ದರ್ಗಾ ಕಮಿಟಿಯ ಆಡಳಿತಾಧಿಕಾರಿಯೂ ಆಗಿರುವ ಬಾಗಲಕೋಟೆ ತಾಲೂಕು ತಹಶೀಲ್ದಾರ್ ಸತೀಶ ಕೂಡಲಗಿ ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದಾಗಿ ಉರೂಸ್ ಆಚರಣೆ ವೇಳೆ ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳಿಲ್ಲದೆ ವ್ಯಾಪಾರಿಗಳು ಹಾಗೂ ಭಕ್ತರು ಪರದಾಡುವಂತಾಯಿತು ಎಂದು ಸೋಶಿಯಲ್ ಡೆಮಾಕ್ರಮಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಲ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಈ ಹಿಂದೆ ಶಾಸಕ ವಿಜಯಾನಂದ ಕಾಶಪ್ಪನವರು ಸಮರ್ಪಕವಾಗಿ ಉರೂಸ್ ನಡೆಸಲು ಅವಕಾಶ ನೀಡದ ದುಷ್ಟಶಕ್ತಿಯನ್ನು ಮಟ್ಟ ಹಾಕುವೆ ಎಂದಿದ್ದರು. ಈ ವರ್ಷ ಕತ್ತಲೆಯಲ್ಲಿ ಉರೂಸ್ ನಡೆಯುವಂತಾಗಿದೆ. ಆಚರಣೆಗೆ ವಿದ್ಯುತ್ ಪೂರೈಕೆ ದುಷ್ಟಶಕ್ತಿ ಯಾವುದು ಎಂದು ಶಾಸಕರು ಸ್ಪಷ್ಟ ಪಡಿಸಬೇಕು. ಉರೂಸ್ ಆಚರಣೆಯ ಮೇಲ್ವಿಚಾರಣೆ ಮಾಡದೇ ಅವ್ಯವಸ್ಥೆಗೆ ಶಾಸಕರೂ ಪರೋಕ್ಷವಾಗಿ ಕಾರಣರಾಗಿದ್ದಾರೆ” ಟೀಕಿಸಿದರು.
“ಉರೂಸ್ ಸಂದರ್ಭದಲ್ಲಿ ಅಂಗಡಿಗಳ ಬಾಡಿಗೆ ಹಾಗೂ ಮೂಲಸೌಕಭ್ಯ ಒದಗಿಸಲು ತಾಲೂಕು ಆಡಳಿತ ಟೆಂಡರ್ ಕರೆದು ಬಳಿಕ ಏಕಾಏಕಿ ರದ್ದುಪಡಿಸಿತು. ದರ್ಗಾ ಕಮಿಟಿಯ ಸಲಹಾ ಸಮಿತಿ ಸದಸ್ಯರಿಗೂ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿ ನಿಯಮ ಉಲ್ಲಂಘನೆ ಮಾಡಿತ್ತು. ಉರೂಸ್ ಆಯೋಜನೆಯಲ್ಲಿ ಕರ್ತವ್ಯ ಲೋಪವೆಸಗಿದ ತಹಸೀಲ್ದಾರ್ ವಿರುದ್ಧ ಹೋರಾಟ ಮಾಡಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಬಾಗಲಕೋಟೆ | ರನ್ನ ವೈಭವಕ್ಕೆ ಒಂದು ಕೋಟಿ ಅನುದಾನ: ಸಚಿವ ತಿಮ್ಮಾಪೂರ
ಈ ವೇಳೆ ಹಬೀಬಿ ಮೊಮೀನ್ ಹಾಗೂ ಎಸ್‌ಡಿಪಿಐ ತಾಲೂಕು ಮುಖಂಡರು ಉಪಸ್ಥಿತರಿದ್ದರು.
