್ಲದು ಎಂಬ ವಚನವನ್ನು ಪಠಿಸಿ, ಬಸವಣ್ಣನವರು ಜಗತ್ತಿಗೆ ನೀಡಿದ ಕಾಯಕ ಸಿದ್ಧಾಂತ ಅತ್ಯಂತ ಮಹತ್ವದ್ದಾಗಿದೆʼ ಎಂದರು.

ಹೂವಿನಿಂದ ಅಲಂಕೃತವಾದ ವಚನ ಗ್ರಂಥ ಹೊತ್ತ ರಥವು ಮೆರವಣಿಗೆಯ ಕೇಂದ್ರ ಬಿಂದುವಾಗಿತ್ತು. ಶರಣ-ಶರಣೆಯರು ಬಿಳಿ ವಸ್ತ್ರ ಧರಿಸಿ ಷಟಸ್ಥಲ ಚಿಹ್ನೆ ಇರುವ ಸ್ಕಾರ್ಪ್, ತಲೆಯ ಮೇಲೆ ಟೋಪಿ ಧರಿಸಿ, ವಚನ ಗ್ರಂಥಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಛತ್ರಿ ಚಾಮರಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು. ಡೊಳ್ಳು ಕುಣಿತ, ಹೆಜ್ಜೆ ಮೇಳ, ಭಜನಾ ಮೇಳ ಸೇರಿದಂತೆ ವಿವಿಧ ಕಲಾ ತಂಡಗಳು ಮೆರಗು ಹೆಚ್ಚಿಸಿದವು.
ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಸಿದ್ಧರಾಮ, ಚೆನ್ನಬಸವಣ್ಣ ವೇಷಧಾರಿಗಳು ಮುಂಚೂಣಿಯಲ್ಲಿದ್ದು ಗಮನ ಸೆಳೆದವು. ವಚನ ವಿಜಯೋತ್ಸವ ಮೆರವಣಿಗೆ ಸಮಿತಿ ಅಧ್ಯಕ್ಷ ಜಯರಾಜ ಖಂಡ್ರೆ ದಂಪತಿ ಗುರು ಪೂಜೆಗೈದರು. ಮುಖಂಡ ಗುರುನಾಥ ಕೊಳ್ಳೂರ ಷಟಸ್ಥಲ ಧ್ವಜಾರೋಹಣ ಮಾಡಿದರು. ಪಂಚಾಕ್ಷರಿ ಸ್ವಾಮಿಗಳು, ಮಹಾಲಿಂಗದೇವರು, ಶಿವಾನಂದ ದೇವರು ನೇತೃತ್ವ ವಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕೈಹಿಡಿದ ನರೇಗಾ ಯೋಜನೆ; ಕೃಷಿಕನ ಬದುಕು ರಂಗೇರಿಸಿದ ಗುಲಾಬಿ ಹೂವು
ಮೆರವಣಿಗೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಬಸವರಾಜ ಧನ್ನೂರು ಸೋಮಶೇಖರ ಗಾದಗಿ, ಬಸವರಾಜ ಪಾಟೀಲ ಅಷ್ಟೂರ, ಬವಸರಾಜ ಬುಳ್ಳಾ, ಬಸವರಾಜ ಭತಮುರ್ಗೆ, ಸುರೇಶ ಚನ್ನಶೆಟ್ಟಿ, ಬಾಬುವಾಲಿ, ಆನಂದ ದೇವಪ್ಪ, ಬಸವಣಪ್ಪ ನೇಳಗಿ, ರಾಜೇಂದ್ರಕುಮಾರ ಗಂದಗೆ, ರಾಜೇಂದ್ರ ಜೊನ್ನಿಕೇರಿ, ಪ್ರಕಾಶ ಟೊಣ್ಣೆ, ಶಶಿಧರ ಹೊಸಳ್ಳಿ, ಸಂತೋಷ ಪಾಟೀಲ ಮುಂತಾದವರು ಭಾಗವಹಿಸಿದರು. ಸುರೇಶ ಸ್ವಾಮಿ ನಿರೂಪಿಸಿದರು. ರವಿ ಪಾಪಡೆ ವಂದಿಸಿದರು.