ಅದಾನಿ ಪ್ರಧಾನಿ ಮೋದಿ ಅವರ ಆಪ್ತಮಿತ್ರ. ಮೋದಿ ಅವರು ಟ್ರಂಪ್‌ಗೆ ದೋಸ್ತ. ಹೀಗಾಗಿ, ಈಗ ಅಮೆರಿಕಗೆ ತೆರಳಿರುವ ಮೋದಿ ಅವರು ಅದಾನಿಗಾಗಿ ಟ್ರಂಪ್ ಜೊತೆ ಮಾತುಕತೆ ನಡೆಸಿ, ಅದಾನಿ ಪ್ರಕರಣವನ್ನು ಕೈಬಿಡುವಂತೆ ಲಾಬಿ ಮಾಡುವ ಸಾಧ್ಯತೆ ಇದೆ
ವಿದೇಶಿ ಸರ್ಕಾರಿ ಅಧಿಕಾರಿಗಳಿಗೆ ಅಮೆರಿಕ ಕಂಪನಿಗಳು ಲಂಚ ನೀಡುವುದನ್ನು ನಿರ್ಬಂಧಿಸುವ ಮತ್ತು ಲಂಚ ನೀಡಿದ ಆರೋಪ ಎದುರಿಸುತ್ತಿರುವ ಅಮೆರಿಕನ್ನರ ವಿರುದ್ಧ ಕಾನೂನು ಕ್ರಮ ಜರುಗಿಸುವ ಕಾಯ್ದೆಯನ್ನು ರದ್ದುಗೊಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ. ‘ಫಾರಿನ್ ಕರಪ್ಟ್ ಪ್ರಾಕ್ಟೀಸ್ ಆಕ್ಟ್’ (ವಿದೇಶಿ ಭ್ರಷ್ಟಾಚಾರ ಚಟುವಟಿಕೆ ಕಾಯ್ದೆ – FCPA) ಅನ್ನು ಸ್ಥಗಿತಗೊಳಿಸಲು ಅಮೆರಿಕ ನ್ಯಾಯಾಂಗ ಇಲಾಖೆಗೆ ಟ್ರಂಪ್ ನಿರ್ದೇಶಿಸಿದ್ದಾರೆ. ಕಾಯ್ದೆಯ ಸ್ಥಗಿತವು ಸ್ಪರ್ಧಾತ್ಮಕ ವ್ಯವಹಾರಗಳಲ್ಲಿ ಅಮೆರಿಕಗೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ವರ್ಷಗಳಿಂದ ಅಮೆರಿಕದಲ್ಲಿ ಅಸ್ತಿತ್ವದಲ್ಲಿದ್ದ ಕಾನೂನು ಈ ‘ವಿದೇಶಿ ಭ್ರಷ್ಟಾಚಾರ ಚಟುವಟಿಕೆ ಕಾಯ್ದೆ’. ಇದು ಅಮೆರಿಕದಲ್ಲಿ ನೋಂದಣಿಯಾದ ಅಮೇರಿಕನ್ ಕಂಪನಿಗಳು, ವ್ಯಕ್ತಿಗಳು ಮತ್ತು ವಿದೇಶಿ ಸಂಸ್ಥೆಗಳು ವ್ಯಾಪಾರ ಒಪ್ಪಂದಗಳನ್ನು ಪಡೆಯಲು ವಿದೇಶಿ ಅಧಿಕಾರಿಗಳಿಗೆ ಲಂಚ ನೀಡುವುದನ್ನು ನಿಷೇಧಿಸುತ್ತದೆ. ವಂಚನೆಯನ್ನು ತಡೆಯುವ ಉದ್ದೇಶದಿಂದ ಕಂಪನಿಗಳು ನಿಖರವಾದ ಹಣಕಾಸು ದಾಖಲೆಗಳನ್ನು ಸಹ ಹೊಂದಿರಬೇಕು ಎಂಬುದನ್ನು ಕಡ್ಡಾಯಗೊಳಿಸುತ್ತದೆ. ವಿಶ್ವದಾದ್ಯಂತ ಪ್ರಮುಖ ಕಾರ್ಪೊರೇಟ್ ತನಿಖೆಗಳಿಗೆ ಆಧಾರವೂ ಆಗಿದೆ.
ಈಗಾಗಲೇ, ಈ ಕಾಯ್ದೆಯಡಿ, ಗ್ಲೆನ್‌ಕೋರ್ ಪಿಎಲ್‌ಸಿ ಮತ್ತು ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಸೇರಿದಂತೆ ವಿಶ್ವದಾದ್ಯಂತದ ಬೃಹತ್ ಕಂಪನಿಗಳ ಮೇಲೆ ನೂರಾರು ಕೋಟಿ ಡಾಲರ್ ದಂಡ ವಿಧಿಸಲಾಗಿದೆ. ಆದಾಗ್ಯೂ, ಈ ಕಾಯ್ದೆಗೆ ಟ್ರಂಪ್ ತಡೆಯೊಡ್ಡಿದ್ದಾರೆ.
ಮಾತ್ರವಲ್ಲದೆ, ‘FCPA’ ಅಡಿಯಲ್ಲಿ ನಡೆಯುತ್ತಿದ್ದ ಎಲ್ಲ ತನಿಖೆಗಳು ಮತ್ತು ಜಾರಿಯಲ್ಲಿರುವ ಕ್ರಮಗಳನ್ನು 180 ದಿನಗಳೊಳಗೆ ಪರಿಶೀಲಿಸಲು ಮತ್ತು ನಿಯಂತ್ರಿಸಲು ಅಟಾರ್ನಿ ಜನರಲ್‌ಗೆ ಸೂಚನೆ ನೀಡಲಾಗಿದೆ. ಜೊತೆಗೆ, ವಿದೇಶಿ ಭ್ರಷ್ಟಾಚಾರ ಆರೋಪಗಳನ್ನು ನಿರ್ವಹಿಸಲು ಪರಿಷ್ಕೃತ ಮಾರ್ಗಸೂಚಿಗಳನ್ನು ಶಿಫಾರಸ್ಸು ಮಾಡುವಂತೆಯೂ ಕೇಳಲಾಗಿದೆ. ಈ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಅಧ್ಯಕ್ಷೀಯ ವಿದೇಶಾಂಗ ನೀತಿ ವಿಶೇಷಾಧಿಕಾರವನ್ನು ಸಂರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ಹೇಳಲಾಗಿದೆ.
“ಪ್ರಸ್ತುತ ಅಸ್ತಿತ್ವದಲ್ಲಿ ಕಾನೂನುಗಳು ಅಮೇರಿಕದ ಕಂಪನಿಗಳು ಹೆಚ್ಚಾಗಿ ಸ್ಪರ್ಧಾತ್ಮಕವಾಗಿ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ತೊಡಕಾಗಿವೆ. FCPA ಜಾರಿಯಿಂದ ಅಮೆರಿಕದ ಕಂಪನಿಗಳು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ವಿದೇಶಿ ಕಂಪನಿಗಳು ತೊಡಗಿರುವ ಕಾರ್ಯವಿಧಾನವನ್ನು ಅನುಸರಿಸದಂತೆ ತಡೆಯುತ್ತವೆ. ಹೀಗಾಗಿ, ಅಸಮಾನ ಪೈಪೋಟಿ ನಿರ್ಮಾಣಗೊಂಡು, ಅಮೆರಿಕದ ಕಂಪನಿಗಳು ಹಿಂದುಳಿಯುತ್ತವೆ” ಎಂದು ಟ್ರಂಪ್ ಕಚೇರಿ ಹೇಳಿದೆ.
ಈಗ, ಟ್ರಂಪ್ ಅವರು ‘FCPA’ಗೆ ತಿಲಾಂಜಲಿ ಹಾಡಿರುವುದರಿಂದಾಗಿ, ಯಾವುದೇ ಹೊಸ ತನಿಖೆಗಳನ್ನು ಆರಂಭಿಸಲು ಅವಕಾಶವಿಲ್ಲ. ಹೀಗಾಗಿ, ಇತ್ತೀಚೆಗೆ ಭಾರತದ ಶ್ರೀಮಂತ ಉದ್ಯಮಿ, ಪ್ರಧಾನಿ ಮೋದಿ ಅವರ ಅತ್ಯಾಪ್ತ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಭ್ರಷ್ಟಾಚಾರ ಪ್ರಕರಣಕ್ಕೂ ತಡೆ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.
ಭಾರತದ ಹಲವಾರು ರಾಜ್ಯಗಳಲ್ಲಿ ‘ಸೌರ ವಿದ್ಯುತ್ ಒಪ್ಪಂದ’ಗಳನ್ನು ಪಡೆಯಲು ಅದಾನಿ ಗ್ರೂಪ್ ಭಾರತೀಯ ಅಧಿಕಾರಿಗಳಿಗೆ ಬರೋಬ್ಬರು 2,029 ಕೋಟಿ ರೂ.ಗಳನ್ನು ಲಂಚ ನೀಡಿದೆ. ಒಡಿಶಾ, ತಮಿಳುನಾಡು, ಛತ್ತೀಸ್‌ಗಢ, ಆಂಧ್ರಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸೌರ ವಿದ್ಯುತ್ ಪೂರೈಕೆಗಾಗಿ ಅದಾನಿ ಗ್ರೂಪ್‌ನ ಭಾಗವಾಗಿರುವ ‘ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್’ಗೆ ಗುತ್ತಿಗೆ ಪಡೆಯಲು 2021 ಮತ್ತು 2022ರ ನಡುವೆ ಈ ಭಾರೀ ಮೊತ್ತದ ಲಂಚ ನೀಡಲಾಗಿದೆ. ಲಂಚ ಪ್ರಕರಣದಲ್ಲಿ ಗೌತನ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಹಾಗೂ ಇತರ ಆರು ಮಂದಿ ಭಾಗಿಯಾಗಿದ್ದಾರೆ. ಅಲ್ಲದೆ, ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಲು ಅಮೆರಿಕ ಉದ್ಯಮಗಳಿಗೆ ಸುಳ್ಳು ಹೇಳಿ ಹಣ ಪಡೆಯಲಾಗಿದೆ ಎಂದು ಅಮೆರಿಕದ ಪ್ರಾಸಿಕ್ಯೂಷನ್ ಆರೋಪಿಸಿದೆ. ಅಲ್ಲದೆ, ಈ ಎಂಟು ಮಂದಿ ಆರೋಪಿಗಳ ವಿರುದ್ಧವೂ ವಂಚನೆ ಮತ್ತು ಲಂಚ ಪ್ರಕರಣ ದಾಖಲಿಸಿ, ಪೂರ್ವ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ಅನ್ನೂ ಸಲ್ಲಿಸಲಾಗಿತ್ತು.
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಳಿಯ, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಾಗರ್ ಅದಾನಿ, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಸಿಇಒ ವಿನೀತ್ ಜೈನ್, 2019 ಮತ್ತು 2022ರ ನಡುವೆ ಅಜುರೆ ಪವರ್ ಗ್ಲೋಬಲ್ ಲಿಮಿಟೆಡ್‌ನ ಸಿಇಒ ಆಗಿದ್ದ ರಂಜಿತ್ ಗುಪ್ತಾ, 2022 ಮತ್ತು 2023ರ ನಡುವೆ ಅಜುರೆ ಪವರ್‌ನೊಂದಿಗೆ ಕೆಲಸ ಮಾಡಿದ್ದ ರೂಪೇಶ್ ಅಗರ್ವಾಲ್; ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನ ನಾಗರಿಕರಾದ ಸಿರಿಲ್ ಕ್ಯಾಬನೆಸ್, ಸೌರಭ್ ಅಗರ್ವಾಲ್ ಹಾಗೂ ದೀಪಕ್ ಮಲ್ಹೋತ್ರಾ – ಈ ಮೂವರೂ ಕೆನಡಾ ಮೂಲದವರು – ಅದಾನಿ ಪವರ್‌ನಲ್ಲಿ ಸಾಂಸ್ಥಿಕ ಹೂಡಿಕೆದಾರರೊಂದಿಗೆ ಕೆಲಸ ಮಾಡಿದ್ದವರು. ಇವೆಲ್ಲರೂ ಪ್ರಕರಣದ ಆರೋಪಿಗಳು.
ಅಮೆರಿಕ ಪ್ರಾಸಿಕ್ಯೂಟರ್‌ಗಳ ಪ್ರಕಾರ, ‘ಅದಾನಿ ಗ್ರೀನ್ ಎನರ್ಜಿ ಕಂಪನಿ’ ಮತ್ತು ‘ಯುಎಸ್ ಇಶ್ಯೂಅರ್ಸ್’ ಕಂಪನಿಗಳು ಭಾರತದ ಸರ್ಕಾರಿ ಸ್ವಾಮ್ಯದ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ(SECI)ಗೆ ನಿಗದಿತ ದರದಲ್ಲಿ 8 ಗಿಗಾವ್ಯಾಟ್‌ಗಳು ಮತ್ತು 4 ಗಿಗಾವ್ಯಾಟ್ ಸೌರಶಕ್ತಿ ಪೂರೈಸುವ ಗುತ್ತಿಗೆಯನ್ನು ಪಡೆದಿದ್ದಾರೆ. ಈ ವಿದ್ಯುತ್‌ಅನ್ನು ಸೆಸಿ ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡಬೇಕಿತ್ತು. ಆದರೆ, ಯಾವುದೇ ರಾಜ್ಯವು ವಿದ್ಯುತ್ ಖರೀದಿಗೆ ಮುಂದೆ ಬಾರದ ಕಾರಣ, ಅದಾನಿ ಮತ್ತು ಇತರ ಆರೋಪಿಗಳು ಎಸ್‌ಇಸಿಐನಿಂದ ವಿದ್ಯುತ್ ಖರೀದಿಸುವಂತೆ ಭಾರತದ ವಿವಿಧ ರಾಜ್ಯಗಳ ರಾಜ್ಯ ವಿದ್ಯುತ್ ಕಂಪನಿಗಳನ್ನು ಮನವೊಲಿಸಲು ಮುಂದಾಗಿದ್ದರು. ಅದಕ್ಕಾಗಿ, ಭಾರತೀಯ ಅಧಿಕಾರಿಗಳಿಗೆ ಲಂಚವನ್ನೂ ನೀಡಿದ್ದಾರೆ.
”ಆರೋಪಿಗಳು ಲಂಚ ನೀಡುವ ಮೂಲಕ ಲಾಭದಾಯಕ ಸೌರಶಕ್ತಿ ಪೂರೈಕೆ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಈ ಒಪ್ಪಂದದಿಂದ ಅಂದಾಜು 20 ವರ್ಷಗಳ ಅವಧಿಯಲ್ಲಿ ಸುಮಾರು 17,000 ಕೋಟಿ ರೂ.ಗೂ ಅಧಿಕ ಲಾಭ ಗಳಿಸುವ ನಿರೀಕ್ಷೆಯಿದೆ. ಈ ಒಪ್ಪಂದವನ್ನು ತಾವೇ ಪಡೆದುಕೊಳ್ಳುವುದಕ್ಕಾಗಿ, 2,029 ಕೋಟಿ ರೂ.ಗಳಿಂತಲೂ ಹೆಚ್ಚು ಲಂಚ ನೀಡಲು ಒಪ್ಪಿಕೊಂಡಿದ್ದರು. ಹಲವಾರು ಸಂದರ್ಭಗಳಲ್ಲಿ ಲಂಚ ಕೊಡಲು ಅದಾನಿ ಅವರು ಭಾರತದ ಸರ್ಕಾರಿ ಅಧಿಕಾರಿಗಳನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ಈ ಲಂಚ ಮೊತ್ತವನ್ನು ಸಂಗ್ರಹಿಸಲು ಅಮೆರಿಕದ ಕಂಪನಿಗಳಿಗೆ ಸುಳ್ಳು ಹೇಳಿ, ಹೂಡಿಕೆ ರೂಪದಲ್ಲಿ ಹಣ ಪಡೆದಿದ್ದಾರೆ. ಇದು ಅಮೆರಿಕದ ಕಾನೂನಿನಂತೆ ವಂಚನೆಯಾಗಿದೆ” ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ಆದರೆ, ಈಗ FCP ಕಾಯ್ದೆಯನ್ನು ರದ್ದುಗೊಳಿಸಿ, ಕಾಯ್ದೆ ಅಡಿಯಲ್ಲಿ ನಡೆಯಬೇಕಿದ್ದ ವಿಚಾರಣೆಗಳನ್ನು ಟ್ರಂಪ್ ಸ್ಥಗಿತಗೊಳಿಸಿದ್ದಾರೆ. ಇದರಿಂದ, ಗೌತಮ್ ಅದಾನಿ ವಿರುದ್ಧದ ಪ್ರಕರಣಕ್ಕೂ ತಡೆ ಬಿದ್ದಂತಾಗಿದೆ. ಇದರಿಂದ ಅದಾನಿ ವಿರುದ್ಧದ ತನಿಖೆಗಳು ವಿಳಂಬವಾಗುವ ಅಥವಾ ದುರ್ಬಲಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನೂ ಮುಂದುವರೆದು, ಟ್ರಂಪ್ ಅವರು ಅಮೆರಿಕದಲ್ಲಿ ಅದಾನಿ ವಿರುದ್ಧದ ತನಿಖೆ ಅಥವಾ ಕಾನೂನು ಕ್ರಮ ಜರುಗಿಸುವುದನ್ನು ಖುದ್ದು ತಡೆಯಬಹುದು, ರದ್ದುಗೊಳಿಸಬಹುದು ಎಂದೂ ಹೇಳಲಾಗುತ್ತಿದೆ.
ಈ ವರದಿ ಓದಿದ್ದೀರಾ?: ಭಾರತೀಯ ಅಧಿಕಾರಿಗಳಿಗೆ ಲಂಚ; ಮೋದಿ ಆಪ್ತ ಅದಾನಿ ಬಂಧನಕ್ಕೆ ಅಮೆರಿಕ ವಾರೆಂಟ್ ಯಾಕೆ?
“ನ್ಯೂಯಾರ್ಕ್ ಪ್ರಾಸಿಕ್ಯೂಷನ್ ದಾಖಲಿಸಿರುವ ಮೊಕದ್ದಮೆಯಲ್ಲಿ ಅದಾನಿ ಗ್ರೂಪ್ ವಿರುದ್ಧ ಎಫ್‌ಸಿಪಿಎ ಅಡಿಯಲ್ಲಿ ನೇರವಾಗಿ ಆರೋಪ ಹೊರಿಸಲಾಗಿಲ್ಲ. ಆದರೆ, ಅದಾನಿ ಗ್ರೂಪ್ ಜೊತೆ ಕೈಜೋಡಿಸಿರುವ ಅಮೆರಿಕದ ‘ಅಜೂರ್ ಪವರ್ ಗ್ಲೋಬಲ್’ ಕಂಪನಿ ವಿರುದ್ಧ ನೇರ ಆರೋಪ ಮಾಡಲಾಗಿದೆ. ಹೀಗಾಗಿ, ಅಮೆರಿಕದ ಕಂಪನಿಗಳು ಅಮೆರಿಕದಿಂದ ಹೊರಗೆ ಮತ್ತೊಂದು ವಿದೇಶಿ ಕಂಪನಿಯ ಜೊತೆಗೂಡಿ ಭ್ರಷ್ಟಾಚಾರ ನಡೆಸಿದ್ದರೆ, ಆ ವಿದೇಶಿ ಕಂಪನಿಯ ವಿರುದ್ಧವೂ ಎಫ್‌ಸಿಪಿಎ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ, ಎಫ್‌ಸಿಪಿಎ ಅನ್ನು ರದ್ದುಗೊಳಿಸಿರುವುದರಿಂದ ಅದಾನಿ ಪಾರಾಗಬಹುದು” ಎಂದು ಆರ್ಥಿಕ ತಜ್ಞ ಸುನೀಲ್ ಸುಬ್ರಮಣಿಯಂ ಹೇಳಿದ್ದಾರೆ.
ಹೇಳಿಕೇಳಿ, ಅದಾನಿ ಪ್ರಧಾನಿ ಮೋದಿ ಅವರ ಆಪ್ತಮಿತ್ರ. ಮೋದಿ ಅವರು ಟ್ರಂಪ್‌ಗೆ ದೋಸ್ತ. ಹೀಗಾಗಿ, ಈಗ ಅಮೆರಿಕಗೆ ತೆರಳಿರುವ ಮೋದಿ ಅವರು ಅದಾನಿಗಾಗಿ ಟ್ರಂಪ್ ಜೊತೆ ಮಾತುಕತೆ ನಡೆಸಿ, ಅದಾನಿ ಪ್ರಕರಣವನ್ನು ಕೈಬಿಡುವಂತೆ ಲಾಬಿ ಮಾಡುವ ಸಾಧ್ಯತೆಗಳೇ ಹೆಚ್ಚು ಎಂದು ವಿಶ್ಲೇಷಕರು ಹೇಳುತ್ತಾರೆ.
ಜೊತೆಗೆ, ಎಫ್‌ಸಿಪಿಎಅನ್ನು ಅಮೆರಿಕ ರದ್ದುಗೊಳಿಸಿರುವುದರಿಂದ, ಈಗ ಅದಾನಿ ಪ್ರಕರಣದ ಚೆಂಡು ಭಾರತದ ‘ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ’ ಮತ್ತು ಜಾರಿ ನಿರ್ದೇಶನಾಲಯ (ED) ಗಳ ಅಂಗಳಕ್ಕೆ ಬಂದು ಬಿದ್ದಿದೆ. ಈ ತನಿಖಾ ಏಜೆನ್ಸಿಗಳು ಸೂಕ್ತ ಮತ್ತು ಪ್ರಮಾಣಿಕ ತನಿಖೆಯನ್ನು ನಡೆಸಲು ಮುಂದಾಗಬೇಕು. ಒಂದು ತನಿಖೆ ನಡೆಸದಿದ್ದರೆ, ತನಿಖೆ ನಡೆಸದಂತೆ ಪ್ರಧಾನಿ ಮೋದಿ ಸೂಚಿಸಿದರೆ, ಅದಾನಿ ತಕ್ಷಣದ ಕಾನೂನು ತೊಂದರೆಗಳಿಂದ ನಿರಾಯಾಸವಾಗಿ ತಪ್ಪಿಸಿಕೊಳ್ಳಬಹುದು.
ಸದ್ಯ, ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವು ಈಗಾಗಲೇ ಅದಾನಿಯನ್ನು ಅಮೆರಿಕದ ಕಾನೂನು ತೊಂದರೆಗಳಿಂದ ಭಾಗಶಃ ರಕ್ಷಿಸಿದೆ. ಆದರೆ, ಅಷ್ಟು ಮಾತ್ರಕ್ಕೆ ಪ್ರಕರಣವು ಅಂತರಾಷ್ಟ್ರೀಯ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯುಕೆ, ಯುರೋಪಿಯನ್ ಒಕ್ಕೂಟ ಮತ್ತು ಇತರ ಜಾಗತಿಕ ಮಾರುಕಟ್ಟೆಗಳಲ್ಲಿನ ಹೂಡಿಕೆದಾರರು ಮತ್ತು ವಾಚ್‌ಡಾಗ್‌ಗಳು ಅದಾನಿ ಸಮೂಹದ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಬಹುದಾದ ಸಾಧ್ಯತೆಗಳಿವೆ.