ದರೋಡೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ವಿಜಯಪುರ ನಗರದ ಜೈನಾಪೂರ ಲೇಔಟ್ ನಿವಾಸಿ ಸಂತೋಷ ಕನ್ನಾಳ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಕೂಡಲೇ ಸರ್ಕಾರ ಮೃತ ಸಂತೋಷನ ಕುಟಂಬಕ್ಕೆ ಪರಿಹಾರ ಒದಗಿಸಬೇಕೆಂದು ನ್ಯಾಯವಾದಿ ಶ್ರೀಶೈಲ ಮುಳದೆ ಒತ್ತಾಯಿಸಿದರು.
ವಿವಿಧ ಸಂಘಟನೆಗಳು ಸೇರಿ ವಿಜಯಪುರದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, “ಘಟನೆ ಸಂಭವಿಸಿ ತಿಂಗಳು ಕಳೆದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಮೃತ ಸಂತೋಷನ ಕುಟುಂಬಕ್ಕೆ ಪರಿಹಾರ ನೀಡಲು ಮೀನಾಮೇಶ ಎಣಿಸುತ್ತಿದೆ. ಕೂಡಲೇ ಸೂಕ್ತ ಪರಿಹಾರ ನೀಡಿ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು” ಆಗ್ರಹಿಸಿದರು.
ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, “ದರೋಡೆ ಪ್ರಕರಣದಲ್ಲಿ ಅನ್ಯಾಯವಾಗಿ ಮೃತಪಟ್ಟ ಸಂತೋಷನ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಕೂಡಲೇ ಸರ್ಕಾರದಿಂದ 25 ಲಕ್ಷ ರೂಗಳ ಪರಿಹಾರ ಹಾಗೂ ಮೃತನ ಪತ್ನಿಗೆ ಸರ್ಕಾರಿ ನೌಕರಿ, ಮಗುವಿಗೆ ಶೈಕ್ಷಣಿಕ ಖರ್ಚು ವೆಚ್ಚ ನೀಡಿ ಅನುಕೂಲ ಮಾಡಿಕೊಡಬೇಕು. ಇನ್ನುವರೆಗೂ ಮೃತರ ಕುಟುಂಬಕ್ಕೆ ಜನಪ್ರತಿನಿಧಿಗಳಾಗಲಿ ಸರ್ಕಾರಿ ಅಧಿಕಾರಿಗಳಾಗಲಿ ಭೇಟಿ ನೀಡಿ ಸಾಂತ್ವನ ಕೂಡ ಹೇಳದೇ ಇರುವುದು ದುರ್ದೈವದ ಸಂಗತಿ. ಇಂತಹ ಗಂಭೀರ ಪ್ರಕರಣದಲ್ಲಿ ಜಾಣ ಕುರುಡುತನ ಪ್ರದರ್ಶಿಸುವುದು ಸಲ್ಲದು” ಎಂದು ವಿಷಾದಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದ ಈ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಜನತೆ ಕಳ್ಳ ಕಾಕರ ಹಾವಳಿಯಿಂದ ಭಯಭೀತರಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ತಪ್ಪಿತಸ್ಥ ಕಳ್ಳರಿಗೆ ಉಗ್ರ ಶಿಕ್ಷೆ ನೀಡಿ, ಜಿಲ್ಲೆಯಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು.
ನ್ಯಾಯವಾದಿ ವಿ ಎನ್ ಪಾಟೀಲ ಮಾತನಾಡಿ, “ದರೋಡೆಕೋರರ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಸಂತೋಷ ಕನ್ನಾಳಿಗೆ ಸೂಕ್ತ ಚಿಕಿತ್ಸೆ ನೀಡಲು ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರು ವಿಫಲರಾಗಿದ್ದು, ಪರಿಸ್ಥಿತಿ ಕೈ ಮೀರಿದ ನಂತರ ಬೆಂಗಳೂರಿಗೆ ಸಾಗ ಹಾಕಿರುವುದು, ವೈದ್ಯರು ತಮ್ಮ ಕರ್ತವ್ಯದಿಂದ ನುಣುಚಿಕೊಂಡಿರುವುದನ್ನು ತೋರಿಸುತ್ತಿದೆ. ಇಲ್ಲಿಯೆ ಸೂಕ್ತ ಚಿಕಿತ್ಸೆ ನೀಡಿದ್ದರೆ ಸಂತೋಷ ಬದುಕುಳಿಯುವ ಸಾಧ್ಯತೆ ಇತ್ತು. ಸದರಿ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಜೊತೆಗೆ ಸರ್ಕಾರದಿಂದ ಪರಿಹಾರ ನೀಡಲು ವಿಳಂಬವಾದರೆ ಸಾರ್ವಜನಿಕರೆಲ್ಲರೂ ಸೇರಿಕೊಂಡು ಸಂಘ ಸಂಸ್ಥೆಗಳ ಮೂಲಕ ದೇಣಿಗೆ ಸಂಗ್ರಹಿಸಿ ಮೃತ ಸಂತೋಷನ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಮುರುಡೇಶ್ವರ ಪವರ್ ಕಂಪೆನಿಯ ₹75 ಲಕ್ಷಕ್ಕೂ ಅಧಿಕ ತೆರಿಗೆ ಬಾಕಿ; ವಸೂಲಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ
ಈ ವೇಳೆ ನ್ಯಾಯವಾದಿಗಳಾದ ಸಿ ಎಮ್ ಅಂಗಡಿ, ಪೊಲೀಸ್ ಸಿದ್ದನಗೌಡ ಪಾಟೀಲ, ಪ್ರವೀಣ ಹುಡೇದಾಳ, ಶಿವಾನಂದ ಬಗಲಿ, ಜಿಲ್ಲಾ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಸಂಗಮೇಶ ಸಗರ, ತನು ಫೌಂಡೇಶನ್ ಅಧ್ಯಕ್ಷ ವಿಜಯಕುಮಾರ ಕಾಳಶೆಟ್ಟಿ, ಯುವ ಮುಖಂಡ ಷಣ್ಮುಖ ರಾಮತೀರ್ಥ, ಸಿದ್ದಾರೂಢ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
