- ‘ಆತ ಮಾತನಾಡುತ್ತಾನೆಂಬ ಕಾರಣಕ್ಕೆ ನಾನು ಮಾತನಾಡುವುದಿಲ್ಲ’
- ಬೆಳಗಾವಿಯ ಕೆಲವು ಕ್ಷೇತ್ರಗಳಿಗೆ ಅಚ್ಚರಿಯ ಅಭ್ಯರ್ಥಿ ಆಯ್ಕೆ ಎಂದ ಜಾರಕಿಹೊಳಿ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. “ಆತ (ಯತ್ನಾಳ್) ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ, ಆತನ ಕಾರ್ಯವೈಖರಿ ಕೇವಲ ವಿಜಯಪುರಕಷ್ಟೇ ಮೀಸಲಾಗಿದೆ. ಆದರೆ, ನನ್ನ ಕಾರ್ಯವ್ಯಾಪ್ತಿ ಇಡೀ ರಾಜ್ಯಕ್ಕೆ ವಿಸ್ತಾರವಾಗಿರುವುದರಿಂದ ನನ್ನ ವಿರುದ್ಧ ಮಾತನಾಡುತ್ತಾನೆ. ಆತ ಮಾತಾಡಿದ ಎಂಬ ಕಾರಣಕ್ಕೆ ನಾನು ಮಾತನಾಡಲು ಆಗುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ಕಾರ್ಯಕ್ರಮ ನಿಮಿತ್ತ ಬೆಳಗಾವಿಗೆ ಆಗಮಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾಧ್ಯಮದವರೊಂದಿಗೆ ಮಾತನಾಡಿದರು. “ನಾನು ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿಯೂ ಪಕ್ಷ ಸಂಘಟನೆಯಲ್ಲಿ ನಿರತನಾಗಿದ್ದೇನೆ. ಹಾಗಾಗಿ, ನನಗೆ ಮಾತನಾಡಲು ಸಮಯವಿಲ್ಲ. ಆದರೆ, ಆತ ಮಾಧ್ಯಮದವರನ್ನು ನೋಡಿದ ತಕ್ಷಣ ನೀವು ಕೇಳುವುದಕ್ಕಿಂತ ಮೊದಲೇ ಕಾಲುಕೆರೆದು ಮಾತನಾಡುತ್ತಾನೆ” ಎಂದು ಲೇವಡಿ ಮಾಡಿದರು.
ಈ ಸುದ್ದಿ ಓದಿದ್ದೀರಾ? : ಗೂಂಡಾ ಸಿದ್ದರಾಮಯ್ಯನನ್ನು ಸಿಎಂ ಮಾಡಿದ್ರೆ ನಾವು, ನೀವು ಸಾಯುತ್ತೇವೆ: ಶಾಸಕ ಯತ್ನಾಳ್
“ಆತ ತಮ್ಮದೇ ಪಕ್ಷದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಹಲವು ನಾಯಕರ ವಿರುದ್ಧ ಮಾತಾಡುತ್ತಾನೆ. ಇನ್ನು ನಾವು ಯಾವ ಲೆಕ್ಕ? ಹಾಗಾಗಿ ನಾನು ಯಾವತ್ತೂ ಆತನನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾನು ಕೊಟ್ಟಂತ ಕೆಲವು ಹೇಳಿಕೆಗಳನ್ನು ತಿರುಚಿ ನನ್ನ ತೇಜೋವಧೆ ಮಾಡಲು ಸದಾ ಪ್ರಯತ್ನಿಸುತ್ತಿರುತ್ತಾನೆ. ನಾನು ಯಾವುದೇ ಸಮುದಾಯದ ವಿರುದ್ದ ಲಘುವಾಗಿ ಮಾತನಾಡುವುದಿಲ್ಲ. ನನ್ನ ಹೇಳಿಕೆ ಬಗ್ಗೆ ನನ್ನ ಬಳಿ ಸಾಕ್ಷಿ ಇದ್ದು, ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ” ಎಂದು ತಿಳಿಸಿದರು.
ಇನ್ನೂ ಬೆಳಗಾವಿ ಜಿಲ್ಲೆಯ ರಾಜಕೀಯದ ಬಗ್ಗೆ ಮಾತನಾಡುತ್ತಾ, “ಜಿಲ್ಲೆಯ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಉಳಿದ 9 ಅಭ್ಯರ್ಥಿಗಳ ಪಟ್ಟಿಯು ಆದಷ್ಟು ಬೇಗ ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ 5 ಕ್ಷೇತ್ರಗಳಲ್ಲಿ ಯಾವುದೇ ಗೊಂದಲವಿಲ್ಲ. ಉಳಿದ 4 ಕ್ಷೇತ್ರಗಳಲ್ಲಿ ಗೊಂದಲಗಳಿದ್ದು, ಕೆಲವು ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಚಿಂತಿಸಲಾಗುತ್ತಿದೆ. ನಮಗೆ ಕಾಂಗ್ರೆಸ್ ಪಕ್ಷದ ಗೆಲುವಷ್ಟೇ ಮುಖ್ಯ” ಎಂದು ತಿಳಿಸಿದರು.