ಮನೆ ಮುಂದೆ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಅಡಿಕೆ ಚೀಲಗಳನ್ನು ಕದ್ದು ತಲೆಮರೆಸಿಕೊಂಡಿದ್ದ ಅಡಿಕೆ ಕಳ್ಳನನ್ನು ಮಾಲು ಸಮೇತ ಬಂಧಿಸುವಲ್ಲಿ ಭದ್ರಾವತಿಯ ಹೊಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆಯನೂರಿನ ಕೋಹಳ್ಳಿ ನಿವಾಸಿ ಸೈಯದ್ ನವೀದ್ (29) ಬಂಧಿತ ಆರೋಪಿ.
ಭದ್ರಾವತಿಯ ಅರಹತೊಳಲು ಗ್ರಾಮದ ಹರ್ಷ ಎನ್ನುವವರು ತಮ್ಮ ಮನೆಯ ಮುಂದೆ ಇಟ್ಟಿದ್ದ ಅಡಿಕೆ ಚೀಲಗಳನ್ನು ಜನವರಿ 26ರಂದು ಯಾರೋ ಕದ್ದಿದ್ದಾರೆ ಎಂದು ಹೊಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಬೆನ್ನಟ್ಟಿದ ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಎಸ್ ಭೂಮರಡ್ಡಿ, ಎ. ಜಿ ಕಾರಿಯಪ್ಪ, ಡಿವೈಎಸ್ಪಿ ನಾಗರಾಜ್ ಕೆ ಆರ್ ಅವರನ್ನೊಳಗೊಂಡ ತನಿಖಾ ತಂಡವು, ಸೈಯದ್ ನವೀದ್ ಎಂಬ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಫೆ.10 ರಂದು ಪುನಃ ಪೊಲೀಸ್ ವಶಕ್ಕೆ ಪಡೆದು, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದಾಖಲಾಗಿದ್ದ ಒಟ್ಟು ನಾಲ್ಕು ಅಡಿಕೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಅಂದಾಜು 5,00,000/- ರೂಗಳ 10 ಕ್ವಿಂಟಾಲ್ ಒಣ ಅಡಿಕೆ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಅಂದಾಜು ಸುಮಾರು 4,00,000/- ರೂಗಳ ಅಮೇಜ್ ಹೋಂಡಾ ಕಾರ್ ಸೇರಿ ಒಟ್ಟು 9,00,000/- ರೂಗಳ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ?: ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಭದ್ರಾವತಿ ಶಾಸಕ ಪುತ್ರನಿಂದ ನಿಂದನೆ!
