ರಾಯಚೂರಿನಲ್ಲಿ ಸುಮಾರು 322.3 ಎಕರೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ವಿಮಾನ ನಿಲ್ದಾಣದ ನಿರ್ಮಾಣದ ಹಂತದಲ್ಲಿ ಯಾವುದೇ ರೀತಿಯ ಪರಿಸರ ಹಾನಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ತಿಳಿಸಿದರು.
ನಗರದ ಯರಮರಸ್ ಸರ್ಕ್ಯೂಟ್ ಹೌಸ್ ನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಸಹಯೋಗದಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ನಗರದ ಹೊರವಲಯದ ಯರಮರಸ್ ಬಳಿ ವಿಮಾನ ನಿಲ್ದಾಣಕ್ಕೆ ರಾಯಚೂರು ತಾಲೂಕಿನ ಏಗನೂರು, ಯರಮರಸ್, ದಂಡ್ ಗ್ರಾಮಗಳ 130.43 ಹೆಕ್ಟೇರ್ ಪ್ರದೇಶದಲ್ಲಿ ಗ್ರೀನ್ ಫೀಲ್ಡ್ ನೋ ಫ್ರೀಲ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ಹಿನ್ನೆಲೆ ವಿಮಾನ ನಿಲ್ದಾಣದ ಪರಿಸರ ಸಂರಕ್ಷಣೆ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನಿರ್ಮಾಣಕ್ಕೆ ಈಗಾಗಲೇ ಸಿದ್ಧತೆ ಕೈಗೊಳ್ಳುತ್ತಿದ್ದು, ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಕಾಮಗಾರಿ ನಡೆಸಲಾಗುವುದು” ಎಂದರು.
ಏಗನೂರು ನಿವಾಸಿ ಹನುಮೇಶ ಮಾತನಾಡಿ, “ವಿಮಾನ ನಿಲ್ದಾಣ ಮಾಡುವ ಮೊದಲು ಅಲ್ಲಿ 108 ಕುಟುಂಬಗಳು ವಾಸ ಮಾಡುತ್ತಿದ್ದು ಈ ಹಿಂದೆ ಸರ್ಕಾರವೇ ಹಕ್ಕುಪತ್ರ ನೀಡಿ ಮನೆಗಳನ್ನು ನಿರ್ಮಿಸಿದೆ. ಆದರೆ ಸ್ಥಳಾಂತರ ಮಾಡಬೇಕು ಎಂದು ಇದೀಗ ಸರ್ಕಾರ ಹೇಳುತ್ತಿದೆ. ಮೂಲ ಸೌಕರ್ಯ ಒದಗಿಸಿ ಮನೆಗಳನ್ನು ನಿರ್ಮಿಸಬೇಕು. ವಿಮಾನ ನಿಲ್ದಾಣದ ಸ್ಥಳದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿದೆ. ಅಲ್ಲಿಯೇ ರನ್‌ವೇ ನಿರ್ಮಿಸಲಾಗುತ್ತಿದ್ದು ಕೂಡಲೇ ರನ್‌ವೇ ಮಾರ್ಗ ಬದಲಿಸಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ” ಎಂದರು.
ಹೋರಾಟಗಾರ ಬಸವರಾಜ ಕಳಸ ಮಾತನಾಡಿ, “ಯರಮರಸ್ ಬಳಿ 68 ವರ್ಷಗಳ ವಿಮಾನ ನಿಲ್ದಾಣದ ಕನಸು ನನಸಾಗುತ್ತಿದೆ. ಹಿಂದೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ವಿಮಾನ ನಿಲ್ದಾಣ ಮಾಡಲು 68 ವರ್ಷಗಳ ಹಿಂದೆ ಆದ್ಯತೆ ನೀಡಿದ್ದು, ಇಂದಿರಾ ಗಾಂಧಿ ರಾಯಚೂರಿಗೆ ಆಗಮಿಸಿದಾಗ ವಿಮಾನ ನಿಲ್ದಾಣ ಭರವಸೆ ನೀಡಿದ್ದರು. ಇಂದು ಆ ಕನಸು ನನಸಾಗುವ ಹಂತಕ್ಕೆ ಬಂದಿದೆ. ಈ ಹಿನ್ನೆಲೆ ವಿಮಾನ ನಿಲ್ದಾಣ ಸಾಧಕ ಬಾದಕಗಳನ್ನು ಸರ್ಕಾರ ಆಲಿಸಬೇಕಾಗಿದೆ” ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಕೆ.ಶಾಂತಪ್ಪ ಮಾತನಾಡಿ, “ವಿಮಾನ ನಿಲ್ದಾಣದಿಂದಾಗುವ ಸಾಧಕ ಬಾದಕಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ವಿಮಾನ ನಿಲ್ದಾಣ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು, ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ಈ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗಬೇಕು. ಆರ್‌ಟಿಪಿಎಸ್, ವೈಟಿಪಿಎಸ್ ನಿಂದ ತಾಪಮಾನ ಹೆಚ್ಚಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಜವಾಬ್ದಾರಿಯುತವಾಗಿ ತಮ್ಮ ಕೆಲಸ ನಿರ್ವಹಣೆ ಮಾಡಬೇಕು. ಪರಿಸರ ಸಂರಕ್ಷಣೆಗೆ ಮೀಸಲಿಟ್ಟಿರುವ ಅನುದಾನವನ್ನು ಉದ್ದೇಶಿತ ಕಾರ್ಯಕ್ಕೆ ವಿನಿಯೋಗಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಜಗತ್ತೇ ಇಂಟರ್‌ನೆಟ್ ಜಾಲದಲ್ಲಿ ತೇಲುತ್ತಿದೆ, ಎಚ್ಚರಿಕೆಯಿಂದ ಬಳಸಿ:ಇಂಟರ್‌ನೆಟ್
ಸಭೆಯಲ್ಲಿ ಸಹಾಯಕ ಆಯುಕ್ತ ಗಜಾನನ ಬಾಳೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಪ್ರಕಾಶ, ತಹಶಿಲ್ದಾರ್ ಸುರೇಶ ವರ್ಮಾ, ರಘುವೀರ್ ನಾಯಕ, ಸುತ್ತಮುತ್ತಲಿನ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳು ಮುಖಂಡರು ಇದ್ದರು.
