ಕರ್ನಾಟಕ ರಾಜ್ಯದ ಗೌರವಯುತ ಸ್ಪೀಕರ್ ಯು ಟಿ ಖಾದರ್ ರವರ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಉಳ್ಳಾಲ ತಾಲೂಕಿನ ಅಂಬ್ಲಮೊಗರು ಗ್ರಾಮದ ಕೃಷಿಯೋಗ್ಯ ಭೂಮಿಗಳನ್ನು ಕಳೆದ ಕೆಲವು ವರ್ಷಗಳಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಭೂ ಕಬಳಿಕೆದಾರರು ಅನುಮಾನಾಸ್ಪದ ರೂಪದಲ್ಲಿ ಖರೀದಿಸ ತೊಡಗಿದ್ದು ಸದ್ಯಕ್ಕೆ 200 ಎಕರೆಯಷ್ಟು ಕೃಷಿ ಭೂಮಿ ಈಗಾಗಲೇ ಮಾರಾಟವಾಗಿದೆ ಈ ಬಗ್ಗೆ ಗ್ರಾಮಸ್ಥರು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನ ಆಗದೆ ಕೊನೆಗೆ ಗ್ರಾಮಸ್ಥರೆಲ್ಲ ಸೇರಿ ಬೀದಿಗೆ ಇಳಿಯಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿ ಮಂಗಳೂರು ಕ್ಲಾಕ್ ಟವರ್ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿಯನ್ನು ಸಹ ನೀಡಿದ್ದಾರೆ.

ಹೌದು ಅಂಬ್ಲಮೊಗರು ಗ್ರಾಮಸ್ಥರೇ ಹೇಳುವ ಪ್ರಕಾರ ಬಲಾಢ್ಯ ಲಾಬಿಯೊಂದು ಈ ರೀತಿ ಏಜೆಂಟರನ್ನು ಮುಂದಿಟ್ಟು ಭೂಮಿಯನ್ನು ಖರೀದಿಸುತ್ತಿದೆ. ಹೀಗೆ ಒಂದೇ ಭಾಗದಲ್ಲಿ ಭೂಮಿಯನ್ನು ಖರೀದಿಸುತ್ತಿರುವ ಉದ್ದೇಶಗಳು ಮಾತ್ರ ಇಂದಿಗೂ ನಿಗೂಢವಾಗಿದೆ. ಇಲ್ಲಿ ಜಮೀನನ್ನು ಖರೀದಿಸುವಾಗ ಅಮಾಯಕ ರೈತರನ್ನು ವಿವಿಧ ರೀತಿಯಲ್ಲಿ ಮೋಸಗೊಳಿಸಲಾಗುತ್ತಿದೆ. ಕೆಲವೆಡೆ ‘ರಸ್ತೆ ಸಂಪರ್ಕ ಇಲ್ಲ, ಅದರಿಂದ ನಿಮ್ಮ ಭೂಮಿ ಕೊನೆಗೆ ಯಾರಿಗೂ ಬೇಡದಂತಾಗುತ್ತದೆ’ ಎಂದು ಆತಂಕ ಹುಟ್ಟಿಸಿ ಮಾರಾಟ ಮಾಡಿಸಿರುತ್ತಾರೆ. ಇನ್ನು ದಾಖಲೆಗಳು ಸರಿ ಇಲ್ಲದ, ಕುಟುಂಬಗಳಲ್ಲಿ ತಕರಾರು ಇದ್ದ ಜಮೀನುಗಳನ್ನು ವಿವಿಧ ರೀತಿಯ ತಂತ್ರ ಆಮಿಷಗಳ ಮೂಲಕ ತಮ್ಮ ಪಾಲು ಮಾಡಿಕೊಂಡಿರುತ್ತಾರೆ. ಕೆಲವೆಡೆ ದಶಕಗಳ ಹಿಂದೆ ಕೈಬರಹದ ಮೂಲಕ ಖರೀದಿ ಮಾಡಿದ ಗ್ರಾಮಸ್ಥರ ಭೂಮಿಯನ್ನು ಅವರ ಗಮನಕ್ಕೆ ತಾರದೆ ಮೂಲ ಮಾಲಕರಿಂದ ಖರೀದಿ ಮಾಡಿ ವಂಚಿಸಿದ್ದಾರೆ. ಮಾರಾಟ ಮಾಡುವುದಿಲ್ಲ ಎಂದು ಹಠ ಹಿಡಿದವರನ್ನು ಬೆದರಿಸಿ, ರಸ್ತೆ ಸಂಪರ್ಕ ಕಡಿತದ ಭೀತಿ ಹುಟ್ಟಿಸಿ ಖರೀದಿ ಮಾಡುವ ಘಟನೆಗಳೂ ನಡೆದಿದೆ. ಈಗಾಗಲೇ ಮಾರಾಟಗೊಂಡಿರುವ ಜಮೀನಿನ ನಡುವೆ ಬಾಕಿ ಉಳಿದಿರುವ ಜಮೀನಿನ ಮಾಲಕರ ಸ್ಥಿತಿ ಅತಂತ್ರವಾಗಿದೆ. ಇಷ್ಟಲ್ಲದೆ, ಅಂಲ್ಲಮೊಗರು ಗ್ರಾಮದಲ್ಲಿರುವ ಸರಕಾರಿ ಭೂಮಿಯನ್ನು ಕಬಳಿಸಿ ಮಣ್ಣು ಹಾಕಿ ಸಮತಟ್ಟುಗೊಳಿಸಲಾಗಿದೆ ಹಾಗೂ ಪಂಚಾಯತ್‌ನಿಂದ ನಿರ್ಮಿಸಲ್ಪಟ್ಟ ರಸ್ತೆ, ನೀರು ಹರಿಯುವ ಕಾಲುವೆಗಳನ್ನು ಅತಿಕ್ರಮಿಸಲಾಗುತ್ತಿದೆ. ಕಾಲುವೆಗಳನ್ನು ಮುಚ್ಚಲಾಗುತ್ತಿದೆ. ಗುಡ್ಡಗಳನ್ನು ಸಮತಟ್ಟುಗೊಳಿಸಲಾಗಿದೆ. 15 ವರ್ಷಗಳ ಹಿಂದೆ 1 ಕೋಟಿ 40 ಲಕ್ಷ ರೂ. ಪಂಚಾಯತ್ ಅನುದಾನದಿಂದ ನಿರ್ಮಿಸಲ್ಪಟ್ಟ ಮಜಲ್‌ದೋಟ – ಕೋಟೆಗುತ್ತು – ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಹೋಗುವ ಸಂಪರ್ಕ ರಸ್ತೆಯನ್ನೇ ಬಂದ್ ಮಾಡಿ ಬೇರೆಯೇ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದು ಅತ್ಯಂತ ಅವೈಜ್ಞಾನಿಕವಾಗಿದೆ. ಕಂಡಿಲದಿಂದ ತೇವುಲಕ್ಕೆ ಹೋಗುವ ಪ್ರಮುಖ ರಸ್ತೆ ಹಾಗೂ ರೆಂಜಾಡಿಯಿಂದ ಕಂಡಿಲವಾಗಿ ಮಜಲ್‌ದೋಟಕ್ಕೆ ಹೋಗುವ ಮುಖ್ಯರಸ್ತೆಗಳನ್ನೇ ಮುಚ್ಚಲಾಗಿದ್ದು ಅದನ್ನು ಮತ್ತೆ ನಿರ್ಮಿಸಬೇಕಾಗಿದೆ.
ಕೊಣಾಜೆ-ಬೆಳ್ಳ-ಮುನ್ನೂರು-ಅಂಮ್ಲಮೊಗರು ಮೂಲಕ ನೇತ್ರಾವತಿ ನದಿಗೆ ಹರಿಯುವ ಮಳೆನೀರು ಕಾಲುವೆಯನ್ನು ಮಣ್ಣು ಹಾಕಿ ಬಂದ್ ಮಾಡಲಾಗಿದೆ. ನೂರಾರು ಟಿಪ್ಪರ್‌ಗಳಲ್ಲಿ ಮಣ್ಣನ್ನು ಸಾಗಿಸಲಾಗುತ್ತಿದ್ದು ಅದರಿಂದ ಉದ್ಭವಿಸಿದ ವಿಪರೀತ ಧೂಳಿನ ಸಮಸ್ಯೆಯಿಂದಾಗಿ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇವೆಲ್ಲವೂ ನಿಯಮಬಾಹಿರವಾಗಿ ರಾಜಾರೋಷವಾಗಿ ನಡೆಯುತ್ತಿದೆ. ಈ ಕುರಿತು ಸ್ಥಳೀಯ ಪಂಚಾಯತ್ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ.

ಈ ದಿನ.ಕಾಮ್ ಜೊತೆ ಮಾತನಾಡಿದ ಸಿಪಿಐಎಮ್ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಜಮೀನ್ದಾರಿಕೆ ಪದ್ದತಿಯ ವಿರುದ್ಧ ಗೇಣಿದಾರ ರೈತರು ದಶಕಗಳ ಕಾಲ ಸಂಘರ್ಷ ನಡೆಸಿ ಭೂಮಿಯ ಹಕ್ಕು ಪಡೆದ ಉಳ್ಳಾಲ ತಾಲೂಕಿನಲ್ಲಿ ನವ ಭೂಮಾಲಕ ಪದ್ದತಿ ತಲೆ ಎತ್ತಿದೆ. ರೈತರ ನೂರಾರು ಎಕರೆ ಜಮೀನು ಸದ್ದಿಲ್ಲದೆ ಬಲಾಢ್ಯ ವರ್ಗದ ಪಾಲಾಗುತ್ತಿದೆ. ಬಡ ರೈತರ ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು ಗೂಂಡಾ ಪ್ರವೃತ್ತಿಯ ಏಜಂಟರನ್ನು ಮುಂದಿಟ್ಟು ಉಳ್ಳಾಲ ತಾಲೂಕಿನ ಅಂಬ್ಲಮೊಗರು, ಮುನ್ನೂರು, ಬೆಳ್ಮ, ಮಂಜನಾಡಿ ಗ್ರಾಮಗಳಲ್ಲಿ ಅತಿ ಕಡಿಮೆ ದರ ನೀಡಿ ಕೃಷಿ ಭೂಮಿ ಸ್ವಾಧೀನ ಪಡಿಸಲಾಗುತ್ತಿದೆ. ಸುತ್ತಲಿನ ಜಮೀನು ಖರೀದಿ ಮಾಡಿ ಮಧ್ಯದಲ್ಲಿ ಇರುವ ಕೃಷಿ ಭೂಮಿಯ ಸಂಪರ್ಕ ರಸ್ತೆಗಳನ್ನು ಮುಚ್ಚಿ, ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳನ್ನೂ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವ ಈ ಭೂ ಮಾಪಿಯಾಗಳು ಹೊಸ ಸಾಮ್ರಾಜ್ಯವನ್ನು ಕಟ್ಟಿದ್ದು, ಉಳ್ಳಾಲ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಅಸಹನೀಯ ಪರಿಸ್ಥಿತಿ ಉಂಟಾಗಿದೆ. ಉಳ್ಳಾಲದ ಶಾಸಕರೂ ಸೇರಿದಂತೆ ಜಿಲ್ಲೆಯ ಶಾಸಕರುಗಳು ಕೃಷಿ ಪರಂಪರೆಯ ಉಳಿವಿನ ಹೆಸರಿನಲ್ಲಿ ಮುಂಡಾಸು ಕಟ್ಟಿ ಕಂಬಳ ಆಯೋಜಿಸುವ ಸಂಭ್ರಮದಲ್ಲಿ ಮುಳುಗಿದ್ದಾರೆ. ಅಂಬ್ಲಮೊಗರು, ಬೆಳ್ಮ, ಮುನ್ನೂರು ಗ್ರಾಮದ ಅತ್ತ ಕಡೆ ನರಿಂಗಾನದಲ್ಲಿ ಕಾಂಗ್ರೆಸಿಗರು, ಇತ್ತ ಕಡೆ ಜಪ್ಪಿನಮೊಗರಿನಲ್ಲಿ ಬಿಜೆಪಿಗರು ಆಡಂಬರದ ಕಂಬಳಗಳನ್ನು ಆಯೋಜಿಸಿದ್ದಾರೆ. ಆದರೆ, ಈ ಎರಡು ಕಂಬಳ ಕೇಂದ್ರಗಳ ನಡುವಿನ ಗ್ರಾಮಗಳಲ್ಲಿ ನೈಜ ರೈತಾಪಿಗಳು ಭೂಮಿ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದರೂ, ಈ ಶಾಸಕರುಗಳು ಕನಿಷ್ಟ ಸಮಸ್ಯೆಗಳನ್ನೂ ಆಲಿಸುತ್ತಿಲ್ಲ. ಬದಲಿಗೆ, ಭೂಮಾಫಿಯಾಗಳಿಂದಲೇ ಕಂಬಳದ ಪ್ರಾಯೋಜಕತ್ವ ಪಡೆಯುತ್ತಿದ್ದಾರೆ, ಕಂಬಳದ ಕುರಿತಾದ ಕಾಳಜಿ ನೈಜ ರೈತರು, ಕೃಷಿ ಭೂಮಿಯ ಉಳಿವಿನ ಕುರಿತು ಶಾಸಕರುಗಳಿಗೆ ಇರದಿರುವುದು ವಿಷಾದನೀಯ, ಇಂತಹ ಬೂಟಾಟಿಕೆಯ ಜನಪ್ರತಿನಿಧಿಗಳನ್ನು ನಂಬಿ ಕೂರದೆ, ಬಲಿಷ್ಟ ಹೋರಾಟಕ್ಕೆ ಜನತೆ ಮುಂದಾಗಬೇಕು ಎಂದು ಹೇಳಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಸುನೀಲ್ ಕುಮಾರ್ ಬಜಾಲ್, ಬಲಾಢ್ಯ ಭೂಮಾಫಿಯಾ ಶಕ್ತಿಯೊಂದು ಕಳೆದ ಹಲವು ವರ್ಷಗಳಿಂದ ಅಂಬ್ಲಮೊಗರು ಗ್ರಾಮದ ಕೃಷಿಯೋಗ್ಯ ಭೂಮಿಯನ್ನು ಅತ್ಯಂತ ಕಡಿಮೆ ಕ್ರಯಕ್ಕೆ ಅನುಮಾನಾಸ್ಪದ ರೀತಿಯಲ್ಲಿ ಖರೀದಿಸತೊಡಗಿದ್ದಾರೆ. ಮುಂದಿನ ಯೋಜನೆಗಳು ಏನೆಂಬುದು ಕನಿಷ್ಟ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಗೊತ್ತಿಲ್ಲ. ಸರಕಾರಿ ಭೂಮಿಯನ್ನು ಕೂಡ ನುಂಗಿ ಹಾಕಿದ ಖದೀಮರು ಪಂಚಾಯತ್ ನಿಂದ ನಿರ್ಮಿಸಲ್ಪಟ್ಟಿದ್ದ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ಸೇತುವೆಗಳನ್ನು, ಕಾಲು ಸಂಕಗಳನ್ನು ಕೆಡವಿ ಹಾಕಿದ್ದಾರೆ. ಇಂತಹ ಗಂಭೀರ ಸಮಸ್ಯೆ ಅಂಬ್ಲಮೊಗರು ಗ್ರಾಮದಲ್ಲಿ ತಲೆದೋರಿದ್ದರೂ ಸ್ಥಳೀಯ ಶಾಸಕರಾಗಿರುವ ಸ್ಪೀಕರ್ ಸಾಹೇಬರು ತುಟಿಪಿಟಿಕೆನ್ನದೆ ದಿವ್ಯ ಮೌನ ವಹಿಸಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯೆ ಶಾಲಿನಿ ಪೂಜಾರಿ ಮಾತನಾಡಿ ನಮ್ಮ ಗ್ರಾಮಕ್ಕೆ ದೊಡ್ಡ ದೊಡ್ಡ ಕಾಂಟ್ರಾಕ್ಟರ್ ಗಳು ಬಂದು ನಮ್ಮ ಭೂಮಿಯನ್ನೆಲ್ಲ ಶ್ರೀಮಂತರಿಗೆ ನೀಡಿ ನಮ್ಮನ್ನು ಬೀದಿಯಲ್ಲಿ ತಂದು ನಿಲ್ಲಿಸಿದ್ದಾರೆ. ನಮ್ಮ ಊರಿಗೆ ದಾರಿಗಳಿಲ್ಲ, ಕಾಲುದಾರಿಗಳಿಲ್ಲ, ಧೂಳಿನಿಂದ ತುಂಬಿಕೊಂಡ ಗ್ರಾಮ ನಮ್ಮದಾಗಿದೆ ಮಕ್ಕಳಿಗೆ, ವೃದ್ದರಿಗೆ ಸಮಸ್ಯೆ ಮೇಲೆ ಸಮಸ್ಯೆಗಳು ಉಂಟಾಗಿವೆ, ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಸ್ಥಳಿಯ ಅಂಬ್ಲಮೊಗರು ನಿವಾಸಿಯಾದ ಭಾರತಿ ಮಳೆಗಾಲದಲ್ಲಿ ಮಳೆ ಬಂದರೆ ನೀರು ಹೋಗಲು ಸಹ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ, ಮಳೆಯ ನೀರೆಲ್ಲ ಮನೆಯ ಒಳಗೆ ಬರುತ್ತದೆ ಈಗಂತೂ ಲಾರಿಗಳ ಓಡಾಟದಿಂದ ಧೂಳುಗಳೆಲ್ಲ ಮನೆ ಒಳಗೆ ಬರುತ್ತಿದೆ ಬಾವಿಯ ನೀರು ಸಹ ಹೂಳು ತುಂಬಿ ಕುಡಿಯಲು ಯೋಗ್ಯವಲ್ಲದ ರೀತಿಯಲ್ಲಿದೆ ಓಡಾಡಲು ಸರಿಯಾದ ದಾರಿಯಿಲ್ಲ ಅಷ್ಟು ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನೋರ್ವ ಸ್ಥಳಿಯ ನಿವಾಸಿ ಜಲಜಾ ಈ ದಿನ.ಕಾಮ್ ಜೊತೆ ಮಾತನಾಡಿ ಮೊದಲಿದ್ದ ದಾರಿಯನ್ನು ಈಗ ಬೇಲಿ ಹಾಕಿ ಯಾರಿಗೋ ಕಾಂಟ್ರಾಕ್ಟ್ ಕೊಟ್ಟು ನಮ್ಮನ್ನು ಸಮಸ್ಯೆಗೆ ಒಳಪಡಿಸಿದ್ದಾರೆ. ಒಳಗೆ ಹೋಗಲು ಬಿಡದಿದ್ದರೂ ಸುತ್ತಮುತ್ತಲಿನ ದಾರಿಯನ್ನಾದರು ನಮಗೆ ಓಡಾಟ ನಡೆಸಲು ಅವಕಾಶ ಕೊಡಬೇಕು ಎಂದು ಹೇಳಿದರು.
ಒಟ್ಟಿನಲ್ಲಿ ಅಂಬಮೊಗರು ಗ್ರಾಮಾದಾದ್ಯಂತ ಭೀತಿಯ ವಾತಾವರಣ ಸೃಷ್ಟಿಯಾಗಿದ್ದು ಸ್ಥಳೀಯ ಜನತೆಯ ಬದುಕನ್ನು ಕೇಳುವವರಿಲ್ಲದಾಗಿದೆ. ಅಂಬ್ಲಮೊಗರು ಗ್ರಾಮದ ಕೃಷಿಭೂಮಿ ಸಂರಕ್ಷಣಾ ಹೋರಾಟಕ್ಕೆ ಜಯ ಸಿಗಬೇಕಿದೆ.
