ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡದ ಯಲ್ಲಮ್ಮನ ದೇವಸ್ಥಾನಕ್ಕೆ ಬುಧವಾರ ನಡೆದ ಭರತ ಹುಣ್ಣಿಮೆ ಜಾತ್ರೆಗೆ 10 ಲಕ್ಷಕ್ಕೂ ಹೆಚ್ಚು ಜನ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಯಲ್ಲಮ್ಮನ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಮೂಲಸೌಕರ್ಯ ಪರಿಶೀಲಿಸಿದ ಬಳಿಕ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿಗಳು ಮಾತನಾಡಿ ಚಕ್ಕಡಿ ಗಾಡಿ, ಜೀಪ್, ಟೆಂಪೊ, ಟ್ರ್ಯಾಕ್ಟರ್, ಬೈಕ್, ಕಾರ್, ಬಸ್ ಸೇರಿದಂತೆ ಎಲ್ಲ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು. ಸರಿಸುಮಾರು 1,500 ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ನೇಮಿಸಲಾಗಿದೆ, ಮೊದಲ ಬಾರಿಗೆ ಮಂಡಳಿ ಹಾಗೂ ಪ್ರಾಧಿಕಾರದ ವತಿಯಿಂದ ಭಕ್ತಾಧಿಗಳಿಗಾಗಿ ಮಜ್ಜಿಗೆ ದಾಸೋಹ ಮಾಡಲಾಗಿದೆ. ಮುಂದಿನ ವರ್ಷದಲ್ಲಿ ದಾಸೋಹ ಭವನ ಮಾಡಬೇಕು ಎಂದು ಯೋಜನೆ ರೂಪಿಸಲಾಗಿದೆ. ತಿರುಪತಿ ಧರ್ಮಸ್ಥಳದ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಅನುದಾನ ಲಭ್ಯವಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ದನ- ಕರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ, ವಾಹನ ಮತ್ತು ಎತ್ತಿನ ಗಾಡಿಗಳಿಗೆ ಪಾರ್ಕಿಂಗ್ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.